ಸೆಲ್ಫಿ ಹುಚ್ಚಿನಿಂದಾಗಿ ಅಪಾಯ ಆಹ್ವಾನಿಸುತ್ತಿರುವ ಪ್ರವಾಸಿಗರು

KannadaprabhaNewsNetwork |  
Published : Jun 03, 2024, 12:30 AM IST
ಯಲ್ಲಾಪುರ ತಾಲೂಕಿನ ಬೇಡ್ತಿ ನದಿ ಸೇತುವೆ ಮೇಲೆ ಅಪಾಯಕಾರಿ ಸ್ಥಳದಲ್ಲಿ ಫೋಟೋ ತೆಗೆಯುತ್ತಿರುವುದು. | Kannada Prabha

ಸಾರಾಂಶ

ದಿನಗಳೆದಂತೆ ಬೇಡ್ತಿ ಸೇತುವೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ, ಆದರೆ ಸೆಲ್ಫಿ ಮತ್ತು ಫೋಟೋ ಶೂಟ್‌ಗಳ ಹೆಸರಿನಲ್ಲಿ ಜೀವ ಲೆಕ್ಕಿಸದೆ ಇಂತಹ ವರ್ತನೆ ಮಾಡುವುದು ಎಷ್ಟು ಸರಿ?

ಯಲ್ಲಾಪುರ: ಸಾಮಾಜಿಕ ಜಾಲತಾಣಗಳ ವೀಡಿಯೋಗಳಲ್ಲಿ ಪ್ರದರ್ಶಿಸುವ ಉತ್ಸಾಹದಲ್ಲಿ ಹಲವು ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ-ಫೋಟೋ ತೆಗೆಯಲು ಹೋಗಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಅಂತಹ ಯುವಕರ ಹುಚ್ಚಾಟದ ಸಾಹಸಕ್ಕೆ ಯಲ್ಲಾಪುರದ ಬೇಡ್ತಿ ಸೇತುವೆಯೂ ಇತ್ತೀಚೆಗೆ ಹೊಸತಾಗಿ ಸೇರ್ಪಡೆಗೊಂಡಿದೆ!

ಮೂರು ವರ್ಷದ ಹಿಂದೆ ಉದ್ಘಾಟನೆಯಾದ ಬೇಡ್ತಿ ಸೇತುವೆ ನಿರ್ಮಾಣದ ಆನಂತರ, ಪ್ರವಾಸಿಗಳ ಆಕರ್ಷಣೆಗೆ ಒಳಗಾಗುತ್ತಿದೆ. ಶಿರಸಿ-ಯಲ್ಲಾಪುರ ರಸ್ತೆಯ ಮೂಲಕ ಸಂಚರಿಸುವ ಅನೇಕ ಪ್ರಯಾಣಿಕರು ಸೇತುವೆ ಬಳಿ ನಿಂತು ಕುಟುಂಬದವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ಆದರೆ, ಕೆಲವರು ಸೇತುವೆಯ ಮೇಲೆ ಹತ್ತಿ ತಮ್ಮ ಜೀವದಾಸೆ ತೊರೆದು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಹುಚ್ಚಾಟದಲ್ಲಿ ತೊಡಗುತ್ತಿದ್ದಾರೆ. ಕೆಲವೊಮ್ಮೆ ಸತ್ತವರ ಶವ ಹುಡುಕಲು ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಕಷ್ಟಪಡುವಂತಾಗುತ್ತದೆ.

ಸಾತೊಡ್ಡಿ ಜಲಪಾತದ ನೀರಿನ ಆಳ, ಅಗಲ, ಹರಿವು, ಒಳಗೆ ಹರಡಿರುವ ಚೂಪಾದ ಕಲ್ಲುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೊರ ಪ್ರದೇಶದಿಂದ ಆಗಮಿಸುವ ನಾಲ್ಕೈದು ಜನರು ಪ್ರತಿ ವರ್ಷ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಅರಬೈಲ್ ಘಟ್ಟದ ಸಮೀಪದ ಶಿರ್ಲೆ ಜಲಪಾತದಲ್ಲಿಯೂ ಹುಚ್ಚು ಸಾಹಸಕ್ಕೆ ಅನೇಕ ಯುವಕ-ಯುವತಿಯರು ಪ್ರಾಣ ತೆತ್ತಿರುವ ಉದಾಹರಣೆ ಇದೆ. ಇದೇ ರೀತಿಯ ಹುಚ್ಚು ಸಾಹಸ ಬೇಡ್ತಿ ಸೇತುವೆಯ ಮೇಲೆಯೂ ಹೊಸತಾಗಿ ಕಾಣಿಸುತ್ತಿದ್ದು, ಸೇತುವೆಯ ಒಂದು ಬದಿಗೆ ಕಾಲನ್ನು ಇಳಿಬಿಟ್ಟು ಕುಳಿತುಕೊಳ್ಳುವುದು, ಸೇತುವೆಯ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಮಾಡುತ್ತಿದ್ದಾರೆ.

ಸಮತೋಲನ ತುಸು ತಪ್ಪಿದರೂ ಬಂಡೆ ಕಲ್ಲುಗಳ ಮೇಲೆ ಬಿದ್ದು ತಲೆ ಒಡೆಯುವುದಲ್ಲದೇ, ಮಳೆಗಾಲದಲ್ಲಿ ಅತಿ ವೇಗದಿಂದ ಹರಿಯುವ ಬೇಡ್ತಿ ನದಿಯಲ್ಲಿ ಶವ ಸಿಗದಂತಹ ಸ್ಥಳಗಳಿಗೆ ಕೊಚ್ಚಿ ಹೋಗುವ ಸಂಭವ ಇದೆ. ಇಂತಹ ಕೃತ್ಯ ಮಾಡುವವರಿಗೆ ಸ್ಥಳೀಯರು ಅಪಾಯದ ಕುರಿತು ಎಚ್ಚರಿಸಿದರೆ, ಅವರನ್ನೆ ಅವಮಾನಿಸಲಾಗುತ್ತಿದೆ. ಈ ಕಾರಣದಿಂದಲೇ ಇಂತಹ ವ್ಯಕ್ತಿಗಳಿಗೆ ಯಾರೂ ಬುದ್ಧಿವಾದ ಹೇಳಲು ಮುಂದಾಗುತ್ತಿಲ್ಲ.

ದಿನಗಳೆದಂತೆ ಬೇಡ್ತಿ ಸೇತುವೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ, ಆದರೆ ಸೆಲ್ಫಿ ಮತ್ತು ಫೋಟೋ ಶೂಟ್‌ಗಳ ಹೆಸರಿನಲ್ಲಿ ಜೀವ ಲೆಕ್ಕಿಸದೆ ಇಂತಹ ವರ್ತನೆ ಮಾಡುವುದು ಎಷ್ಟು ಸರಿ? ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ದುರಂತ ಸಂಭವಿಸಬಹುದೆಂಬುದು ಅನೇಕ ಪ್ರಾಜ್ಞರ ಅಭಿಮತವಾಗಿದೆ.

ಸೂಕ್ತ ಕ್ರಮ: ಪ್ರವಾಸಿ ತಾಣದ ರಸ್ತೆ, ಜಲಪಾತ ಬೇಡ್ತಿ ಸೇತುವೆಯ ಮೇಲೆ ಸಾಹಸ ತೋರುವ ಯುವಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದ ಅವಧಿಯಲ್ಲಿ ಬಹು ಪ್ರವಾಸಿಗರು ಯಲ್ಲಾಪುರ ತಾಲೂಕಿಗೆ ಆಗಮಿಸುವುದರಿಂದ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತೆಗೆ ಗಮನ ಹರಿಸುತ್ತದೆ ಎಂದು ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ್ ಹಾನಾಪುರ ತಿಳಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ