600ಕ್ಕೂ ಹೆಚ್ಚು ಹೊಸ ಮತದಾರರು ಭಾಗಿ, ಸಂಜೆ ವಾಗ್ಮಿ ಹಾರಿಕಾ ಮಂಜುನಾಥ ಭಾಷಣ: ಶಿವರಾಜ ಪಾಟೀಲ
ಕನ್ನಡಪ್ರಭ ವಾರ್ತೆ ದಾವಣಗೆರೆನರೇಂದ್ರ ಮೋದಿ ಅಭಿಮಾನಿ ಬಳಗದಿಂದ ಯುವಕರ ನಡೆ ಮೋದಿಯ ಕಡೆ ಬೈಕ್ ಜಾಥಾ ಮಾ.2ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವರಾಜ ಪಾಟೀಲ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಸಂಜೆ 4ಕ್ಕೆ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಳಿ ಬೈಕ್ ಜಾಥಾಗೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಚಾಲನೆ ನೀಡುವರು ಎಂದರು. ಬೈಕ್ ಜಾಥಾ ಉದ್ಘಾಟನೆ ವೇಳೆ 600ಕ್ಕೂ ಹೆಚ್ಚು ಹೊಸ ಮತದಾರರು ಹಾಜರಿದ್ದು, ಜಾಥಾದಲ್ಲಿ ಸಾಗಲಿದ್ದಾರೆ. ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಗುವ ಬೈಕ್ ರ್‍ಯಾಲಿ ಜಾಥಾವು ಎಚ್‌ಕೆಆರ್ ವೃತ್ತ, ಡಾಂಗೇ ಪಾರ್ಕ್, ಶ್ರೀ ಜಯದೇವ ವೃತ್ತ, ಆರ್.ಎಚ್. ಧರ್ಮಛತ್ರ, ರೇಣುಕಾ ಮಂದಿರ, ಅಕ್ಕ ಮಹಾದೇವಿ ರಸ್ತೆ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಚರ್ಚ್ ರಸ್ತೆ, ಡಾ.ಎಂ.ಸಿ.ಮೋದಿ ವೃತ್ತ, ಮಾಮಾಸ್ ಜಾಯಿಂಟ್ ರಸ್ತೆ , ಬಾಪೂಜಿ ಶಾಲೆ, ಬಿಐಇಟಿ ರಸ್ತೆ ಮಾರ್ಗವಾಗಿ ಆಂಜನೇಯ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ತಲುಪಲಿದೆ. ನಂತರ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಸಂಜೆ 6ಕ್ಕೆ ಸಭಾ ಕಾರ್ಯಕ್ರಮದಲ್ಲಿ ಬಾಲ ವಾಗ್ಮಿ ಹಾರಿಕಾ ಮಂಜುನಾಥ ದಿಕ್ಸೂಚಿ ಭಾಷಣ ಮಾಡುವರು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಇತರರು ಪಾಲ್ಗೊಳ್ಳುವರು. ವಿಶ್ವ ಕಂಡ ಅಪ್ರತಿಮ ನಾಯಕ ನರೇಂದ್ರ ಮೋದಿಯವರನ್ನು ಮುಂದಿನ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲ್ಲಿಸಿ, ಮೂರನೇ ಅವಧಿಗೆ ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ನಮ್ಮೆಲ್ಲರದ್ದೂ ಆಗಿದೆ ಎಂದು ತಿಳಿಸಿದರು.
ದೇಶ ಶಕ್ತಿಯಾದ ಯುವಜನರ ಒಗ್ಗೂಡಿಸಿ, ದೇಶದ ಭದ್ರತೆ, ಐಕ್ಯತೆ, ಆರ್ಥಿಕ ಸ್ಥಿತಿ ಕುರಿತಂತೆ ಜನರಲ್ಲಿ ದೇಶಾಭಿಮಾನ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೈಕ್ ಜಾಥಾದಲ್ಲಿ ನವ ಮತದಾರರು, ಮೋದಿ, ಬಿಜೆಪಿ ಅಭಿಮಾನಿಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲು ಶಿವರಾಜ ಪಾಟೀಲ್ ಮನವಿ ಮಾಡಿದ್ದಾರೆ. ಪಕ್ಷದ ಮುಖಂಡರಾದ ಅಥಿತ್ ಅಂಬರಕರ್, ಕೆ.ಕೊಟ್ರೇಶಗೌಡ, ಕೆ.ಎನ್.ಹನುಮಂತಪ್ಪ ಇತರರಿದ್ದರು.