ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ೫ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಶನಿವಾರ ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ ೧೦ ಗಂಟೆಗೆ ಉದ್ಘಾಟಿಸುವರು. ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿಡಿಯೋ ಸಂವಾದದ ಮೂಲಕ ನಡೆದ ಸಭೆಯಲ್ಲಿ ಮಾತನಾಡಿ,ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಜಿಲ್ಲೆಯ ಫಲಾನುಭವಿಗಳು ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದು, ಎಲ್ಲ ಫಲಾನುಭವಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡುವುದರ ಜತೆಗೆ ರೂಟ್ ಮ್ಯಾಪ್ ನಿಗದಿಪಡಿಸಲಾಗಿದೆ ಎಂದರು.
ಸಮಾವೇಶಕ್ಕೆ ಆಗಮಿಸುವ ಎಲ್ಲ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಭೋಜನದ ವ್ಯವಸ್ಥೆ ಮಾಡಿದ್ದು, ಎಲ್ಲ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು, ಪುನಃ ಅವರ ಸ್ಥಳಗಳಿಗೆ ಬಿಡಲು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.ಕಾರ್ಯಕ್ರಮದ ಸ್ಥಳದಲ್ಲಿ ಸೂಕ್ತ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ವಿದ್ಯುತ್, ಧ್ವನಿವರ್ಧಕ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ ಮತ್ತು ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳ ಆಯ್ದ ಫಲಾನುಭವಿಗಳಿಂದ ಯೋಜನೆಗಳ ಕುರಿತಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸುವಿಕೆ ಹಾಗೂ ವಿವಿಧ ಯೋಜನೆಯ ಸವಲತ್ತುಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸಮಾವೇಶದ ಯಶಸ್ವಿಗೆ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿರುವ ಎಲ್ಲ ಸಮಿತಿಗಳು, ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳಾಗದಂತೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. 10 ಸಾವಿರ ಜನರಿಗೆ ಕುಳಿತುಕೊಳ್ಳು ಆಸನ: ನಗರದ ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಮಾ. 16ರಂದು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶ ನಡೆಯಲಿದ್ದು, 10 ಸಾವಿರ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಭವ್ಯವಾದ ವೇದಿಕೆ ನಿರ್ಮಾಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಬಿಂಬಿಸುವ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಭೂಜನದ ವ್ಯವಸ್ಥೆ ಕೂಡಾ ಇದೆ.ಭದ್ರತಾ ವ್ಯವಸ್ಥೆ: ಕಾರವಾರದಲ್ಲಿ ನಡೆಯುವ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶಕ್ಕೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೂಕ್ತ ಪೊಲೀಸ್ ಅಧಿಕಾರಿಗಳನ್ನು, ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.