ಸಂವಿಧಾನ ಜಾಗೃತಿಗಾಗಿ 10 ಸಾವಿರ ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ

KannadaprabhaNewsNetwork |  
Published : Feb 18, 2024, 01:30 AM IST
17ಡಿಡಬ್ಲೂಡಿ1ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯಕ್ತವಾಗಿ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಶನಿವಾರ ಆಯೋಜಿಸಿದ್ದ ಪಾರಂಪರಿಕ ನಡಿಗೆಗೆ ಹಸಿರು ನಿಶಾನೆ ಮೂಲಕ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. | Kannada Prabha

ಸಾರಾಂಶ

ಪಾರಂಪರಿಕ ನಡಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 500ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

ಧಾರವಾಡ: ಭಾರತದ ಸಂವಿಧಾನ ಸಮಾನತೆಯ ಮೂಲವಾಗಿದೆ. ಸಂವಿಧಾನ ಭಾರತದ ಶ್ರೀಮಂತ ಪರಂಪರೆ, ಸ್ಮಾರಕ ಮತ್ತು ಇತಿಹಾಸದ ಶ್ರೀರಕ್ಷಕ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯಕ್ತವಾಗಿ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಮಾತನಾಡಿದರು.

ಸಂವಿಧಾನ ಜಾಗೃತಿ ಜಾಥಾಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಜಾಥಾ ಅಂಗವಾಗಿ ಪಾರಂಪರಿಕ ನಡಿಗೆ ಇಡೀ ರಾಜ್ಯಕ್ಕೆ ಪ್ರಥಮ. ಶಾಲಾ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ನಗರದ ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 500ಕ್ಕೂ ಹೆಚ್ಚು ಶಿಕ್ಷಕರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಪಾರಂಪರಿಕ ನಡಿಗೆಯ ಮೂಲಕ ಮಕ್ಕಳಲ್ಲಿ ಸಂವಿಧಾನದ ಮಹತ್ವ ತಿಳಿಸುವುದರೊಂದಿಗೆ ಧಾರವಾಡದ ಪ್ರಮುಖ, ಐತಿಹಾಸಿಕ ಸ್ಥಳಗಳ, ಸ್ಮಾರಕಗಳನ್ನು ಪರಿಚಯಿಸಲಾಗಿದೆ. ಮುಖ್ಯವಾಗಿ ಧಾರವಾಡದ ಜ್ಞಾನದ ಸಂಕೇತವಾದ ಕರ್ನಾಟಕ ಕಾಲೇಜು, ಡೈಯಟ್ ಸಂಸ್ಥೆ, ಯುನಿವರ್ಸಿಟಿ ಪಬ್ಲಿಕ ಸ್ಕೂಲ್, ಸರ್ಕಾರಿ ಆರ್ಟ್ ಗ್ಯಾಲರಿ, ಸೆಂಟ್ ಜೋಸೆಪ್ ಚರ್ಚ್‌, ಜುಬ್ಲಿ ವೃತ, ಕಡಪಾ ಮೈದಾನ, ಕರ್ನಾಟಕ ವಿದ್ಯಾವರ್ಧಕ ಸಂಘ, ಆರ್‌ಎಲ್‌ಎಸ್ ಕಾಲೇಜು ಮತ್ತು ಒಲ್ಡ್ ಡಿವೈಎಸ್‌ಪಿ ಸರ್ಕಲ್ ಮತ್ತು ಜಿಲ್ಲೆಯ ಪ್ರಮುಖ ಸಾಧಕರ ಇತಿಹಾಸವನ್ನು ಮಕ್ಕಳಿಗೆ ಪರಿಚಯಿಸಲಾಯಿತು ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಭೇಟಿ ನೀಡಿ, ತಂಗಿದ್ದ ಬುದ್ಧರಕ್ಕಿತ ವಸತಿ ಪ್ರೌಢ ಶಾಲೆಯ ಆವರಣದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿರುವುದು ಐತಿಹಾಸಿಕ ದಾಖಲೆಯಾಗಿದೆ. ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಸಮಾನತೆ, ಸಹೋದರತ್ವ ಮತ್ತು ಪರಸ್ಪರ ಸಾಮರಸ್ಯವನ್ನು ಸಂವಿಧಾನ ಬೆಳೆಸುತ್ತಿದೆ. ಆದ್ದರಿಂದ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿ, ಜಾಗೃತಗೊಳಿಸುವುದು ಅಗತ್ಯವಾಗಿದೆ ಎಂದರು.

ಇವಾಲ್ವ್ ಲೈವ್ಸ್ ಸಂಸ್ಥೆಯ ಮುಖ್ಯಸ್ಥೆ ಓಟಿಲಿ ಅನ್ಬನ್‌ಕುಮಾರ ಪಾರಂಪರಿಕ ನಡಿಗೆ ಉದ್ದಕ್ಕೂ ವಿದ್ಯಾರ್ಥಿಗಳಿಗೆ ಪ್ರತಿ ಐತಿಹಾಸಿಕ ಸ್ಥಳದ ಕುರಿತು ಹಿನ್ನೆಲೆ ವಿವರಿಸಿದರು. ಬುದ್ಧ ರಕ್ಕಿತ ವಸತಿ ಪ್ರೌಢಶಾಲಾ ಆವರಣದಲ್ಲಿ ಜಾಥಾವನ್ನು ಡಾ. ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ ವಂದಿಸಿದರು.

ಬಸವರಾಜ ಹಲಗಿ ನಿರೂಪಿಸಿದರು. ಬುದ್ಧರಕ್ಕಿತ ವಸತಿ ಪ್ರೌಢ ಶಾಲೆಯ ಆವರಣದಲ್ಲಿ ಸಮಾವೇಶಗೊಂಡಿದ್ದ ಶಹರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ, ಅತಿಥಿಗಳಿಗೆ ಸಾರ್ವಜನಿಕರಿಗೆ ಸಂವಿಧಾನ ಪಿಠೀಕೆಯನ್ನು ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಜಯ ಚಲವಾದಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ, ಜಿಪಂ ಸಿಇಒ ಸ್ವರೂಪ ಟಿ.ಕೆ., ಶಹರ ಶಿಕ್ಷಣಾಧಿಕಾರಿ ಅಶೋಕ ಸಿಂಧಗಿ, ಹಿರಿಯ ಸಾಹಿತಿ ಡಾ. ಗಣೇಶ ದೇವಿ, ಡಾ. ಸುರೇಖಾ ದೇವಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ, ಸಂತೋಷ ಜಕ್ಕಪ್ಪನವರ, ಜಿ.ಎಚ್. ನಾಗಾವಿ, ಪ್ರೊ. ಕೆ.ಜಿ. ಆಡೂರ, ಪ್ರಮುಖರಾದ ಅಶೋಕ ದೊಡಮನಿ, ಲಕ್ಷ್ಮಣ ಬಕ್ಕಾಯಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ