ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಬಡ್ಡಿ ವ್ಯವಹಾರ ಹಾವಳಿ ಹೆಚ್ಚಾಗಿದೆ. ಫೈನಾನ್ಸ್‌ನವರ ಕಾಟಕ್ಕೆ ಭಯಗೊಂಡ ಮಮದ್ ಶಾಹೀದ್ ಮೌಲಾಸಾಬ ಮಿಠಾಯಿಗಾರ (೩೭) ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡರು, ಬಡ್ಡಿ ವ್ಯವಹಾರವನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿದರು. ಗ್ರಾಮದಲ್ಲಿ ಫೈನಾನ್ಸ್‌ನವರ ಹಾವಳಿಗೆ ಅದೆಷ್ಟೋ ಯುವಕರು ಊರು ಬಿಟ್ಟು ಹೋಗಿದ್ದಾರೆ. ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಗ್ರಾಮದಲ್ಲಿ ವಾರದ ಬಡ್ಡಿ, ದಿನದ ಬಡ್ಡಿ ಎಂಬುದು ಬಡವರ ಜೀವ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕು ಎಂದು ಗ್ರಾಮದ ಮಾಬುಲಿ ಸಂಶಿ, ಅಲ್ತಾಫ್ ಬೇಫಾರಿ, ಜಾನು ಯಾದವಾಡ, ಇಮಾಮಹುಸೆನ್ ಕೊಲ್ಲಪೂರ, ಮಹ್ಮದ ಅಲಿ ಸೇರಿದಂತೆ ಮತ್ತಿತರರು ಆಗ್ರಹಿಸಿದರು.ಪತ್ನಿ ಬೀಬಿ ಕುತೇಜಾ ಮಿಠಾಯಿಗಾರ, ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಗಂಡನೇ ಇಲ್ಲ, ಮುಂದೇನು ಮಾಡೋದು ಎಂದು ಗೋಳಾಡಿ, ಫೈನಾನ್ಸ್ ನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಪ-ಸ್ವಲ್ಪ ಇದ್ದ ಹಣ ಬಡ್ಡಿ ಸೇರಿ ಲಕ್ಷಾಂತರ ರೂಪಾಯಿಯಾಗಿದೆ. ದಿನಂಪ್ರತಿ ಫೈನಾನ್ಸ್‌ನವರು ಮನೆಗೆ ಬಂದು ಹೆದರಿಸಿದ್ದರಿಂದ ಭಯಗೊಂಡು ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ತನ್ನ ಗಂಡನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ಕುರಿತು ತಡಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮದ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರಶುರಾಮ ಕಟ್ಟಿಮನಿ ಈ ಕುರಿತು ಪ್ರತಿಕ್ರಿಯಿಸಿ, ಫೈನಾನ್ಸ್‌ನವರ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಸೂಕ್ತ ತನಿಖೆ ಮಾಡಲಾಗುವುದು ಎಂದು ಹೇಳಿದರು.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ದೂರು ಆಲಿಸಿದರು.