ಮಣ್ಣು, ನೀರಿನ ಸಂರಕ್ಷಣಾ ಕ್ರಮಗಳ ಕುರಿತು ರೈತರಿಗೆ ತರಬೇತಿ

KannadaprabhaNewsNetwork |  
Published : Aug 25, 2024, 01:46 AM IST
ಫೋಟೊ ಶೀರ್ಷಿಕೆ: 23ಆರ್‌ಎನ್‌ಆರ್4ರಾಣಿಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ. ರಶ್ಮಿ ಸಿ. ಎಮ್ ಮಾತನಾಡಿದರು. | Kannada Prabha

ಸಾರಾಂಶ

ಮಳೆಯ ಪ್ರಮಾಣ ಹೆಚ್ಚಾದಾಗ ಮಣ್ಣಿನಲ್ಲಿ ನೀರಿನ ಜೊತೆ ಪೋಷಕಾಂಶಗಳು ಕೊಚ್ಚಿಕೊಂಡು ಹೋಗುವುದರಿಂದ ಸಸ್ಯಗಳಲ್ಲಿ ಅವುಗಳ ಕೊರತೆ ಉಂಟಾಗಿ ಬೆಳೆಗಳು ಕೀಟ ಹಾಗೂ ರೋಗಕ್ಕೆ ತುತ್ತಾಗುತ್ತದೆ. ಇದರಿಂದ ಬೆಳೆ ಹಾನಿಯಾಗಿ ರೈತರಿಗೆ ನಷ್ಟವಾಗುತ್ತದೆ ಎಂದು ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಶ್ಮಿ ಸಿ.ಎಂ. ಹೇಳಿದರು.

ರಾಣಿಬೆನ್ನೂರು: ಮಳೆಯ ಪ್ರಮಾಣ ಹೆಚ್ಚಾದಾಗ ಮಣ್ಣಿನಲ್ಲಿ ನೀರಿನ ಜೊತೆ ಪೋಷಕಾಂಶಗಳು ಕೊಚ್ಚಿಕೊಂಡು ಹೋಗುವುದರಿಂದ ಸಸ್ಯಗಳಲ್ಲಿ ಅವುಗಳ ಕೊರತೆ ಉಂಟಾಗಿ ಬೆಳೆಗಳು ಕೀಟ ಹಾಗೂ ರೋಗಕ್ಕೆ ತುತ್ತಾಗುತ್ತದೆ. ಇದರಿಂದ ಬೆಳೆ ಹಾನಿಯಾಗಿ ರೈತರಿಗೆ ನಷ್ಟವಾಗುತ್ತದೆ ಎಂದು ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಶ್ಮಿ ಸಿ.ಎಂ. ಹೇಳಿದರು.

ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿಕ್ರಾ ಯೋಜನೆಯಡಿ ಮಣ್ಣು ಹಾಗೂ ನೀರಿನ ಸಂರಕ್ಷಣಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಹೊರ ಆವರಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಖುಷ್ಕಿ ಭೂಮಿಯಲ್ಲಿ ನೀರು ನಿಲ್ಲಿಸಿ ಕೆಸರು ಗದ್ದೆ ಮಾಡಿ ಭತ್ತ ಬಿತ್ತನೆ ಮಾಡುವುದನ್ನು ನಿಲ್ಲಿಸಿ ಕೂರಿಗೆ ಅಥವಾ ನೇರ ಬಿತ್ತನೆಗೆ ಒತ್ತು ಕೊಡಬೇಕು. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮ ನಿಭಾಯಿಸಲು ಮತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಒಡ್ಡು ಹಾಕುವುದು ಅಥವಾ ಚೌಕು ಮಡಿಗಳನ್ನು ಮಾಡಿ ಮಳೆ ನೀರು ನಿಲ್ಲಿಸಿ ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡಬೇಕು. ನೀರಾವರಿ ಪ್ರದೇಶದಲ್ಲಿ ಮೊದಲು ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ಮಾಡಿ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಸತತ ಮಳೆಯಿಂದಾಗಿ ಬೆಳೆಗಳಲ್ಲಿ ನಿಂತ ನೀರನ್ನು ಹೊರ ಹಾಕಬೇಕು. ಇಲ್ಲವಾದಲ್ಲಿ ಹೆಚ್ಚಿನ ತೇವಾಂಶ ಉಂಟಾಗಿ ಬೆಳವಣಿಗೆ ಕುಂಠಿತಗೊಂಡು ಪೋಷಕಾಂಶಗಳ ಕೊರತೆಯಿಂದಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ. ಇಂತಹ ಸಂದರ್ಭದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಬೆಳೆಗಳಿಗೆ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 13:0:45 ಪೋಟ್ಯಾಶಿಯಂ ನೈಟ್ರೇಟ್ ಅಥವಾ 19:19:19 ಇವುಗಳಲ್ಲಿ ಯಾವುದಾದರೊಂದು ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಬೆಳೆಗಳ ಮೇಲೆ 15 ದಿನಗಳ ಅಂತರದಲ್ಲಿ 2 ರಿಂದ 3 ಬಾರಿ ಸಿಂಪರಣೆ ಮಾಡಬೇಕು. ಬೇಸಿಗೆ ಹಂಗಾಮಿನ ಬೆಳೆಗಳ ಕಟಾವಿನ ನಂತರ ಮಣ್ಣು ಹಾಗೂ ನೀರಿನ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.

ಕೃಷಿಯಲ್ಲಿ ಬೆಳೆ ಅವಶೇಷಗಳ ಸುಡುವಿಕೆ ಸಂಪ್ರದಾಯ ಬಿಟ್ಟು ಮಣ್ಣಿನ ಮೇಲೆ ಹೊದಿಕೆ ಹಾಕುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಜೊತೆಗೆ ಮಣ್ಣಿಗೆ ಫಲವತ್ತತೆ ಹೆಚ್ಚಿಸಬಹುದು. ಅವೈಜ್ಞಾನಿಕ ರಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಮುಖರಾಗಿ ಸಾವಯವ ಗೊಬ್ಬರದ ಬಳಕೆಯ ಕಡೆ ರೈತರು ಗಮನ ಹರಿಸಬೇಕು. ಕೇವಲ ಯೂರಿಯಾ ಗೊಬ್ಬರಕ್ಕೆ ದುಂಬಾಲು ಬೀಳದೇ ಬೇರೆ ಸಂಯುಕ್ತ ರಸಗೊಬ್ಬರಗಳನ್ನು ಬೆಳೆಗಳಿಗೆ ಒದಗಿಸಲು ಹಾಗೂ ನಿರ್ವಹಣೆ ಮಾಡಬೇಕು ಎಂದರು.

ನಿಕ್ರಾ ಯೋಜನೆ ಹಿರಿಯ ಸಂಶೋಧಕಿ ಡಾ. ಲಕ್ಷ್ಮೀ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಮೇಲಿಂದ ಮೇಲೆ ಅತೀವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸುತ್ತಿರುವುದರಿಂದ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಹವಾಮಾನದ ಬದಲಾವಣೆಗೆ ತಕ್ಕಂತೆ ಮೂನ್ಸೂಚನೆ ನೋಡಿಕೊಂಡು ಸೂಕ್ತ ಕೃಷಿ ಚಟುವಟಿಕೆ ಅನುಸರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ ಹೊನ್ನಪ್ಪ ಗೌಡ್ರ ಹಾಗೂ ಗ್ರಾಮದ 25ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ