ಉತ್ತರದಲ್ಲಿ ಸಾಂಪ್ರದಾಯಿಕ ಎಳ್ಳು ಅಮವಾಸೆ ಸಡಗರ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಉತ್ತರ ಕರ್ನಾಟಕ ಭಾಗದ ರೈತರ ಸಂಭ್ರಮದ ಹಬ್ಬ ಎಳ್ಳು ಅಮವಾಸೆ. ಸೋಮವಾರ ಈ ಹಬ್ಬವನ್ನು ಜಿಲ್ಲಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಬೆಳಗ್ಗೆಯೇ ತರಹೇವಾರಿ ಊಟದ ಬುತ್ತಿ ಕಟ್ಟಿಕೊಂಡು ಎತ್ತಿನ ಬಂಡಿಯಲ್ಲಿ ಕುಟುಂಬದ ಸಮೇತ ಹೊಲಕ್ಕೆ ತೆರಳಿ ಚರಗ ಚೆಲ್ಲಿ ಭೂಮಿ ತಾಯಿಗೆ ನಮಿಸಿದರು.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತರ ಕರ್ನಾಟಕ ಭಾಗದ ರೈತರ ಸಂಭ್ರಮದ ಹಬ್ಬ ಎಳ್ಳು ಅಮವಾಸೆ. ಸೋಮವಾರ ಈ ಹಬ್ಬವನ್ನು ಜಿಲ್ಲಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಬೆಳಗ್ಗೆಯೇ ತರಹೇವಾರಿ ಊಟದ ಬುತ್ತಿ ಕಟ್ಟಿಕೊಂಡು ಎತ್ತಿನ ಬಂಡಿಯಲ್ಲಿ ಕುಟುಂಬದ ಸಮೇತ ಹೊಲಕ್ಕೆ ತೆರಳಿ ಚರಗ ಚೆಲ್ಲಿ ಭೂಮಿ ತಾಯಿಗೆ ನಮಿಸಿದರು.

ಹಚ್ಚ ಹಸಿರಿನಿಂದ ಕಂಗೊಳಿಸುವ ಭೂತಾಯಿಗೆ ಪೂಜಿಸುವ ಕಾರ್ಯ ಈ ವೇಳೆ ನಡೆಯುತ್ತದೆ. ಹೊಲದಲ್ಲಿನ ಬನ್ನಿ ಮರಕ್ಕೆ ಅಥವಾ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಾರೆ. ವರ್ಷವಿಡಿ ರೈತರು ಜಮೀನಿನಲ್ಲಿ ದುಡಿದಾಗ ಭೂತಾಯಿ ಬೆಳೆಯನ್ನು ಹಸಿರು ಹೊದಿಕೆಯಿಂದ ತುಂಬಿಸಿದ್ದು, ಹಸಿರು ಸೀರೆಯನ್ನುಟ್ಟು ನಿಂತಂತೆ ಭಾಸವಾಗುತ್ತದೆ. ಈ ವೇಳೆ ರೈತ ಕುಟುಂಬ ಭೂತಾಯಿಗೆ ನೈವೇದ್ಯ ಸಮರ್ಪಿಸುವುದು ಈ ಭಾಗದ ಸಂಪ್ರದಾಯ. ಮನೆಯಲ್ಲಿ ತಯಾರಿಸಿದ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಸಜ್ಜೆ ಕಡಬು, ಎರಡ್ಮೂರು ತರಹದ ಪಲ್ಯೆಗಳು, ತಟ್ಟೆಗೆ ಹಾಕಿಕೊಂಡು ಬೆಳೆಯ ಮಧ್ಯೆ ಸಜ್ಜಿರೊಟ್ಟಿ ಚವಳಿಕಾಯಿ ಚೇಂಗಬೋಲೊ... ಅಥವಾ ಹುಲ್ಲುಲ್ಲಗೋ ಸಲಂಬರಗೋ ಎಂಬ ಹರಕೆಯನ್ನು ಹೇಳುತ್ತಾ ಭೂತಾಯಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಈ ಮೂಲಕ ಭೂತಾಯಿ ಸಂತೃಪ್ತವಾದರೆ ಉತ್ತಮ ಫಸಲು ಕೊಡುತ್ತಾಳೆ ಎಂಬ ನಂಬಿಕೆಯ ಮೇಲೆ ಅನಾದಿ ಕಾಲದಿಂದ ಆಚರಣೆ ಮಾಡಲಾಗುತ್ತಿದೆ.

ಹಿಂದೂ-ಮುಸ್ಲಿಂ ಭಾವೈಕ್ಯತೆ

ರಂಜಾನ ಹಾಗೂ ಮೊಹರಂಗಳಲ್ಲಿ ಮುಸ್ಲಿಂ ಬಾಂಧವರು ಹಿಂದೂಗಳನ್ನು ಕರೆದು ಔತಣ ನೀಡುತ್ತಾರೆ. ಅದರಂತೆ ಮುಸ್ಲಿಂ ಮಹಿಳೆಯರು, ಪುರುಷರನ್ನು ಹಿಂದೂಗಳು ಈ ಎಳ್ಳು ಅಮವಾಸೆ ಹಬ್ಬದಲ್ಲಿ ತಮ್ಮ ಜಮೀನಿಗೆ ಕರೆಯಿಸಿ ಆಥಿತ್ಯ ನೀಡುತ್ತಾರೆ. ಮುಸ್ಲಿಂ ಬಾಂಧವರು ಆಗಮಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಎಳ್ಳು ಅಮವಾಸೆಗೆ ಮನೆಯಲ್ಲಿ ತರಹೇವಾರಿ ಖ್ಯಾದ್ಯಗಳನ್ನು ತಯಾರಿಸಲಾಗುತ್ತದೆ. ವಿಶೇಷವಾಗಿ ಶೇಂಗಾ ಹೋಳಿಗೆ, ಹೂರಣ ಹೋಳಿಗೆ, ಕಡಬು, ಸಜ್ಜಕ, ಪಾಯಸ, ಹುಗ್ಗಿ, ಸೇರಿದಂತೆ ಭೂರಿ ಭೋಜನ ತಯಾರಿಸಲಾಗಿರುತ್ತದೆ. ಜೋಳ ಹಾಗೂ ಸಜ್ಜೆಯ ಖಡಕ್ ರೊಟ್ಟಿ, ದಪಾಟಿ, ಮಿಕ್ಸ್ ಬಾಜಿ, ಕಾಳುಪಲ್ಯೆ, ಬದನೆಕಾಯಿ ಪಲ್ಯೆ, ಹಳಿ ಕಿಚಡಿ, ಮೊಸರು, ಚಟ್ನಿ, ಸಜ್ಜೆ ಕಡಬು, ಅನ್ನ, ಸಾರು, ಮಸಾಲಾ ರೈಸ್ ವಿವಿಧ ಬಗೆಯ ಭೋಜನ ಸವಿಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹಳೆಯ ಎತ್ತಿನ ಬಂಡಿಗಳು ಕಡಿಮೆಯಾಗಿದ್ದು, ಚಕ್ಕಗಳಿದ್ದವರು ಸಂಭ್ರಮದಿಂದ ಹೊಲಕ್ಕೆ ತೆರಳಿ ಚರಗ ಚೆಲ್ಲಿ ಕುಟುಂಬ ಸಮೇತರಾಗಿ ಭೋಜನ ಸವಿದು ಭೂಮಿ ತಾಯಿಯ ಆಶೀರ್ವಾದ ಪಡೆದು ಆಗಮಿಸುತ್ತಾರೆ. ಇದು ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಂಡು ಬರುವ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

ಕೋಟ್:

ರೈತರಿಗೆ ಭೂಮಿಯೇ ದೇವರು, ಭೂತಾಯಿ ಫಸಲು ನೀಡಿದರೆ ಮಾತ್ರ ರೈತರ ಬಾಳು ಹಸನಾಗಲಿದೆ. ಹಾಗಾಗಿ ಭೂತಾಯಿ ಬೆಳೆಯಿಂದ ಮೈತುಂಬಿಕೊಂಡು ನಿಂತಾಗ ಆಕೆಗೆ ನೈವೇದ್ಯ ಅರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತೇವೆ. ಜೊತೆಗೆ ಬಂಧುಬಳಗವನ್ನೆಲ್ಲ ಹೊಲಕ್ಕೆ ಕರೆದುಕೊಂಡು ಹೋಗಿ ಎಲ್ಲರೂ ಸೇರಿ ಸಂಭ್ರಮದಿಂದ ಎಳ್ಳು ಅಮವಾಸೆ ಆಚರಿಸಿ, ಊಟ ಸವಿಯುತ್ತೇವೆ.

ಪ್ರಕಾಶ ಕೌಲಗಿ, ಉಕುಮನಾಳ ನಿವಾಸಿ

Share this article