ಬಂಪರ್‌ ಫಸಲಿನ ಕನಸು ನುಚ್ಚುನೂರು: ಆತಂಕದಲ್ಲಿ ರೈತ

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ತೊಗರಿ ಬೆಳೆದ ಭೀಮಾ ತೀರದ ರೈತರು ಸಂಕಷ್ಟದಲ್ಲಿ, ಇವರ ಗೋಳು ಕೇಳೋರೆ ಇಲ್ಲ. ದನ, ಕರು, ಇಡೀ ಸಂಸಾರವೇ ತೊಗರಿಯಿಂದಾಗಿ ಬಕ್ಳ ಹೈರಾಣದಲ್ಲಿದೆ ಎಂದು ಗೋಳಾಡಿದ ಶಿವಪುತ್ರ ಹೊಲಕ್ಕೆ ಹೋಗೋದೇ ಬಿಟ್ಟಿರೋದಾಗಿ ಹೇಳಿದರು.

ಶೇಷಮೂರ್ತಿ, ಬಿಂದುಮಾಧವ

ಕನ್ನಡಪ್ರಭ ವಾರ್ತೆ ಮಣ್ಣೂರ, ರಾಮನಗರ (ಅಫಜಲ್ಪುರ)

ಸುರುವಿಗಿ ಬಂಪರ್‌ ಕ್ರಾಪ್‌ ಬಂತ್ರಿ, ಬೆಳಿ ನೋಡಿ ಹಿಗ್ಗಿದ್ವಿ, ಆದ್ರ ನಮ್ಮ ದುರಾದೃಷ್ಟ ಅನ್ಬೇಕು, ಹೂವು, ಕಾಯಿ ಹಿಡಿಯೋ ಟೈಮಿನ್ಯಾಗೇ ಬೆಳಿ ಒಣಗಿ ನಿಂತಿತು, ಬಂಪರ್‌ ಕ್ರಾಪ್ಕ ಕನಸು ನುಚ್ಚುನೂರಾಯ್ತು, ಬರಗಾಲ ಬಿದ್ದಿದ್ರ ವೈನಾಗ್ತಿತ್ತಿ, ಹೀಂಗ ಆಶಾ ಹಚ್ಚಿ ದುಡ್ಡ ಹಾಕೋವ್ಹಂಗ ಮಾಡಿ ಈಗ ಬೆಳಿ ಒಣಗಿ ನಿಂತದ, ಈ ಹಾನಿ ತಡಕೊಳ್ಳೋದೇ ಆಗ್ತಿಲ್ಲ ನೋಡ್ರಿ.

ಮಣ್ಣೂರಿನ ಯುವ ರೈತ ಶಿವಪುತ್ರ ನಿವರಗಿ ಅವರ ಮಾತಲ್ಲಿ ತೊಗರಿ ಹಾನಿಯಿಂದಾಗಿ ಹೇಗೆಲ್ಲಾ ತೊಂದರೆಯಾಗಿದೆ ಎಂಬುದರ ನೋವು ಅಡಗಿತ್ತು. ದನ, ಕರು, ಇಡೀ ಸಂಸಾರವೇ ತೊಗರಿಯಿಂದಾಗಿ ಬಕ್ಳ ಹೈರಾಣದಲ್ಲಿದೆ ಎಂದು ಗೋಳಾಡಿದ ಶಿವಪುತ್ರ ಹೊಲಕ್ಕ ಹೋಗೋದೇ ಬಿಟ್ಟಿರೋದಾಗಿ ಹೇಳಿದರು.

20 ಎಕರೆಗೂ ಹೆಚ್ಚಿನ ತೊಗರಿ ಬೇಸಾಯ ಮಾಡಿರುವ ಶಿವಪುತ್ರ ತೊಗರಿ ಬೆಳೆ ಉತ್ತಮ ನಿರ್ವಹಣೆ ಮಾಡಿದ್ದರೂ ಕೂಡಾ ಕಾಯಿ ಕಟ್ಟಿಲ್ಲ.

ಈಗ ಭಾರಿ ಬೆಳಿ ಬರ್ತೈತಿ ಅಂತ ಇದ್ದಬದ್ದ ಹಣವನ್ನೆಲ್ಲ ಹಾಕಿದ್ವಿ, ದೇಣ್ಯಾ (ಸಾಲ) ತಂದು ಇನ್ನ ಹಾಕಿದ್ವಿ,. ಈಗ ನೋಡಿದ್ರ ಎಲ್ಲವೂ ಗೋವಿಂದ ಎಂದು ಶಿವಪುತ್ರ ಗೋಳಾಡುತ್ತಿದ್ದಾರೆ. ಇವರದ್ದು ರೈತ ಕುುಟಂಬ, ಮನೆ ಮಂದಿ ಎಲ್ಲರೂ ತೊಗರಿ ಹಾನಿಯಿಂದಾಗಿ ಬೇಸರದಲ್ಲಿದ್ದಾರೆ.

ಅಫಜಲ್ಪುರ ರೈತರ ಕಣ್ಣೀರ ಕಹಾನಿ:

ತಾಲೂಕಿನಲ್ಲಿ ತೊಗರಿ ನಂಬಿ ಗೋಳಾಡುತ್ತಿರುವ ರೈತರದ್ದು ಒಂದೊಂದು ಕಹಾನಿ ಎನ್ನಬಹುದು. ಮಣ್ಣೂರಲ್ಲಂತೂ ತೊಗರಿ ರಾಶಿ ಶುರುವಾಗಿದ್ದು 6 ಎಕರೆ ಹೊಲದಲ್ಲಿ 4 ಕಟ್ಟು ಇಳುವರಿ ಬಂದಿರೋದು ಇಡೀ ತಾಲೂಕಿನ ತೊಗರಿ ಇಳುವರಿಗೇ ಕನ್ನಡಿ ಹಿಡಿದಿದೆ.

ಮಣ್ಣೂರಿನ ಯುವ ರೈತ ವೇಣುಮಾಧವ ಅವಧಾನಿ ತೊಗರಿ ನಂಬಿ ಪರೇಶಾನಿಯಲ್ಲಿದ್ದಾರೆ. ಖಟ ಗುತ್ತಿಗೆ ಹಾಕಿಕೊಂಡಿದ್ದ 20 ಎಕರೆಯಲ್ಲಿ ಬೆಳೆದಿದ್ದ ತೊಗರಿ ಸಂಪೂರ್ಣ ಹಾಳಾಗಿದೆ. 3ರಿಂದ 5 ಲಕ್ಷ ಲಾಗೋಡಿ ಲಾಸ್‌ ಎಂದು ಗೋಳಾಡುತ್ತಿದ್ದಾರೆ. ಮಣ್ಣೂರ ಗ್ರಾಮದಲ್ಲಿ ಅನೇಕ ರೈತರು ತೊಗರಿ ಬಿತ್ತನೆ ಮಾಡಿ ಲಕ್ಷಾಂತರ ಲಾಗೋಡಿ ಭರಿಸಿದ್ದರೂ ಆ ಹಣವೂ ಮರಲಿ ಬಾರದ ಸ್ಥಿತಿಯಲ್ಲಿದ್ದಾರೆ.

ಮಣ್ಣೂರಿನ ರೈತ ಸಂತೋಷ ಅಲ್ಲಾಪೂರ ಅವರು ಬೇರೆಯವರ 26 ಜಮೀನು 5 ಲಕ್ಷ ರುಪಾಯಿಗೆ ಖಂಡಿಸಿ (ಹುಂಡಾಗುತ್ತಾ) ಜಮೀನು ಮಾಡಿದ್ದು 26 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಸುಮಾರು 3 ಲಕ್ಷ ರೂಪಾಯಿ ತೊಗರಿ ಬೆಳೆಗೆ ಲಾಗೋಡಿ( ಖರ್ಚು) ಮಾಡಿದ್ದಾರೆ. ತೊಗರಿ ರಾಶಿ ಆದರೆ ಕೇವಲ 2 ಲಕ್ಷ ರುಪಾಯಿ ತೊಗರಿ ಬೆಳೆಗೆ ಹಣ ಬರಬಹುದು 6 ಲಕ್ಷ ರು. ನಷ್ಟ ಖಚಿತ ಎಂದು ಗೋಳಾಡಿದರು.

ರೈತ ಕಲ್ಲಪ್ಪ ಅಲ್ಲಾಪೂರ ಅವರ 35 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ತೊಗರಿ ಒಣಗಿರೋದರಿಂದ ಹೌಹಾರಿದ್ದಾರೆ. 35 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿ ಕೀಟ ನಾಶಕ ಸಿಂಪರಣೆ ಸೇರಿದಂತೆ 4 ಲಕ್ಷ ರೂಪಾಯಿ ಲಾಗೋಡಿ ಮಾಡಿದ್ದಾರೆ. ತೊಗರಿ ರಾಶಿ ಮಾಡಿದರೆ ಮಾರುಕಟ್ಟೆಯಲ್ಲಿ ಈಗಿರುವ ತೊಗರಿ ಬೆಲೆಯನ್ನು ಗಮನಿಸಿದರೆ 1.30 ಲಕ್ಷ ರುಪಾಯಿ ಬರಬಹುದ್ರಿ, ಹಾಕಿರೋ ಹಣವೂ ಬರುತ್ತಿಲ್ಲವೆಂದು ಆತಂಕದಲ್ಲಿದ್ದಾರೆ. ತಾಲೂಕಿನಾದ್ಯಂತ 1.20 ಲಕ್ಷ ಎಕರೆ ತೊಗರಿ ಬಿತ್ತನೆ ಮಾಡಲಾಗಿದೆ. ಶೇ.75 ರಿಂದ 80 ಸಾವಿರ ಎಕರೆ ತೊಗರಿ ಬೆಳೆ ನೆಟೆ ರೋಗ ನಂಜಾಣು ರೋಗದಿಂದ ಹಾಳಾಗಿದೆ.

ಪರಿಹಾರಕ್ಕೆ ಒತ್ತಾಯ:

ಅಫಜಲ್ಪುರದ ಭಾಗದಲ್ಲಿ ತೊಗರಿಗೆ ಬಂದಿರುವ ನಂಜಾಣು ರೋಗದಿಂದ ರೈತರಿಗೆ ಅಪಾರ ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಸೇತುಮಾಧವ ಅವದಾನಿ, ಕಲ್ಲಪ್ಪ ಅಲ್ಲಾಪೂರ ವಿವೇಕಾನಂದ ಕೋಗಟನೂರ ಶರಣಬಸಪ್ಪ ಉಪ್ಪಿನ ಕಾಶಿನಾಥ ಜೇವೂರ ಮಹ್ಮದಕರಿಂ ಮಂಗಲಗಿರಿ ಅಣ್ಣಪ್ಪ ಬಿಜಾಪುರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

10 ಎಕರೆ ಹೊಲದಲ್ಲಿ ತೊಗರಿ ಬೆಳೆದಿದ್ದೆ. ನೂರೆಂಟು ಸಮಸ್ಯೆಗಳ ನಡುವೆಯೂ ಬೆಳೆ ಚಲೋ ಇತ್ತು. 2 ಲಕ್ಷ ಇದುವರೆಗೂ ಖರ್ಚಾಗಿತ್ತು. ಬ್ಯಾಂಕ್‌ನಲ್ಲಿ ಸಾಲದ ಬಡ್ಡಿ ಬೆಳೆಯುತ್ತಿದ್ದರೂ ಈ ಬಾರಿ ಎಲ್ಲವನ್ನೂ ತೀರಿಸುವ ನಿರೀಕ್ಷೆ ಹೆಚ್ಚಿತ್ತು. ಆದರೆ ಇದೀಗ ನಾಲ್ಕಾಣಿ ಭಾಗ ಮಾತ್ರ ಉಳಿದಿದೆ. ಮುಂದೇನು ಮಾಡಬೇಕು ಎಂಬುದೇ ತೋಚದ ಸ್ಥಿತಿಯಲ್ಲಿ ನಾನಿದ್ದೇನೆ

ಸಂತೋಷ ಕೋನಳ್ಳಿ, ರೈತ, ಮಣ್ಣೂರು

ಹೊಲದಲ್ಲಿ ಹಸಿರಿನಿಂದ ನಳನಳಿಸಿ ಹಳದಿಯ ಹೂವುಗಳಿಂದ ಕಂಗೊಳಿಸುತ್ತಿದ್ದ ಬೆಳೆ ನೋಡುತ್ತಿದ್ದಾಗ ಮನಸ್ಸಿನಲ್ಲಿ ನೂರೆಂಟು ಆಸೆಗಳು ಮೊಳಕೆಯೊಡೆದಿದ್ದವು. ಈ ಬಾರಿ ನಮ್ಮೆಲ್ಲ ಸಂಕಷ್ಟಕ್ಕೆ ಇತಿಶ್ರೀ ಬೀಳುವ ಕನಸು ನನಸಾಗುವ ಕಾಲ ಕೈಗೂಡಿತ್ತು. ಆದರೆ ಸತತ ಮಳೆಗೆ ಹೊಲ ತುಂಬಾ ನೀರು ನಿಂತು ಬೆಳೆ ಒಣಗಿದೆ. ಮುಂದಿನ ದಿನಗಳ ನೆನೆದರೆ ಭಯವಾಗುತ್ತದೆ.

ವೇಣುಮಾಧವ ಅವಧಾನಿ, ರೈತ, ಮಣ್ಣೂರು

Share this article