ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆಗೆ ಭೇಟಿ, ಪರಿಶೀಲನೆ । ಕ್ರಮಕ್ಕೆ ಸೂಚನೆ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಾಗೂ ಶೌಚಾಲಯ, ಹೋಟೆಲ್ ತ್ಯಾಜ್ಯದ ನೀರು ಪ್ರಯಾಣಿಕರು ಓಡಾಡುವ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಸುರೇಶ್ ಪರಿಶೀಲನೆ ನಡೆಸಿ ಸಾರಿಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಸುರೇಶ್, ‘ಈಗಾಗಲೇ ಪಟ್ಟಣದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಎರಡು ತಿಂಗಳ ಕಾಲ ನೀತಿ ಸಂಹಿತೆ ಇದ್ದ ಕಾರಣ ಸಾರ್ವಜನಿಕರ ಯಾವುದೇ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ದೂರು ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಳಿ ಇರುವ ಶೌಚಾಲಯದ ನೀರು ರಸ್ತೆಯ ಬದಿಯಲ್ಲಿ ಹರಿಯುತ್ತಿರುವುದರಿಂದ ಇಲ್ಲಿಗೆ ಬಂದು ಸ್ಥಳ ಪರಿಶೀಲಿಸಿ ಇಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಪ್ರವಾಸಿಗರು ಇಲ್ಲಿ ದೇವಾಲಯಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು ಅವರಿಗೆ ಯಾವುದೇ ರೀತಿಯ ಮುಜುಗರ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಶೌಚಾಲಯದಲ್ಲಿ ಶುಚಿತ್ವ ಕಾಪಾಡಬೇಕು. ಹೋಟೆಲ್ ತ್ಯಾಜ್ಯದ ನೀರನ್ನು ರಸ್ತೆಯ ಮೇಲೆ ಹರಿಯದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅವರ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ ಅವರು, ರಸ್ತೆಯಲ್ಲಿ ಕಟ್ಟಿಕೊಂಡಿರುವ ನೀರು ಬ್ಲಾಕ್ ಅಗಿರುವ ಚರಂಡಿಯನ್ನು ಪುರಸಭೆಯವರು ಸ್ವಚ್ಛತೆ ಮಾಡಬೇಕು. ವಾಹನಗಳಿಗೆ ತೊಂದರೆಯಾಗದಂತೆ ವ್ಯಾಪಾರಿಗಳು ವ್ಯಾಪಾರ ಮಾಡಬೇಕು ಎಂದು ತಾಕೀತು ಮಾಡಿದರು.
ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಂಜಪ್ಪ, ಹೊಯ್ಸಳ ಮತ್ತು ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು, ಆರೋಗ್ಯಧಿಕಾರಿ ಲೋಹಿತ್, ಬಿಜೆಪಿ ನಗರಾಧ್ಯಕ್ಷ ವಿನಯ್, ಮನು ಹಾಗೂ ಚಾಲಕರು ಹಾಜರಿದ್ದರು.ಎಪಿಎಂಸಿ ಬಳಿ ಶೀಘ್ರ ಬಸ್ ನಿಲ್ದಾಣ ಕಾಮಗಾರಿ
ಸುಮಾರು ೧೫೦ ಕೋಟಿ ರು. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಕ್ರಿಯಾ ಯೋಜನೆ ಮುಗಿದಿದ್ದು ಎಪಿಎಂಸಿ ಬಳಿ ಅಥವಾ ಚಿಕ್ಕಮಗಳೂರು ರಸ್ತೆ ಬಳಿಯಲ್ಲಿ ಶೀಘ್ರದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹಳೆ ಬಸ್ ನಿಲ್ದಾಣವನ್ನು ನಗರ ಸಾರಿಗೆಗಾಗಿ ಕಲ್ಪಿಸಲು ಚಿಂತನೆ ನೀಡಲಾಗಿದೆ ಎಂದು ಶಾಸಕ ಸುರೇಶ್ ಹೇಳಿದರು.