- ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿ ವಿರುದ್ಧ ದೂರು ಬಂದರೆ ಕಾನೂನು ಕ್ರಮ: ಡಿಸಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯ ಅಂಗನವಾಡಿಗಳಲ್ಲಿ ಖಾಲಿ ಇರುವ 50 ಕಾರ್ಯಕರ್ತೆಯರು, 282 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ಯಾರೂ ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಾಕೀತು ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕೆಲ ಲೋಪದೋಷ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆ ಲೋಪಗಳನ್ನು ಸರಿಪಡಿಸಲು ಅವಕಾಶಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದರು.ಸರ್ಕಾರದಿಂದ ಅನುಮತಿ ಸಿಕ್ಕ ನಂತರ ಲೋಪದೋಷ ಸರಿಪಡಿಸಲು ಆಯಾ ತಾಲೂಕು ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಾತ್ರವೇ ಅರ್ಜಿಯಲ್ಲಿನ ಲೋಪದೋಷ ಸರಿಪಡಿಸಲು ಹಾಗೂ ದಾಖಲೆಗಳನ್ನು ಅಪ್ ಲೋಡ್ ಮಾಡಲು ಅವಕಾಶ ನೀಡಲಾಗುವುದು. ಇದಕ್ಕಾಗಿ ಹೆಲ್ಪ್ ಡೆಸ್ಕ್ ಸಹ ಸ್ಥಾಪಿಸಿ, ಅಗತ್ಯ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗುವುದು. ಯಾವುದೇ ರೀತಿಯ ಅವ್ಯವಹಾರ ಕಂಡುಬಂದರೆ ನೇರವಾಗಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿ, ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ವಿರುದ್ಧವೂ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
25 ಕಿಮೀ ಸೈಕಲ್ ರ್ಯಾಲಿ:ಪರಿಸರ ಸಂರಕ್ಷಣೆಗೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಈ ಮಳೆಗಾಲ ಮುಗಿಯುವವರೆಗೂ ಪ್ರತಿ 15 ದಿನಕ್ಕೊಮ್ಮೆ ಸಸಿ ನೆಡುವ ಕಾರ್ಯ ನಡೆಯಲಿದೆ. ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಆರೈಕೆ ಮಾಡಲಾಗುವುದು. ಆನಗೋಡು ಹಾಗೂ ಜಿಪಂ ಪಕ್ಕದ ಅರಣ್ಯ ಇಲಾಖೆ ನರ್ಸರಿಯಲ್ಲಿ ಬೆಳೆಸಿದ ದೊಡ್ಡ ಗಿಡಗಳನ್ನು ನೆಡಲಾಗುವುದು. ಶೀಘ್ರವೇ ಪರಿಸರ ಜಾಗೃತಿಗೆ 25 ಕಿಮೀ ಸೈಕಲ್ ರ್ಯಾಲಿ ಸಹ ಹಮ್ಮಿಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಬಳಕೆಯನ್ನು ಜಿಲ್ಲಾಧಿಕಾರಿ ಕಚೇರಿ, ಸಿಇಒ ಕಚೇರಿ ಸೇರಿದಂತೆ ಅನೇಕ ಕಡೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅದೇ ರೀತಿ ಕಲ್ಯಾಣ ಮಂಟಪ, ಬಾರ್ ಅಂಡ್ ರೆಸ್ಟೋರೆಂಟ್, ವೈದ್ಯರ ಸಂಘ, ಬಟ್ಟೆ ಅಂಗಡಿ ಮಾಲಿಕರ ಜೊತೆಗೆ ಸಭೆ ನಡೆಸಿ ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ತಗ್ಗಿಸಲು ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.- - -
(ಸಾಂದರ್ಭಿಕ ಚಿತ್ರ)