ರೈತರ ಹೋರಾಟ ಬೆಂಬಲಿಸಿ ರೈಲು ತಡೆ: ಬಂಧನ

KannadaprabhaNewsNetwork | Published : Mar 2, 2024 1:45 AM

ಸಾರಾಂಶ

ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ನಡೆಯುತ್ತಿರುವ ಹೋರಾಟ ಬೆಂಬಲಿಸಿ, ಹಾಗೂ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ, ಜಿಲ್ಲಾ ಘಟಕದ ವತಿಯಿಂದ ನಗರದ ರೈಲ್ವೇ ನಿಲ್ದಾಣ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ವತಿಯಿಂದ ನಡೆಯುತ್ತಿರುವ ಹೋರಾಟ ಬೆಂಬಲಿಸಿ, ಹಾಗೂ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ, ಜಿಲ್ಲಾ ಘಟಕದ ವತಿಯಿಂದ ನಗರದ ರೈಲ್ವೇ ನಿಲ್ದಾಣ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ರೈಲನ್ನು ತಡೆಯಲು ಹೊರಟ ಪ್ರತಿಭಟನಾಕಾರರನ್ನು ರೈಲು ಪೊಲೀಸರು ಮತ್ತು ರಾಜ್ಯ ಪೊಲೀಸರು ತಡೆದು ಬಂಧಿಸಿ ಕರೆದೊಯ್ದರು. ಜಿಲ್ಲಾ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ರೈತರ ಚಳುವಳಿಯ ಬಿಸಿ ಮುಟ್ಟಲು ಇಂದು ರಾಜ್ಯಾದ್ಯಂತ ರೈತ ಸಂಘಟನೆಗಳ ಒಕ್ಕೂಟ ರೈಲು ತಡೆ ನಡೆಸುತ್ತಿದ್ದೇವೆ ಎಂದರು. ರಾಜ್ಯದ ಎಲ್ಲಾ ರೈತರು ದೆಹಲಿಗೆ ಹೋಗಲು ಸಾಧ್ಯವಿಲ್ಲ ನಮ್ಮ ಪರವಾಗಿ ಕೆಲಸ ಮಾಡಬೇಕಾದ ಎಂಪಿಗಳು ನಿದ್ರೆ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರ ರೈತರ ಮೇಲೆ ಗೂಂಡಾಗಿರಿ ಮಾಡುತ್ತಿದೆ ಸರ್ಕಾರಕ್ಕೆ ರೈತರು ಬಿಸಿ ಮುಟ್ಟಿಸಲು ಈ ರೀತಿಯ ಚಳುವಳಿ ನಡೆಸುತ್ತಿದ್ದೇವೆ ಎಂದರು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಲು ಹೆಚ್ಚಿನ ಕಾಳಜಿ ಇರುತ್ತದೆ ಆದರೆ ರೈತರ ಸಾಲ ಮನ್ನಾ ವಿಚಾರ, ಸ್ವಾಮಿನಾಥನ್ ವರದಿ ಜಾರಿ, ಬೆಂಬಲ ಬೆಲೆ, ಡಬ್ಲ್ಯೂಟಿಓ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದು ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ೭೫೦ ರೈತ ಕುಟುಂಬಕ್ಕೆ ಸರ್ಕಾರದ ನೆರವು, ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗುತ್ತಿದೆ ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುತ್ತಾರೆ, ಇದು ದೇಶದ ರೈತನಿಗೆ ಮಾಡುವ ಅಪಮಾನವಾಗಿದೆ ಎಂದರು.

ರೈತರು ಗುಲಾಮರು, ಭಿಕ್ಷುಕರಲ್ಲ, ನಿಮಗೆ ಅಧಿಕಾರ ಶಾಶ್ವತ ಅಲ್ಲ ಕೂಡಲೇ ಸಮಸ್ಯೆ ಬಗೆಹರಿಸಿ ಅನ್ನದಾತನ ಋಣ ತೀರಿಸಿ ಎಂದು ಆಗ್ರಹಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟದ ರೈತರು ಯಾರು ದೇಶದ್ರೋಹಿಗಳಲ್ಲ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಭೂಪಾಲ್‌ನಲ್ಲಿ ತಡೆದು ಪೊಲೀಸರ ಮೂಲಕ ಬಂಧಿಸಿ ಮೂರು ದಿನದ ನಂತರ ವಾಪಸ್ ಕಳಿಸುತ್ತಾರೆ, ದೆಹಲಿಯಲ್ಲಿ ಹೋರಾಟ ಮಾಡುವ ಪಂಜಾಬ್ ಹರಿಯಾಣ ರೈತರನ್ನ ದೇಶ ವಿರೋಧಿಗಳು ಎನ್ನುತ್ತಾರೆ. ಇದರ ಅರ್ಥ ಏನು? ರೈತರು ಸಮಸ್ಯೆ ಬಗೆಹರಿಯುವ ತನಕ ಚಳುವಳಿಯಿಂದ ಹಿಂದೆ ಸರಿಯುವುದಿಲ್ಲ .ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್, ರಾಜಸ್ಥಾನ, ರೈತರ ಹೋರಾಟಕ್ಕೆ ನಾವು ಸದಾ ಜೊತೆಯಾಗಿರುತ್ತೇವೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ, ಉಡೀಗಾಲ ರೇವಣ್ಣ, ಸತೀಶ್, ಶಿವಸ್ವಾಮಿ, ಗುರುಪ್ರಸಾದ್, ನವೀನ, ಮಹೇಶ್, ಕುಮಾರ್, ರಘು, ನಾಗಣ್ಣ ಇತರರು ಭಾಗವಹಿಸಿದ್ದರು.

Share this article