ದಣಿವರಿಯದ ಕಾಯಕಯೋಗಿ ಡಾ.ಎಸ್.ಬಿ.ದಂಡಿನ

KannadaprabhaNewsNetwork |  
Published : Jul 04, 2024, 01:02 AM IST
ಉದ್ಘಾಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಡಾ.ಎಸ್.ಬಿ.ದಂಡಿನ ಅವರು ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಮತ್ತು ಅದ್ಭುತ ದಾಖಲೆ. ನೂರಾರು ಸಂಕಷ್ಟಗಳನ್ನು ಎದುರಿಸಿ ಕಟ್ಟಿ ಬೆಳೆಸಿದ ಬಾಗಲಕೋಟೆ ತೋಟಗಾರಿಕೆಯ ವಿಶ್ವವಿದ್ಯಾಲಯ ಇಂದು ನಮಗೆ ಸಾಕ್ಷಿಯಾಗಿದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನಮಠದ ಮ.ನಿ.ಪ್ರ.ಗುರುಮಹಾಂತ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಡಾ.ಎಸ್.ಬಿ.ದಂಡಿನ ಅವರು ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಮತ್ತು ಅದ್ಭುತ ದಾಖಲೆ. ನೂರಾರು ಸಂಕಷ್ಟಗಳನ್ನು ಎದುರಿಸಿ ಕಟ್ಟಿ ಬೆಳೆಸಿದ ಬಾಗಲಕೋಟೆ ತೋಟಗಾರಿಕೆಯ ವಿಶ್ವವಿದ್ಯಾಲಯ ಇಂದು ನಮಗೆ ಸಾಕ್ಷಿಯಾಗಿದೆ ಎಂದು ಚಿತ್ತರಗಿ-ಇಳಕಲ್ಲ ಸಂಸ್ಥಾನಮಠದ ಮ.ನಿ.ಪ್ರ.ಗುರುಮಹಾಂತ ಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಡಾ.ಎಸ್.ಬಿ.ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿದರು. ಕೃಷಿ ಕುಟುಂಬದಿಂದ ಬಂದ ಡಾ.ಎಸ್.ಬಿ.ದಂಡಿನ ಸತತ ಪರಿಶ್ರಮದಿಂದ ಎತ್ತರಕ್ಕೆ ಬೆಳೆದು ಸಾಕಷ್ಟು ಅಭಿಮಾನಿಗಳು ಮತ್ತು ಸ್ನೇಹಿತರನ್ನು ಗಳಿಸಿದ್ದಾರೆ ಎಂದರು.

ಮಾಜಿ ಮಂತ್ರಿ ಎ.ಬಿ.ಪಾಟೀಲ ಮತ್ತು ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರಣ್ಣ ಚರಂತಿಮಠ ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ಪ್ರಥಮ ಮತ್ತು ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ.ದಂಡಿನ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಮತ್ತು ಅಭಿಮಾನದಿಂದ ಶ್ಲಾಘಿಸಿದರು. ಅವರು ಸಂಸ್ಥೆಗಳನ್ನು ಬೆಳೆಸುವ ಪರಿ ಮತ್ತು ರೈತರು ಹಾಗೂ ವಿದ್ಯಾರ್ಥಿಗಳ ಬಗ್ಗೆ ವಹಿಸುತ್ತಿದ ಕಾಳಜಿಯ ಬಗ್ಗೆ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಅಧಿಕ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು, ಅಧಿಕಾರಿಗಳು ಮತ್ತು ರೈತರು ಪಾಲ್ಗೊಂಡು ಅವರನ್ನು ಹತ್ತಾರು ಫಲಗಳಿಂದ ಅವರಿಗೆ ತುಲಾಭಾರ ಮಾಡಿ ಗೌರವಿಸಿದರು. ರೇಷ್ಮೆ ಇಲಾಖೆಯ ಸ್ನೇಹಿತರು ಮತ್ತು ಅಭಿಮಾನಿಗಳು ಅವರನ್ನು ಸತ್ಕರಿಸಿ ಭಾರತದ ರೇಷ್ಮೆ ಮನುಷ್ಯ ಎಂದು ಅವರ ಸಾಧನೆಯನ್ನು ಹೆಮ್ಮೆಯಿಂದ ಶ್ಲಾಘಿಸಿದರು.

ತೋಟಗಾರಿಕೆ,ರೇಷ್ಮೆ, ಕೃಷಿ, ಸಾಮಾಜಿಕ ಮತ್ತು ಅನ್ವಯಿಕ ವಿಜ್ಞಾನಗಳ ವಿಭಾಗಗಳಲ್ಲಿ ಶಿಕ್ಷಣ ಮತ್ತು ಸಂಶೋಧನೆಯ ಪ್ರಸರಣ, ವೈಜ್ಞಾನಿಕ, ತಾಂತ್ರಿಕ ವಿಷಯಗಳ ಚರ್ಚೆ, ಜ್ಞಾನ ಪ್ರಸಾರ, ವಿಚಾರ ಸಂಕಿರಣಗಳು ಮುಂತಾದ ಧ್ಯೇಯಗಳನ್ನೊಳಗೊಂಡು ಡಾ.ಎಸ್.ಬಿ. ದಂಡಿನ ಅವರ ರೈತಪರ ಸಮಾಜಮುಖಿ ಮತ್ತು ವೈಜ್ಞಾನಿಕ ಕಾರ್ಯ ವಿಸ್ತರಿಸಲು ಡಾ.ಎಸ್.ಬಿ.ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಸಂಸ್ಥೆ ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ಅನೇಕ ನಿವೃತ್ತ ಮತ್ತು ಕುಲಪತಿಗಳಾದ ಡಾ.ಶೀಲವಂತರ, ಡಾ.ಕೆ.ಎನ್.ಕಟ್ಟಿಮನಿ, ಡಾ.ಹೊಸಮನಿ, ಡಾ.ಆರ್.ಆರ್. ಹಂಚಿನಾಳ, ಡಾ.ಪಿ.ಎಲ್.ಪಾಟೀಲ, ಡಾ.ಅಶೋಕ ಆಲೂರ ಹಾಗೂ ಡಾ.ತಾರಾನಾಥ ಪಾಲ್ಗೊಂಡು ಡಾ.ದಂಡಿನ ಅವರ ಸಾಧನೆಯ ಗರಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ಅಧ್ಯಕ್ಷೀಯ ಸಮಾರೋಪ ಭಾಷಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಅವರು ಡಾ.ಎಸ್.ಬಿ.ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಟಿ.ಬಿ.ಅಲ್ಲೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶೇಷಾಧಿಕಾರಿ ಡಾ.ಆನಂದ ಮಾಸ್ತಿಹೊಳಿ ಪ್ರತಿಷ್ಠಾನದ ಬಗ್ಗೆ ವಿವರಿಸಿದರು. ಮಲ್ಲಿಗವಾಡ ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌