ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಮತ । ಸಾರ್ವಜನಿಕ ಕಾರ್ಯಕ್ರಮ । ಮೋದಿ ಮತ್ತೆ ಪ್ರಧಾನಿಯಾಗಬೇಕುಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಹಿಂದೆ ಅಂತಾರಾಷ್ಟ್ರೀಯ ನೀತಿ, ನಿರೂಪಣೆಯಲ್ಲಿ ಭಾರತವನ್ನು ನಾಮಕಾವಸ್ತೆಗೆ ಅಭಿಪ್ರಾಯ ಕೇಳುತ್ತಿದ್ದ ರಾಷ್ಟ್ರಗಳೆಲ್ಲ ಇಂದು ಭಾರತದ ಮುಂದಾಳತ್ವದಲ್ಲಿ ನೀತಿಗಳನ್ನು ಸಿದ್ಧಪಡಿಸುವ ಕೆಲಸಕ್ಕೆ ಮುಂದಾಗಲು ಮುಖ್ಯ ಕಾರಣ ಪ್ರಧಾನಿ ಮೋದಿ. ಈಗ ಜಾಗತಿಕ ಮಟ್ಟದಲ್ಲಿ ಭಾರತ ಉನ್ನತ ಸ್ಥಾನಕ್ಕೇರಿದೆ. ಆದ್ದರಿಂದ ಮತ್ತೆ ಪ್ರಧಾನಿಯಾಗಬೇಕಿದೆ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಸಂಜೆ ನಮೋ ಬ್ರಿಗೇಡ್ ತಾಲೂಕು ಘಟಕ ಆಯೋಜನೆ ಮಾಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದೇ ದಶಕದಲ್ಲಿ ಬದಲಾದ ಭಾರತವನ್ನು ನೋಡಿದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಬಾಲಮುದುರಿ ಕುಳಿತಿವೆ. ದೇಶದ ಜನತೆ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಜತೆಗೆ ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುವುದನ್ನು ಎದುರು ನೋಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಇದ್ದ ಜನೌಷಧಿ ಔಷಧಾಲಯಗಳನ್ನು ತಾಲೂಕು ಕೇಂದ್ರಗಳಲ್ಲೂ ತೆರೆಯುವ ಮೂಲಕ ನಿತ್ಯ ಬಳಸಲೇಬೇಕಾದ ೧೧೯೪ ರು. ಮೌಲ್ಯದ ಅತ್ಯಗತ್ಯ ಔಷಧಿಯ ಬೆಲೆಯನ್ನು ೭೨ ರು.ಗೆ ದೊರೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.
ದೇಶದ ರೈತರಿಗೆ ಅತ್ಯಗತ್ಯವಾಗಿದ್ದ ಯೂರಿಯಾ ಗೊಬ್ಬರ ಕಾಳಸಂತೆಯಲ್ಲಿ ಬೀಕರಿಯಾಗುವ ಜತೆಗೆ ರೈತರಿಗೆ ಯೂರಿಯಾ ಗೊಬ್ಬರ ದೊರೆಯದೇ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಪ್ರಥಮವಾಗಿ ಮೋದಿಯವರು ಯೂರಿಯಾಗೆ ಬೇವು ಮಿಶ್ರಣ ಮಾಡುವ ಮೂಲಕ ಯೂರಿಯಾ ರೈತರ ಹೊರತಾಗಿ ಬೇರ್‍ಯಾವುದೇ ಕೆಲಸಕ್ಕೆ ಬಳಕೆಯಾಗದಂತೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಇತಿಶ್ರೀ ಹಾಡಿದರು. ಮೋದಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ೮೦ ಕೋಟಿ ಬಡವರಿಗೆ ಉಚಿತ ಧಾನ್ಯ ನೀಡುವ ಮೂಲಕ ಬಡವರ ಹಸಿವನ್ನು ಇಂಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮೋದಿಯವರ ಆಡಳಿತದ ಅವಧಿಯಲ್ಲಿ ೧೭ ಕೋಟಿ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಜತೆಗೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಜಂಜಾಟ ತಪ್ಪಿಸಿದ್ದಾರೆ ಎಂದು ಮೋದಿ ಅವರ ಸಾಧನೆ ವಿವರಿಸಿದರು.ಗುಜರಾತಿನಲ್ಲಿ ಇರುವ ಸ್ಟೇಡಿಯಂ ಒಂದಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಹೆಸರಿಡಲಾಗಿದೆ, ದೇಶದಲ್ಲಿ ಇದೊಂದೇ ಮೋದಿ ಹೆಸರಲ್ಲಿ ಇರುವುದು. ಆದರೆ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ೧೨ ಕೇಂದ್ರದ ಯೋಜನೆಗಳು, ೫೨ ರಾಜ್ಯದ ಯೋಜನೆಗಳು, ೨೮ ಕ್ರೀಡಾ ಪಂದ್ಯಾವಳಿಗಳು ಹಾಗೂ ಟ್ರೋಫಿಗಳು, ೧೯ ಸ್ಟೇಡಿಯಂಗಳು, ೫ ವಿಮಾನ ನಿಲ್ದಾಣ ಹಾಗೂ ಬಂದರು, ೯೮ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು, ೫೧ ಪ್ರಶಸ್ತಿಗಳು, ೧೧೫ ವಿದ್ಯಾರ್ಥಿ ವೇತನ ಹಾಗೂ ಫೆಲೋಶಿಪ್, ೧೫ ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಹಾಗೂ ವಸ್ತು ಸಂಗ್ರಹಾಲಯಗಳು, ೩೯ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು, ೩೯ ರಸ್ತೆಗಳು, ಕಟ್ಟಡಗಳು ಹಾಗೂ ಸ್ಥಳಗಳಿಗೆ ಹೆಸರಿಡಲಾಗಿದೆ. ಗುಜರಾತಿನ ಜನತೆ ಗೌರವ ಹಾಗೂ ಪ್ರೀತಿಯಿಂದ ಇಟ್ಟಿರುವುದನ್ನು ಕೆಟ್ಟ ಮನಸ್ಥಿತಿಯ ಕಾಂಗ್ರೆಸ್ಸಿಗರು ಟೀಕಿಸುತ್ತಾರೆ ಎಂದು ಕುಟುಕಿದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ವಿಶ್ವದ ಐದು ರಾಷ್ಟ್ರಗಳು ಕೋವಿಡ್ ಲಸಿಕೆ ಕಂಡು ಹಿಡಿದವು. ಪ್ರಧಾನಿ ಮೋದಿ ದೇಶದ ೧೩೦ ಕೋಟಿ ಪ್ರಜೆಗಳಿಗೆ ಉಚಿತ ಲಸಿಕೆ ಕೊಡಿಸುವ ಮೂಲಕ ಬೆಲೆ ಕಟ್ಟಲಾಗದ ಜೀವ ಉಳಿಸುವ ಜತೆಗೆ ನಿಶ್ಚಿಂತೆಯಿಂದ ಬದುಕಲು ದಾರಿ ತೋರಿದ್ದಾರೆ, ಕೋವಿಡ್ ಮೊದಲ ಅಲೆಯಲ್ಲಿ ಸಾಕಷ್ಟು ಕಷ್ಟ ಹಾಗೂ ನಷ್ಟ ಅನುಭವಿಸಿದ ಭಾರತೀಯರು ಎರಡನೇ ಅಲೆಯಲ್ಲಿ ಲಸಿಕೆ ಪಡೆದ ಕಾರಣದಿಂದ ಆತ್ಮವಿಶ್ವಾಸದಿಂದ, ನಿರ್ಭಯವಾಗಿ ತಿರುಗಾಡವಂತೆ ಮಾಡಿದರು ಎಂದು ಹೇಳಿದರು.ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮೋದಿಯವರ ಸಾಧನೆಗಳ ಬಗ್ಗೆ ಮಾಡುವಾಗ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸುವ ಜತೆಗೆ ಸಾವಿರಾರು ಸಭಿಕರು ಆಸಕ್ತಿಯಿಂದ ಭಾಷಣ ಕೇಳಿದರು.
ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.