ಕನ್ನಡಪ್ರಭ ವಾರ್ತೆ ಬೆಂಗಳೂರು
ವೀರ ಸಾರ್ವಕರ್ ಮಾತ್ರವಲ್ಲ, ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಅವರನ್ನೂ ಆಗಿನ ಪ್ರಧಾನಿ ಜವಹರ್ ಲಾಲ್ ನೆಹರು ಬಿಟ್ಟಿರಲಿಲ್ಲ. ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಯತ್ನವನ್ನು ಕಾಂಗ್ರೆಸಿಗರು ನಿರಂತರವಾಗಿ ಮುಂದುವರಿಸಿದ್ದಾರೆ. ಸಾವರ್ಕರ್ ಅವರನ್ನು ತುಳಿಯುವುದು ರಾಷ್ಟ್ರೀಯತೆ ತುಳಿಯುವುದು ಎರಡೂ ಒಂದೇ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ಅವರ ಅನುವಾದಿತ ಕೃತಿ ‘ಸಾವರ್ಕರ್– ವಿಸ್ಮೃತಿಗೆ ಸರಿದ ಗತಕಾಲದ ಮಾರ್ದನಿಗಳು ಕ್ರಾಂತಿಸೂರ್ಯನ ಮೇಲೆ ಕ್ಷ–ಕಿರಣ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸಾವರ್ಕರ್ ಅವರನ್ನು ಯಾವ ರೀತಿ, ಹೇಗೆ ತುಳಿಯಲಾಗಿದೆ? ಅದರ ಹಿಂದಿನ ಉದ್ದೇಶ ಏನಾಗಿತ್ತು ಎನ್ನುವುದನ್ನು ಎಲ್ಲರಿಗೂ ತಿಳಿಸುವ ಅಗತ್ಯವಿದೆ. ಸಾವರ್ಕರ್ ಉದ್ದೇಶ ಅರ್ಥೈಸಿಕೊಳ್ಳದೆ ಒಂದೇ ಅಂಶವಿಟ್ಟುಕೊಂಡು ಆರೋಪ ಮಾಡಲಾಗುತ್ತಿದೆ. ಜತೆಗೆ ಜನತೆಯ ದಿಕ್ಕು ತಪ್ಪಿಸುವ ಕೆಲಸವನ್ನು ನೆಹರು ಆದಿಯಾಗಿ ಕಾಂಗ್ರೆಸಿಗರು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೆಹರು ಅವರನ್ನು ಮೇಲಕ್ಕೆತ್ತುವ, ಸಾವರ್ಕರ್ ಅವರನ್ನು ತುಳಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆದವು. ಕಠಿಣ ಕಾರಾಗೃಹ ಶಿಕ್ಷೆ ಅನುಭವದ ಅರಿವಿದ್ದ ಸಾವರ್ಕರ್ 52 ವರ್ಷ ಜೈಲು ಶಿಕ್ಷೆ ಘೋಷಣೆಯಾದಾಗ ಜೈಲಲ್ಲಿದ್ದರೆ ಗುರಿ ಸಾಧನೆ ಕಷ್ಟ ಎಂದರಿತು ನಿರ್ಧಾರ ಕೈಗೊಂಡಿದ್ದರು. ಆದರೆ, ಸ್ವಾತಂತ್ಯ ಬಳಿಕವೂ ಅವರನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು ವಿಷಾಧಿಸಿದರು.
ಗಾಂಧೀಜಿ ಹತ್ಯೆ ತನಿಖಾ ಸಮಿತಿ ಮೂಲಕ ಸಾವರ್ಕರ್ ಅವರನ್ನು ಸಿಕ್ಕಿಹಾಕಿಸುವ ಪ್ರಯತ್ನವನ್ನು ನೆಹರು ಮಾಡಿದರು. ಆಗ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಸ್ವತಃ ಯಾರಿಗೂ ತಿಳಿಯದಂತೆ ಈ ಸಂದೇಶವನ್ನು ಸಾವರ್ಕರ್ ಅವರಿಗೆ ರವಾನಿಸಿದ್ದರು. ಅಂಬೇಡ್ಕರ್ ಅವರನ್ನು ಕೂಡ ನೆಹರು ಬಿಟ್ಟಿರಲಿಲ್ಲ ಎಂದು ಹೇಳಿದರು.ಸಾವರ್ಕರ್‌ಗೆ ‘ಭಾರತ ರತ್ನ’ ಯಾಕಾಗಿ ಕೊಟ್ಟಿಲ್ಲ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ನನ್ನ ವಿಶ್ಲೇಷಣೆ ಪ್ರಕಾರ ಭಾರತ ರತ್ನ ಪ್ರಶಸ್ತಿ ಸಾವರ್ಕರ್ ಅವರಿಗೆ ದೊಡ್ಡದಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾವರ್ಕರ್ ಅವರಿಗೆ ಮರಣೋತ್ತರ ಈ ಪ್ರಶಸ್ತಿ ನೀಡಿರಲಿಕ್ಕಿಲ್ಲ ಎಂದು ಅಭಿಪ್ರಾಯಿಸಿದರು.
ಒಗ್ಗಟ್ಟಿನ ಕೊರತೆ, ಕ್ರಾಂತಿಕಾರಿಗಳು ಸುಸ್ತಾಗಿದ್ದ ವೇಳೆ ಬಂದ ಗಾಂಧೀಜಿ ಅಹಿಂಸಾ ಹೋರಾಟಕ್ಕೆ ಮುನ್ನುಡಿ ಬರೆದರು. ಏಟು ತಿನ್ನದೆ ಹೋರಾಟ ಮಾಡುವ ಈ ವಿಧಾನದಿಂದ ಗಾಂಧಿ ಜನಪ್ರಿಯರಾದರು. ಹಿಂದೂಗಳು ಹೋರಾಟದ ಮನೋಭಾವ ಕಳೆದುಕೊಳ್ಳಲು ಇದು ಕೂಡ ಕಾರಣವಾಯ್ತು ಎಂದರು.ಹಿರಿಯ ಲೇಖಕ ಬಾಬು ಕೃಷ್ಣಮೂರ್ತಿ, ರಾಷ್ಟ್ರೀಯತೆ, ಎಡ ಪಂಥೀಯ, ದಲಿತವಾದ ಸೇರಿ ಯಾವ ಕಡೆ ಹೋಗಬೇಕು ಎಂಬ ಗೊಂದಲ ಯುವಕರನ್ನು ಕಾಡುತ್ತಿದೆ. ದೇಶವನ್ನು ಕಟ್ಟುವ ಶಕ್ತಿಯಂತೆ ಒಡೆಯುವ ಶಕ್ತಿಗಳೂ ಇವೆ. ಇಂತ ಸಂದರ್ಭದಲ್ಲಿ ಸಾವರ್ಕರ್ ಸಾಹಿತ್ಯ ನಮ್ಮ ಸಂಸ್ಕೃತಿಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಿಸಲು ನೆರವಾಗುತ್ತದೆ ಎಂದು ತಿಳಿಸಿದರು.ಕೃತಿ ಅನುವಾದಕ ನರೇಂದ್ರ ಕುಮಾರ್ ಮಾತನಾಡಿದರು. ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ, ಪ್ರೊ.ಜಿ.ಎಲ್.ಶೇಖರ್ ಇದ್ದರು.ಸಾವರ್ಕರ್ ಅವರ ಬದುಕು ಜನತೆಗೆ ತಲುಪಬೇಕು ಎಂಬ ದೃಷ್ಟಿಯಿಂದ ಸಮಗ್ರ ಅಧ್ಯಯನ ಕೈಗೊಂಡೆ. ಸಾವರ್ಕರ್ ಯಾವ ಪಕ್ಷಕ್ಕೂ ಸೇರಿದವರಲ್ಲ, ಅವರು ರಾಜಕೀಯ ವ್ಯಕ್ತಿಯೂ ಅಲ್ಲ. ಇದು ಯಾರ ವಿರುದ್ಧವೂ ಅಲ್ಲ. ಕೇವಲ ದೇಶದ ನಿಜವಾದ ಇತಿಹಾಸ ಜನತೆಗೆ ತಿಳಿಯಬೇಕು ಎಂಬ ಕಾರಣಕ್ಕೆ ಕೃತಿ ರಚಿಸಿದ್ದೇನೆ.
-ಡಾ। ವಿಕ್ರಮ್ ಸಂಪತ್, ಕೃತಿ ಲೇಖಕ.