ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ 600 ಅನ್ನದಾತರು । ಕಾನೂನುಬಾಹಿರವಾಗಿ ಭೂ ಮಂಜೂರಾತಿ: ಆರೋಪ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
50 ರಿಂದ 60 ವರ್ಷಗಳ ಹಿಂದಿನಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿನ ಹಕ್ಕುಪತ್ರವನ್ನು ದಿಢೀರನೇ ರದ್ದುಪಡಿಸುವಂತೆ ಕೋರಿ ಅರಣ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣ 600ಕ್ಕೂ ಹೆಚ್ಚು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.ಶಿವಮೊಗ್ಗ ತಾಲೂಕಿನ ಕಡೇಕಲ್, ಉಂಬಳೇಬೈಲು ಪಂಚಾಯಿತಿ, ಲಕ್ಕಿನಕೊಪ್ಪ (ಕೊರಲಹಳ್ಳಿ), ಹಾಲಕ್ಕವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 600ಕ್ಕೂ ಹೆಚ್ಚು ರೈತರು ಹಲವು ವರ್ಷಗಳಿಂದ ತಮ್ಮ ಜಮೀನಿಗೆ ಹಕ್ಕುಪತ್ರ ಪಡೆದು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಈಗ ರೈತರು ಕಾನೂನುಬಾಹಿರವಾಗಿ ಭೂ ಮಂಜೂರಾತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಪಾಧಿಸಿ ಕಂದಾಯ ಇಲಾಖೆ ಕೊಟ್ಟಿರುವ ಹಕ್ಕುಪತ್ರಗಳನ್ನು ವಜಾ ಮಾಡಿ ಎಂದು ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದೆ. ಹೀಗಾಗಿ ಹಲವು ರೈತರಲ್ಲಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.
ಚುನಾವಣೆಗೂ ಮುನ್ನಮಂತ್ರಿಗಳು ಶಿವಮೊಗ್ಗಕ್ಕೆ ಬಂದಾಗ ಇದನ್ನು ತಕ್ಷಣ ಸರಿಪಡಿಸುತ್ತೇವೆ ಎಂದವರು ಇದೂವರೆಗೂ ಸರಿಪಡಿಸಿಲ್ಲ. ಹೀಗಾಗಿ ಶರಾವತಿ, ಭದ್ರ, ತುಂಗಾ, ಚಕ್ರ, ಸಾವೆಹಕ್ಲು, ಅಂಬ್ಲಿಗೊಳ ಮುಳುಗಡೆ ಸಂತ್ರಸ್ತರಿಗೆ ಜಮೀನು ನೀಡಿರುವ ಮಾಲೀಕರಿಗೂ ನೋಟಿಸ್ ನೀಡಿದೆ. 1972ರಿಂದ ದೇವರಾಜು ಅರಸುರವರು ಕೊಟ್ಟ ದರಖಾಸ್ತು ಜಮೀನು ಮಂಜೂರಾತಿ, ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಬಗರ್‌ಹುಕುಂ ಕಾಯ್ದೆ ಅನ್ವಯ ಕೊಟ್ಟು ಹಕ್ಕು ಪತ್ರಗಳನ್ನು ವಜಾ ಮಾಡಲು ನೋಟಿಸ್ ನೀಡಿದೆ.
1959 ರಿಂದಲೂ ನಾವು ಸಾಗುವಳಿ ಮಾಡಿಕೊಂಡಿಕೊಂಡು ಬಂದಿದ್ದೇವೆ. ಅವರು ನೋಟಿಸ್ ನೀಡಿರುವ ಜಾಗ ಮುಳುಗಡೆ ಸಂಸ್ಥರಿಗೆ ನೀಡಿರುವ ಜಾಗ. ನಮಗೆ ಆದೇಶ ಮಾಡಿರುವ ದಾಖಲೆಗಳು, ಈ ಜಾಗದ ಹಕ್ಕುಪತ್ರ, ಪಹಣಿ ಎಲ್ಲ ದಾಖಲೆಗಳು ಇವೆ. ಈಗ ಈ ಜಾಗ ನಮ್ಮದು ಬಿಟ್ಟುಕೊಡಿ ಎಂದು ಅರಣ್ಯ ಇಲಾಖೆಯವರು ನೋಟಿಸ್ ನೀಡುತ್ತಿದ್ದಾರೆ. 1905ರಲ್ಲಿ ಸರ್ಕಾರ ನೀಡಿದ್ದ ನಿರ್ದೇಶನದ ಪತ್ರವನ್ನು ಇಟ್ಟುಕೊಂಡು ಇದು ನಮ್ಮ ಜಾಗ ಎನ್ನುತ್ತಿದ್ದಾರೆ. ಆದರೆ, ಅದರಲ್ಲಿ ಇಷ್ಟು ಎಕರೆ ಅಂತ ಎಲ್ಲೂ ನಮೂದಾಗಿಲ್ಲ. ಕೇವಲ ಸರ್ವೆ ನಂಬರ್ ಇಟ್ಟುಕೊಂಡು ಇದು ನಮ್ಮ ಜಾಗ ಎನ್ನುತ್ತಿದ್ದಾರೆ.
ಡಿಸಿ ಅವರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸಾವಿರಾರು ಮುಳುಗಡೆ ಸಂತ್ರಸ್ತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೇವಲ ಸರ್ವೆ ನಂಬರ್ ಇಟ್ಟುಕೊಂಡು ಇದು ನಮ್ಮ ಜಾಗ ಎಂದರೆ ಆಗಲ್ಲ. ಎಷ್ಟು ಎಕರೆ ಎಂದು ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಅಧಿಕಾರಿಗಳು ತಿಳಿಸಬೇಕು. ಈ ಪ್ರಕರಣ ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಮಧ್ಯೆ ಪ್ರವೇಶ ಮಾಡಿ ರೈತರ ಪರ ನಿಲ್ಲಬೇಕು.