ಕನ್ನಡಪ್ರಭ ವಾರ್ತೆ ರಾಯಚೂರು
ಮಾ.14 ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಜೊತೆಗೆ ಜಿಲ್ಲೆ ವಿವಿಧ ಇಲಾಖೆಗಳ ಅಭಿವೃದ್ಧಿಗಾಗಿ ಕೈಗೊಂಡ ಸಾವಿರಾರು ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆ ಸಚಿವರು ನೆರವೇರಿಸಲಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.ಸ್ಥಳೀಯ ಹಳೆ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ರಾಯಚೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 90 ಕೋಟಿ 90 ಲಕ್ಷ ರು. ಹಣ ಸಂದಾಯ ಮಾಡಲಾಗಿದೆ. ಶಕ್ತಿ ಯೋಜನೆಯಡಿ 3,24,730 ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸಿದ್ದು, ಸುಮಾರು 119 ಕೋಟಿ ರು. ಸಾರಿಗೆ ಇಲಾಖೆಗೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 141 ಕೋಟಿ 13 ಲಕ್ಷ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಬದಲು ಹಣ ನೀಡಲಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯಡಿ 22 ಲಕ್ಷ 54 ಸಾವಿರ 880 ಮಹಿಳೆಯರಿಗೆ ತಲಾ 2 ಸಾವಿರದಂತೆ 450 ಕೋಟಿ 97 ಲಕ್ಷ 40 ಸಾವಿರ ರು. ಜಮಾ ಮಾಡಲಾಗಿದೆ. ಇನ್ನು ಯುವನಿಧಿಯಡಿ 2,325 ನಿರುದ್ಯೋಗಿಗಳ ನೋಂದಣಿಯಾಗಿದ್ದು 1 ಕೋಟಿ 34 ಲಕ್ಷ 73 ಸಾವಿರ ಹಣ ಸಂದಾಯ ಮಾಡಲಾಗಿದೆ ಎಂದರು.
ಜಿಲ್ಲೆಯ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಕೃಷ್ಣಾ ನದಿಯಿಂದ ಕಾಲುವೆ ಮುಖಾಂತರ ಬಂಗಾರಪ್ಪ ಕೆರೆಗೆ 211.53 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಲಿಂಕ್ ಕೆನಾಲ್‌ನ ಉದ್ಘಾಟನೆ, ರಾಯಚೂರು ನಗರ, ಗ್ರಾಮೀಣ ಮತ್ತು ಮಾನ್ವಿ ಕ್ಷೇತ್ರ ವ್ಯಾಪ್ತಿಯಲ್ಲಿ 108 ಕೋಟಿ ವೆಚ್ಚದಲ್ಲಿ ಕೆರೆಗಳ ಭರ್ತಿ ಕಾಮಗಾರಿಗೆ ಸೇರಿದಂತೆ ಜಿಲ್ಲೆಯಾದ್ಯಂತ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕೆಲಸ-ಕಾಮಗಾರಿಗಳಿಗೆ ಸಿಎಂ-ಡಿಸಿಎಂ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.ಇಷ್ಟು ದಿನ ಯಾಕೆ ಸಿಎಎ ಜಾರಿಗೊಳಿಸಲಿಲ್ಲ: ಚುನಾವಣೆ ಸಮೀಪದಲ್ಲಿ ಸಿಎಎ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಮೋದಿಯವರು ಇಷ್ಟು ದಿನ ಯಾಕೆ ಸುಮ್ಮನಿದ್ದರು. ಅವರು ಏನೆ ಮಾಡಿದರೂ ಅದು ಅಧಿಕಾರಕ್ಕಾಗಿಯೇ ಹೊರತು ಅಭಿವೃದ್ಧಿಗಾಗಿ ಅಲ್ಲ ಎಂದು ಬೋಸರಾಜು ವಾಗ್ದಾಳಿ ನಡೆಸಿದರು.ಸಂವಿಧಾನ ಬದಲಿಸುವ ಹೇಳಿಕೆಗಳನ್ನು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಪದೇ ಪದೆ ನೀಡುತ್ತಿದ್ದರು, ಮೋದಿ ಯಾಕೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ಸಂವಿಧಾನ ಬದಲಾವಣೆಯಾದರೆ ದೇಶದಲ್ಲಿ ಏನಾಗುತ್ತಿತ್ತು ಎಂಬುದನ್ನು ಸಿಎಂ ತಿಳಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ 18,428 ಕೋಟಿ ಕೇಳಿದ್ದೆವೆ. ಈವರೆಗೂ ಯಾವುದೇ ಹಣ ಬಂದಿಲ್ಲ. ಈವರೆಗೆ ಒಂದೇ ಒಂದು ದಿನ ಸಂಸದರು ಮಾತನಾಡಿಲ್ಲ. ಯಾವ ಮಂತ್ರಿಯೂ ಮಾತನಾಡಿಲ್ಲ. ಯಾವ ಎಂಪಿ ಕೂಡ ಮಾತನಾಡಿಲ್ಲ. ಜಿಎಸ್ ಟಿ ಹಣ, ಅಪ್ಪರ್ ಭದ್ರಾ ಯೋಜನೆಯ 550 ಕೋಟಿ ಬರಬೇಕು. ನೀವೆ ಕರೆದುಕೊಂಡು ಹೋಗಿ ಹಣ ಕೊಡಿಸುವಂತೆ ಕೇಳಿಕೊಂಡರು ಬಿಜೆಪಿಯವರು ಬರುತ್ತಿಲ್ಲ ಎಂದು ಕಿಡಿಕಾರಿದರು.ಸಮಾವೇಶದ ಪೂರ್ವಸಿದ್ಧತೆ ಪರಿಶೀಲನೆ:
ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಸೇರಿ ಸಂಬಂದಪಟ್ಟ ಸಚಿವರು ಆಗಮಿಸುವ ಹಿನ್ನಲೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಿದ್ಧವಾಗುತ್ತಿರುವ ಕಾರ್ಯಕ್ರಮ ವೇದಿಕೆಯನ್ನು ಸಚಿವ ಎನ್ಎಸ್ ಬೋಸರಾಜು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕಾಂಗ್ರೆಸ್ ಹಿರಿಯರಾದ ಜಯಣ್ಣ, ಶಾಂತಪ್ಪ, ರುದ್ರಪ್ಪ ಅಂಗಡಿ, ಪ್ರಸಾದ್, ಬೀಮರಾಯ್, ಶ್ರೀನಿವಾಸ್ ರಡ್ಡಿ ಸೇರಿದಂತೆ ಅನೇಕರು ಇದ್ದರು.