ಜೋಯಿಡಾ: ತಾಲೂಕಿನ ರಾಮನಗರದ ಪೊಲೀಸ್ ಠಾಣೆ ಎದುರು ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶುಕ್ರವಾರ ಯತ್ನಿಸಿದ್ದು, ಪೊಲೀಸರ ಸಕಾಲಿಕ ಕ್ರಮದಿಂದ ವ್ಯಕ್ತಿ ಬದುಕಿದ್ದು, ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪೊಲೀಸರ ಕಿರಿಕಿಯಿಂದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾಸ್ಕರ ಬೊಂಡೇಲ್ಕರ ಎಂಬ(28) ವ್ಯಕ್ತಿ ಕುಡಿದು ಬೈಕ್‌ನಲ್ಲಿ ರಾಮನಗರದ ಪೊಲೀಸ್ ಠಾಣೆಗೆ ಬಂದಿದ್ದ. ಆತನಿಗೆ, ನೀನು ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಕಾರಣ ನಿನ್ನ ಮೇಲೆ ಕೇಸ್ ಹಾಕಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಆಗ ಆತ ಸಿಟ್ಟಿನಿಂದ ನಾನು ಕುಡಿದು ಬಂದಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೇ ಪೊಲೀಸರನ್ನೇ ಬೆದರಿಸಿದ್ದಾನೆ. ಪೊಲೀಸರು ವಿಚಾರಿಸುತ್ತಿದ್ದಂತೆ ಪೆಟ್ರೋಲ್ ತಂದು ಠಾಣೆಯ ಮುಂದೆ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಬೆಂಕಿ ನಂದಿಸಿ ಸ್ಥಳೀಯ ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲೇ ಆತನ ಮೈ ಕೈ ಸುಟ್ಟಿದ್ದವು. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ವಿಡಿಯೋ ಮಾಡಿದ ಆರೋಪಿ: ಗಾಯಾಳು ಭಾಸ್ಕರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕರೆದೊಯ್ಯುತ್ತಿದ್ದಾಗ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಈ ಹಿಂದೆ ಜೂಜಾಟದ ಪ್ರಕರಣದಲ್ಲಿ ₹3.60 ಲಕ್ಷ ಹಣವನ್ನು ಪೊಲೀಸರು ಭಾಸ್ಕರನಿಂದ ವಶಪಡಿಸಿಕೊಂಡಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಎಫ್ಐಆರ್‌ನಲ್ಲಿ ಕೇವಲ ₹36 ಸಾವಿರ ಎಂದು ನಮೂದಿಸಿದ್ದರು. ಇದನ್ನು ಭಾಸ್ಕರ ಪ್ರಶ್ನಿಸಿದ್ದ. ಅಲ್ಲದೆ, ಮೇಲಧಿಕಾರಿಗಳ ಗಮನಕ್ಕೆ ತಂದಾಗ ಸಾಕಷ್ಟು ಕಿರಿಕಿರಿ ಮಾಡಿದ್ದರು ಎಂದು ವಿಡಿಯೋದಲ್ಲಿ ಹೇಳಿದ್ದಾನೆ.ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ವಶ
ಸಿದ್ದಾಪುರ: ಯಾವುದೇ ಪರವಾನಗಿ ಇಲ್ಲದೇ, ವಧೆ ಮಾಡುವ ಉದ್ದೇಶದಿಂದ ಟಾಟಾ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೬ ಹೋರಿಗಳ ಸಮೇತ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಜೂ. ೧೪ರ ಬೆಳಗಿನ ಜಾವ ಮಾವಿನಗುಂಡಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಜರುಗಿದೆ. ಶಿಕಾರಿಪುರ ತಾಲೂಕಿನ ಆರೋಪಿತರಾದ ಅಸೀಪ್, ದೇವರಾಜ್, ಮಧುಕೇಶ್, ಮಂಜುನಾಥ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.