ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬಿಬಿಎಂಪಿಯ 2024-25ನೇ ಆಯವ್ಯಯದಲ್ಲಿ ಒತ್ತು ನೀಡಲಾಗಿದ್ದು, ಬಜೆಟ್ ಮಂಡನೆಗೆ ಗುರುವಾರ ಮುರ್ಹೂತ ನಿಗದಿಯಾಗಿದೆ. ಬರೋಬ್ಬರಿ ₹13 ಸಾವಿರ ಕೋಟಿ ಗಾತ್ರದ ಆಯವ್ಯಯ ಮಂಡನೆ ಆಗುವ ಸಾಧ್ಯತೆ ಇದೆ.
ಪುರಭವನದಲ್ಲಿ ಮಂಡನೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದ್ದು, ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರ ಸಮಕ್ಷಮದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಯಡಿ ಆಯವ್ಯಯ ಸಿದ್ಧಪಡಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ: ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಬ್ರ್ಯಾಂಡ್ ಬೆಂಗಳೂರು ಯೋಜನೆಯನ್ನು ಪರಿಚಯಿಸಿದೆ. ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಸ್ನೇಹಿ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು, ಶೈಕ್ಷಣಿಕ ಬೆಂಗಳೂರು ಹಾಗೂ ಜಲ ಸುರಕ್ಷಾ ಬೆಂಗಳೂರು ಎಂಬ ಎಂಟು ಅಂಶಗಳನ್ನು ಒಳಗೊಂಡಿದೆ.
ಈ ಅಂಶಗಳ ಕುರಿತು ಈಗಾಗಲೇ ತಜ್ಞರು, ಉದ್ಯಮಿಗಳು, ಬೆಂಗಳೂರು ನಾಗರಿಕರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಅಭಿಪ್ರಾಯ ಆಧಾರಿಸಿ ಕೆಲವು ಅಂಶಗಳನ್ನು ಬಿಬಿಎಂಪಿಯ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವುದಕ್ಕೆ ನಿರ್ಧರಿಸಲಾಗಿದೆ.ಸಂಚಾರ ದಟ್ಟಣೆ ನಿವಾರಣೆಗೆ ಒತ್ತು
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನಗರದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿಯಲ್ಲಿ ಹಾಗೂ ಸುರಕ್ಷಿತವಾಗಿ ನಾಗರಿಕರ ಓಡಾಟಕ್ಕೆ ಬೇಕಾದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಅದ್ಯತೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ಅನುದಾನ ಹೊರತು ಪಡಿಸಿ ಬಿಬಿಎಂಪಿಯ ಅನುದಾನದಲ್ಲಿ ಹಲವು ರಸ್ತೆಗಳನ್ನು ವೈಟ್‌ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದು.
ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಮೊದಲಾದ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ಬಾರಿಗಿಂತ ಹೆಚ್ಚಿನ ಆಯವ್ಯಯ
2023-24ನೇ ಸಾಲಿನಲ್ಲಿ ₹11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು ₹11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್ ಗಾತ್ರವನ್ನು ₹11,885 ಕೋಟಿಗೆ ಹೆಚ್ಚಿಸಿತ್ತು.
ರಾಜ್ಯ ಸರ್ಕಾರ ಬಿಬಿಎಂಪಿಗೆ ನೀಡಲಾಗಿರುವ ಸುಮಾರು ₹4 ಸಾವಿರ ಕೋಟಿ ಮೊತ್ತದ ಯೋಜನೆಗಳು ಒಳಗೊಂಡಂತೆ ಈ ವರ್ಷ ಹೆಚ್ಚಿನ ಆದಾಯ ನಿರೀಕ್ಷಿಸಿ ಬಜೆಟ್ ಗಾತ್ರ ₹13 ಸಾವಿರ ಕೋಟಿ ಆಸುಪಾಸಿನಲ್ಲಿ ಮಂಡನೆಯಾಗಲಿದೆ.ಹೆಚ್ಚಿನ ಆದಾಯದ ನಿರೀಕ್ಷೆಗಳೇನು?
2024-25ನೇ ಸಾಲಿನಲ್ಲಿ ₹4,100 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕ್ಯಾಪಿಟಲ್ ವ್ಯಾಲ್ಯೂ ವ್ಯವಸ್ಥೆಯಡಿ ಆಸ್ತಿ ತೆರಿಗೆ ಸಂಗ್ರಹಿಸಲು ಕರಡು ಅಧಿಸೂಚನೆ ಪ್ರಕಟಿಸಿದೆ.
ಇದರಿಂದ ಹೆಚ್ಚುವರಿ ₹1 ಸಾವಿರ ಕೋಟಿ, ಪ್ರೀಮಿಯಂ ಎಫ್‌ಐಆರ್ ಜಾರಿಯಿಂದ ₹1 ಸಾವಿರ ಕೋಟಿ, ಜಾಹೀರಾತು ತೆರಿಗೆಯಿಂದ ₹750 ಕೋಟಿ, ಎಸ್‌ಡಬ್ಲ್ಯೂಎಂ ಬಳಕೆದಾರರ ಶುಲ್ಕ ₹850 ಕೋಟಿ ಸಂಗ್ರಹ ನಿರೀಕ್ಷೆ ಹೊಂದಿದೆ.
ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವನ್ನು 4ರಿಂದ 6 ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಆಸ್ತಿ ತೆರಿಗೆ ಸುಸ್ತಿದಾರರಿಗೆ ಒಟಿಎಸ್ ಯೋಜನೆ ಜಾರಿ ಮಾಡಿದ್ದು, 500 ರಿಂದ ಒಂದು ಸಾವಿರ ಕೋಟಿ ರು. ಸಂಗ್ರಹಿಸುವ ನಿರೀಕ್ಷೆ ಹೊಂದಿದೆ.
4ನೇ ಬಾರಿ ಅಧಿಕಾರಿಗಳಿಂದ ಮಂಡನೆ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆಪ್ಟಂಬರ್‌ನಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಆಯವ್ಯಯವನ್ನು ಪಾಲಿಕೆ ಅಧಿಕಾರಿಗಳೇ ಮಂಡನೆ ಮಾಡುತ್ತಿದ್ದಾರೆ. ಈ ಬಾರಿಯೂ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಮಂಡಿಸಲಿದ್ದಾರೆ.
ಆನ್‌ಲೈನ್‌ನಲ್ಲಿ ವೀಕ್ಷಿಸಿ: ಪುರಭವನದಲ್ಲಿ ಗುರುವಾರ ಮಂಡನೆ ಆಗುವ ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯವನ್ನು ಆನ್‌ಲೈನ್ ವೀಕ್ಷಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಫೇಸ್‌ಬುಕ್, ಟ್ವೀಟರ್ ಮತ್ತು ಯುಟ್ಯೂಬ್ https://www.youtube.com/live/i2balgL32_Q?si=8HOaGixOeuAidH_x
https://www.facebook.com/BBMP.Admn?mibextid=ZbWKwL, https://www.facebook.com/BBMPCC?mibextid=ZbWKwL, https://www.facebook.com/?mibextid=ZbWKwL ನಲ್ಲಿ ಸಾರ್ವಜನಿಕರು ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಸಿದ್ಧಪಡಿಸಲಾಗಿದೆ. ಕಳೆದ ವರ್ಷಕ್ಕಿಂತ ಸಾಮಾನ್ಯವಾಗಿ ಶೇ.10ರಷ್ಟು ಗಾತ್ರ ಹೆಚ್ಚಾಗಿರಲಿದೆ. -ಶಿವಾನಂದ ಕಲ್ಕೆರೆ, ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು)