ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರುಸಾಲಿಗ್ರಾಮ ತಾಲೂಕು ಚಿಬುಕಹಳ್ಳಿಯ ಸಿ.ಬಿ.ಸಂಪತ್ ಅವರು ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು, ಶುಂಠಿಯ ಜೊತೆಗೆ ಸಾಂಪ್ರದಾಯಿಕ ಬೆಳೆಗಳಾದ ರಾಗಿ, ತರಕಾರಿ, ದ್ವಿದಳ ಧಾನ್ಯ ಬೆಳೆಯುತ್ತಾ ವಾರ್ಷಿಕ 12 ರಿಂದ 15 ಲಕ್ಷ ರು.ವರೆಗೆ ಸಂಪಾದಿಸುತ್ತಿದ್ದಾರೆ.
ಇವರಿಗೆ ಐದು ಎಕರೆ ಜಮೀನು, ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಎರಡು ಎಕರೆಯಲ್ಲಿ ತೆಂಗಿನ ತೋಟ ಇದೆ. ಒಂದು ಎಕರೆಯಲ್ಲಿ ಶುಂಠಿ ಬೆಳೆದಿದ್ದಾರೆ. ಶುಂಠಿಯಿಂದ ವಾರ್ಷಿಕ 2 ರಿಂದ 3 ಲಕ್ಷ, ತೋಟಗಾರಿಕೆ ಬೆಳೆಗಳಿಂದ 2 ಲಕ್ಷ ರು. ಆದಾಯವಿದೆ. ಗುತ್ತಿಗೆಗೆ ಪಡೆದಿರುವ ಎರಡೂವರೆ ಎಕರೆ ಜಮೀನಿನಲ್ಲಿ ಹೊಗೆಸೊಪ್ಪು ಬೆಳೆದಿದ್ದು, ಅದರಿಂದ ವಾರ್ಷಿಕ 8 ರಿಂದ 10 ಲಕ್ಷ ರು. ಆದಾಯವಿದೆ. ಅಲ್ಲಿ ಕೂಡ ಒಂದು ಕೊಳವೆ ಬಾವಿ ಇದೆ. ಹೊಗೆಸೊಪ್ಪನ್ನು ಕಂಪ್ಲಾಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಕಳೆದ ಸಾಲಿನಲ್ಲಿ ಸುಮಾರು 4000 ಕೆಜಿ ಇಳುವರಿ ಬಂದಿತ್ತು. ಶುಂಠಿಯನ್ನು ಜಮೀನಿನ ಬಳಿಯೇ ಖರೀದಿಸುತ್ತಾರೆ. ರಾಗಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾರಾಟ ಮಾಡುತ್ತಾರೆ.ಇವರು ಹೈನುಗಾರಿಕೆಯನ್ನು ಉಪ ಕಸಬಾಗಿಸಿಕೊಂಡಿದ್ದಾರೆ. ನರೇಗಾ ಯೋಜನೆಯಡಿ ಸಹಾಯಧನ ಪಡೆದು, ಹಸುಗಳ ಸಾಕಾಣಿಕೆ ಕೊಟ್ಟಿಗೆ ನಿರ್ಮಿಸಿದ್ದಾರೆ.
ಮೂರು ಇಲಾತಿ ಹಸುಗಳಿದ್ದು, ನಿತ್ಯ ಡೇರಿಗೆ 25 ಲೀಟರ್ ಹಾಲು ಪೂರೈಸುತ್ತಾರೆ. ತಂಬಾಕು ಹಾಗೂ ಶುಂಠಿ ಕೊಯ್ಲಿನ ನಂತರ ತರಕಾರಿ, ಕಡಲೆ, ಹೆಸರು, ರಾಗಿ ಮತ್ತಿತರ ಬೆಳೆ ಬೆಳೆಯುತ್ತಾರೆ. ಇದರಿಂದಲೂ 1.50 ಲಕ್ಷ ರು.ವರೆಗೆ ಆದಾಯವಿದೆ.ಹೋರಿಗಳ ಸಾಕಾಣಿಕೆ ಇವರ ಫ್ಯಾಷನ್. ಹೋರಿಗಳ ಮಾರಾಟದಿಂದಲೂ ವಾರ್ಷಿಕ 50 ರಿಂದ 70 ಸಾವಿರ ರು. ಆದಾಯ ಗಳಿಸುತ್ತಾರೆ.
ಒಟ್ಟಾರೆ ಖರ್ಚು- ವೆಚ್ಚ ಕಳೆದು ವಾರ್ಷಿಕ ಏಳೆಂಟು ಲಕ್ಷ ರು. ನಿವ್ವಳ ಆದಾಯ ಪಡೆಯುತ್ತಿದ್ದಾರೆ.ಕೃಷಿ ಇಲಾಖೆಯ ಸಹಾಯಧನ ಪಡೆದು ಬಹು ವರ್ಷಗ ಹಿಂದೆಯೇ ಕೃಷಿ ಹೊಂಡ ನಿರ್ಮಿಸಿದ್ದಾರೆ. ಮಣ್ಣು ಫಲವತ್ತತೆ ಚೆನ್ನಾಗಿದೆ. ವಾಣಿಜ್ಯ ಬೆಳೆ ಹೊರತುಪಡಿಸಿ ಬಹುತೇಕ ಕೊಟ್ಟಿಗೆ ಗೊಬ್ಬರವನ್ನೇ ಬಳಕೆ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ರೇಷ್ಮೆ ಬೆಳೆಯತ್ತ ಗಮನ ಹರಿಸುವ ಉದ್ದೇಶವಿದೆ. ಸಂಪತ್ ಅವರಿಗೆ ತಂದೆ ಯಜಮಾನ್ ಬೀರೇಗೌಡ ಹಾಗೂ ಸಹೋದರ, ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಮಾಲೋಚಕ ಪ್ರದೀಪ್ ಸಾಥ್ ನೀಡುತ್ತಿದ್ದಾರೆ. ಬೀರೇಗೌಡರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಗ್ರಾಮದ ಡೇರಿಗೆ ಅತಿ ಹೆಚ್ಚು ಹಾಲು ಪೂರೈಸಿದ್ದಕಾಗಿ ಬಹುಮಾನವನ್ನು ಪಡೆದಿದ್ದಾರೆ.ಸಂಪರ್ಕ ವಿಳಾಸಃ
ಸಿ.ಬಿ. ಸಂಪತ್ ಬಿನ್ ಯಜಮಾನ್ ಬೀರೇಗೌಡಚಿಬುಕಹಳ್ಳಿ
ಸಾಲಿಗ್ರಾಮ ತಾಲೂಕುಮೈಸೂರು ಜಿಲ್ಲೆ
ಮೊ.78924 81473ಬೇರೆ ಕಡೆಯಿಂದ ಬಡ್ಡಿಗೆ ಸಾಲ ತರೋದು, ಲೇವಾದೇವಿ ಮಾಡಬಹುದು. ಆದರೆ, ಕೃಷಿ ಕಷ್ಟ. ಸ್ವತಃ ಮನೆಯಲ್ಲಿ ಸ್ವಲ್ಪ ಹಣ ಇಟ್ಟುಕೊಂಡು ಸರಿಯಾಗಿ ಹಣಕಾಸು ನಿರ್ವಹಣೆ ಮಾಡಿಕೊಂಡು, ಯೋಜನಾಬದ್ಧವಾಗಿ ಮಾಡಿದರೆ ಕೃಷಿ ಕಷ್ಟವಾಗಲ್ಲ. ರೈತರು ಒಂದೇ ಬೆಳೆಗೆ ಜೋತು ಬೀಳದೇ ಸಮಗ್ರ ಕೃಷಿ ಮಾಡಬೇಕು. ಆಗ ಒಂದಲ್ಲ ಒಂದು ಬೆಳೆಯಿಂದ ಹಣ ಬರುತ್ತದೆ.
- ಪ್ರದೀಪ್, ಚಿಬುಕಹಳ್ಳಿ