ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಪಂ ಸಭಾಭವನದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಪಾರಂಪರಿಕ ವೈಶಿಷ್ಯಗಳನ್ನು ಉತ್ತೇಜಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಬಾದಾಮಿ ಅಗಸ್ತ್ಯ ತೀರ್ಥ ಹೊಂಡದ ಮೇಲಿರುವ ಮನೆಗಳ ಹಸ್ತಾಂತರ ಕಾರ್ಯ ಬಹಳ ದಿನಗಳಿಂದ ಕೈಗೆತ್ತಿಕೊಳ್ಳಲಾಗಿದೆ. ಆದರೆ ಸ್ಥಳಾಂತರ ಕಾರ್ಯ ಮಾತ್ರ ಆಗುತ್ತಿಲ್ಲ. ಇದಕ್ಕಾಗಿ ಬಾದಾಮಿ ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿಯವರು ಮುತುವರ್ಜಿ ವಹಿಸುತ್ತಿದ್ದಾರೆ. ಆದರೆ ಜಮೀನು ಹಸ್ತಾಂತರಕ್ಕೆ ಪ್ರಸ್ತಾವನೆ ಕಳುಹಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸಚಿವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸೂಚಿಸಿದರು.ಪಟ್ಟದಕಲ್ಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಟೂರಿಸಂ ಪ್ಲಾಜಾ ಕೂಡ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರಾರಂಭವಾಗಿ 4 ವರ್ಷಗಳು ಗತಿಸಿವೆ. ಈ ರೀತಿಯಾದರೆ ಪ್ರವಾಸೋದ್ಯಮ ಬಲಪಡಿಸುವುದು ಹೇಗೆ ಎಂದು ಶಾಸಕ ಚಿಮ್ಮನಕಟ್ಟಿ ಪ್ರಶ್ನಿಸಿದಾಗ, ಅನಷ್ಠಾನ ಸಂಸ್ಥೆಯಾದ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ತಿಳಿಸಿದರು. ಬಾದಾಮಿ ತ್ರಿಸ್ಟಾರ್ ಹೋಟಲ್ ನಿರ್ಮಾಣ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ ಎಂದು ಸಭೆಗೆ ಶಾಸಕ ಚಿಮ್ಮನಕಟ್ಟಿ ತಿಳಿಸಿದರು.
ಸಾಗರ ಮಾಲಾ ಯೋಜನೆಗಳಡಿ ಹೆರಕಲ್ ಗ್ರಾಮದ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳುತ್ತಿರುವ ರಿವರ್ ಕ್ರಸ್ ಟೂರಿಸಂ, ಬೋಟಿಂಗ್, ಜಂಗಲ್ ರೆಸಾರ್ಟ್ ಚಟುವಟಿಕೆ, ಯೋಜನೆಗೆ ಸಂಬಂಧಿಸಿದ ಕಾರ್ಯಗಳನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಚಿವರು ತಿಳಿಸಿದರು. ಕುಂದರಗಿ ಸುರಗಿರಿ ಬೆಟ್ಟ, ಚಿಕ್ಕ ಸಂಗಮದ ಸಂಗಮನಾಥ ದೇವಸ್ಥಾನ ಮೂಲ ಸೌಕರ್ಯಗಳ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜೆ.ಟಿ. ಪಾಟೀಲ, ಜಗದೀಶ ದುಡಗುಂಟಿ, ಉಮೇಶ ಮೇಟಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಬಸವರಾಜ, ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.