ಧಾರವಾಡ:
ಪರಿಸರ ಸ್ನೇಹಿ ಗಣಪತಿ ಆಚರಿಸಲು ಈ ವರ್ಷದಿಂದ ಪಿಒಪಿ ಗಣೇಶ ವಿಗ್ರಹ ಸಂಪೂರ್ಣ ನಿಷೇಧಿಸಬೇಕೆಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಕಾರ್ಯಾಧ್ಯಕ್ಷ ವಸಂತ ಅರ್ಕಾಚಾರ್ ಹೇಳಿದರು.ಶಹರದ ಕಾಮನಕಟ್ಟಿಯ ಮೌನೇಶ್ವರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ಇನ್ನೆರಡು ತಿಂಗಳಲ್ಲಿ ಗಣೇಶ ಚತುರ್ಥಿ ಬರಲಿದ್ದು, ಮೂರ್ತಿ ತಯಾರಿ, ಹಬ್ಬದ ಸಿದ್ಧತೆ ಈಗಿನಿಂದಲೇ ನಡೆಯುತ್ತದೆ. ಹೊರ ರಾಜ್ಯಗಳಿಂದ ಪಿಒಪಿ ಗಣೇಶ ವಿಗ್ರಹಗಳು ಬರುವ ನಿರೀಕ್ಷೆ ಇದೆ. ಈಗಿನಿದಂಲೇ ಜಿಲ್ಲಾಡಳಿತ ಪಿಒಪಿ ಮೂರ್ತಿಗಳನ್ನು ಕಡ್ಡಾಯವಾಗಿ ನಿಷೇಧಿಸಿದರೆ ಮಾತ್ರ ಸಾಂಪ್ರದಾಯಿಕ ಮಣ್ಣು ಗಣೇಶ ಮೂರ್ತಿ ಕಲಾವಿದರು ಉಳಿಯುತ್ತಾರೆ. ಪಿಒಪಿ ಮೂರ್ತಿಗಳ ಮಾರಾಟದಿಂದ ಸ್ಥಳೀಯ ಕಲಾವಿದರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ಹಲವು ವರ್ಷಗಳಿಂದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಈ ಬಾರಿ ಜಿಲ್ಲಾಡಳಿತ, ಪರಿಸರ ಮಾಲಿನ್ಯ ಸಮಿತಿ, ಮಹಾನಗರ ಪಾಲಿಕೆ, ಹೆಸ್ಕಾಂ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪಿಒಪಿ ಗಣೇಶ ವಿಗ್ರಹ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ದಿನೇಶ್ ನಾಯ್ಕ ಮಾತನಾಡಿ, ಈಗಾಗಲೇ ಸರ್ಕಾರ ಪಿಒಪಿ ವಿಗ್ರಹ ತಡೆಯಲು ರೂಪುರೇಷೆ ತಯಾರಿಸಿದೆ. ಮಾರಾಟ ಮತ್ತು ತಯಾರಿಕೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ಪರಿಸರ ಅಭಿಯಂತರರಾದ ನಯನ ಕೆ.ಎಸ್, ಈ ಬಾರಿಯೂ ಮೂರ್ತಿ ಪ್ರತಿಷ್ಠಾಪನೆಯ ಪರವಾನಗಿಗೆ ಸಿಂಗಲ್ ವಿಂಡೋ ವ್ಯವಸ್ಥೆ ಕಲ್ಪಿಸಲಾಗುವುದು. ಪಿಒಪಿ ವಿಗ್ರಹ ಮಾರಾಟಗಾರ ಮಾಹಿತಿ ಲಭ್ಯವಾದ ಕೂಡಲೇ ಪಾಲಿಕೆಯ ವ್ಯಾಪ್ತಿಯಲ್ಲಿ ಮಾರಾಟ ತಡೆಗಟ್ಟಲು ಕ್ರಮಕೈಗೊಳ್ಳಲಾಗುವುದು ಎಂದರು.ಮಹಾಮಂಡಳದ ರಾಜ್ಯ ಕಾರ್ಯದರ್ಶಿ ಮುತ್ತಣ್ಣ ಭರಡಿ, ಪಿಒಪಿ ಮೂರ್ತಿ ಪೂಜೆ ಮಾಡದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜತೆಗೆ ರಾಜ್ಯ ಸರ್ಕಾರ ಪಿಒಪಿ ಗಣೇಶ ವಿಗ್ರಹ ತಡೆಯಲು ಸಹಾಯವಾಣಿ ತೆರೆಯಬೇಕು. ಇದರಿಂದಾಗಿ ಸಾರ್ವಜನಿಕರು ಕರೆ ಮಾಡಿ ಮಾರಾಟಗಾರರ ಬಗ್ಗೆ ಮಾಹಿತಿ ತಿಳಿಸಬಹುದು ಎಂದರು. ಸಭೆಯಲ್ಲಿ ಅಧಿಕಾರಿ ಸರೋಜ ಪೂಜಾರ, ಪಾಲಿಕೆ ಸದಸ್ಯ ಶಂಕರ ಶೆಳಕೆ, ರಂಗ ಪರಿಸರ ಅಧ್ಯಕ್ಷ ವಿಠಲ್ ಕೊಪ್ಪದ, ಹಿರಿಯ ಕಲಾವಿದ ಕಾಳಪ್ಪ ಬಡಿಗೇರ ಇದ್ದರು. ಮಂಜು ಬಡಿಗೇರ ವಂದಿಸಿದರು. ಜಿಲ್ಲಾಧ್ಯಕ್ಷ ಪ್ರಕಾಶ ಬಡಿಗೇರ ಇದ್ದರು.