ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಸೋಮವಾರ ಧಾಕಾರಾರ ಮಳೆ ಸುರಿದಿದ್ದು, ದಿನಪೂರ್ತಿ ಎಡೆಬಿಡದೆ ಮಳೆಯಾಗಿದೆ. ಭಾರಿ ಮಳೆಯಿಂದ ನದಿ, ಹಳ್ಳ, ಕೊಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಭಾಗದಲ್ಲೂ ದಿನವಿಡೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಜು.9ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ದ.ಕ.ಜಿಲ್ಲೆಯಲ್ಲಿ ಸೋಮವಾರ ಹಗಲು ನಿರಂತರ ಮಳೆ ಸುರಿದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಂಗಳೂರು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಡೀ ದಿನ ಮಳೆ ಸುರಿದ ಕಾರಣ ವಾತಾವರಣ ಚಳಿ ಹಿಡಿಸಿದ್ದು, ಬಿಡುವಿಲ್ಲದೆ ಮಳೆ ಸುರಿಯುತ್ತಲೇ ಜನಜೀವನಕ್ಕೆ ಆತಂಕ ತಂದೊಡ್ಡಿದೆ. ಪ್ರವಾಹ ಆತಂಕ:ಭಾರಿ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿಗೆ ಒಳಗಾಗಿವೆ. ಮೂಲ್ಕಿ, ಹಳೆಯಂಗಡಿ, ಪಾವಂಜೆಗಳಲ್ಲಿ ನದಿ ಪಾತ್ರದ ಪ್ರದೇಶಗಳಲ್ಲಿ ಮುಳುಗಡೆ ವಾತಾವರಣ ಸೃಷ್ಟಿಯಾಗಿದೆ. ನಂದಿನಿ, ಶಾಂಭವಿ, ಫಲ್ಗುಣಿ, ನೇತ್ರಾವತಿ ನದಿ ಸೇರಿದಂತೆ ಹೊಳೆಗಳಲ್ಲೂ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಕಟೀಲು, ಮೂಲ್ಕಿ, ಕಿನ್ನಿಗೋಳಿ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಸಮುದ್ರ ಕೂಡ ಪ್ರಕ್ಷುಬ್ದ ಸ್ಥಿತಿಗೆ ತಲುಪುತ್ತಿದೆ.
ಅಲ್ಲಲ್ಲಿ ಕುಸಿತ, ಸಂಚಾರ ದುಸ್ತರ:ಮೂಲ್ಕಿ ಸಮೀಪದ ಪಾವಂಜೆ ದೇವಸ್ಥಾನದ ತಡೆಗೋಡೆ ಕುಸಿತಗೊಂಡಿದ್ದು ವ್ಯಾಪಕ ಹಾನಿ ಉಂಟಾಗಿದೆ. ಮೂಲ್ಕಿಯಲ್ಲಿ ಮರ ಬಿದ್ದು ರಸ್ತೆ ಸಂಚಾರ ದುಸ್ತರವಾಗಿದೆ. ಮಳೆಯಿಂದಾಗಿ ಜಿಲ್ಲೆಯ ಕಲ್ಲಡ್ಕ, ಮಾಣಿಗಳಲ್ಲಿ ಹೆದ್ದಾರಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಮಂಗಳೂರು ಗರಿಷ್ಠ ಮಳೆ:ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಗರಿಷ್ಠ 85.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 48.6 ಮಿ.ಮೀ. ಆಗಿದೆ.
ಬೆಳ್ತಂಗಡಿ 35.2 ಮಿ.ಮೀ, ಬಂಟ್ವಾಳ 43.4 ಮಿ.ಮೀ, ಪುತ್ತೂರು 53.8 ಮಿ.ಮೀ, ಸುಳ್ಯ 72.8 ಮಿ.ಮೀ, ಮೂಡುಬಿದಿರೆ 32.4 ಮಿ.ಮೀ, ಕಡಬ 37.7 ಮಿ.ಮೀ, ಮೂಲ್ಕಿ 70 ಮಿ.ಮೀ. ಹಾಗೂ ಉಳ್ಳಾಲ 46.8 ಮಿ.ಮೀ. ಮಳೆ ವರದಿಯಾಗಿದೆ.ಉಪ್ಪಿನಂಗಡಿ ನೇತ್ರಾವತಿ ನದಿ 25.7 ಮೀಟರ್ ಹಾಗೂ ತುಂಬೆ ನೇತ್ರಾವತಿ ನದಿ 3.4 ಮೀಟರ್‌ನಲ್ಲಿ ಹರಿಯುತ್ತಿದೆ.
ಭಾರಿ ಮಳೆಗೆ ಜಿಲ್ಲೆಯಲ್ಲಿ ಎರಡು ಮನೆ ಪೂರ್ತಿ ಹಾನಿಯಾಗಿದ್ದು, 12 ಮನೆಗಳು ಭಾಗಶಃ ಹಾನಿಗೀಡಾಗಿವೆ. ಕಡಬ ಮತ್ತು ಮಂಗಳೂರಿನಲ್ಲಿ ತಲಾ ಒಂದು ಪರಿಹಾರ ಕೇಂದ್ರ ತೆರೆಯಲಾಗಿದೆ. ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಹಾನಿಗೊಂಡಿದ್ದು, 60 ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.