ಅಳ್ನಾವರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ಅಮೃತ ರೈಲು ನಿಲ್ದಾಣ ಯೋಜನೆಯಡಿ ಪ್ರಗತಿಯಲ್ಲಿರುವ ಅಳ್ನಾವರ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಒಂದೆರಡು ತಿಂಗಳುಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವುದಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಅಳ್ನಾವರ ರೈಲು ನಿಲ್ದಾಣಕ್ಕೆ ಸೋಮವಾರ ಆಗಮಿಸಿದ್ದ ಸಚಿವರು, ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆ ಮಾಡಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಮುಂಬರುವ ನಾಲ್ಕು ವರ್ಷದಲ್ಲಿ ಎಲ್ಲ ರೈಲ್ವೆ ಕ್ರಾಸಿಂಗ್ ಗೇಟ್‌ಗಳನ್ನು ತೆರವುಗೊಳಿಸಿ ತಡೆ ರಹಿತ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ. ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ನಿಲ್ದಾಣಗಳಲ್ಲಿ ದೊರೆಯುತ್ತಿರುವ ಸೌಕರ್ಯಗಳು ಅಳ್ನಾವರ ನಿಲ್ದಾಣದಲ್ಲಿಯೂ ಸಿಗುವಂತೆ ಮಾಡುವ ಕಾರ್ಯಾಲೋಚನೆ ಕೇಂದ್ರ ಸರ್ಕಾರದ್ದಾಗಿದೆ ಎಂದರು.ಅಳ್ನಾವರ ನಿಲ್ದಾಣದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ ನಿಲ್ದಾಣಾಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಒತ್ತಾಯದಂತೆ ಈ ಭಾಗದ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಂತೆ ದಾಂಡೇಲಿಯಿಂದ ಹುಬ್ಬಳ್ಳಿ- ಬೆಂಗಳೂರು ರೈಲನ್ನು ಶೀಘ್ರದಲ್ಲಿ ಪ್ರಾರಂಭಿಸುವ ಭರವಸೆ ನೀಡಿದ ಸಚಿವರು, ವಿವಿಧ ರೈಲುಗಳಿಗೆ ಅಳ್ನಾವರ ನಿಲ್ದಾಣದಲ್ಲಿ ನಿಲುಗಡೆ ಕೋರಿ ಸಲ್ಲಿಸಿರುವ ಮನವಿಗಳನ್ನು ಪರೀಶೀಲಿಸಿ ರೈಲು ನಿಲುಗಡೆಗೆ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಪ್ರಧಾನಮಂತ್ರಿಗಳ ಸೂಚನೆಯಂತೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಪುನಾರಂಭಗೊಳಿಸುವುದರ ಜತೆಗೆ ಕರ್ನಾಟಕದ ಸುಮಾರು 70ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ₹2 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.ಬೆಳಗಾವಿ- ಬೆಂಗಳೂರು, ಜೋಧಪೂರ, ಗಾಂಧೀಧಾಮ, ಅಜ್ಮೀರ, ವಾಸ್ಕೋ ರೈಲುಗಳಿಗೆ ನಿಲುಗಡೆ ಸೇರಿದಂತೆ ರೈಲ್ವೆ ಕ್ರಾಸಿಂಗ್ ನಂ. 316 ಮೇಲ್ಸೇತುವೆ ಹಾಗೂ ಸ್ಥಗಿತಗೊಂಡಿರುವ ಕ್ರಾಸಿಂಗ್ ನಂ. 315ರ ಕುಂಬಾರಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ಕೆಳ ರಸ್ತೆ ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿಗಳನ್ನು ಸಲ್ಲಿಸಿದರು.ಅಳ್ನಾವರ ನಿಲ್ದಾಣದಲ್ಲಿ ಹಿಂದೆ ಇದ್ದ ಪಾರ್ಸಲ ಬುಕ್ಕಿಂಗ್ ಸೇವೆ ಸ್ಥಗಿತಗೊಂಡಿದ್ದು ಅನಾನೂಲಕತೆ ಬಗ್ಗೆ ಪ.ಪಂ ಅಧ್ಯಕ್ಷ ಅಮೋಲ ಗುಂಜೀಕರ ಅವರು ಸಚಿವರ ಗಮನ ತಂದಾಗ ತಕ್ಷಣ ಪಾರ್ಸಲ್ ಬುಕ್ಕಿಂಗ್ ಸೇವೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಸುನೀಲ ಹೆಗಡೆ, ಪಪಂ ಉಪಾಧ್ಯಕ್ಷ ಛಗನಲಾಲ್ ಪಟೇಲ, ಮಲ್ಲಪ್ಪ ಗಾಣಿಗೇರ, ಲಿಂಗರಾಜ ಮೂಲಿಮನಿ, ಶಿವಾಜಿ ಡೊಳ್ಳಿನ, ನಾರಾಯಣ ಮೋರೆ, ಪ.ಪಂ ಸದಸ್ಯರಾದ ನದೀಮ್ ಕಂಟ್ರಾಕ್ಟರ, ಮಂಗಲಾ ರವಳಪ್ಪನವರ, ಮಂಗೇಶ ದೇಶಪಾಂಡೆ, ಡಿಆರ್‌ಎಂ ಬೇಲಾ ಮೀನಾ, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಸತ್ಯಪ್ರಕಾಶ ಶಾಸ್ತ್ರೀ, ಅಜಯ ಶರ್ಮಾ ಇತರರಿದ್ದರು.