ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ತನ್ನ ನೌಕರರ ಕುಂದುಕೊರತೆ ಆಲಿಸಲು ಕ್ಯೂ ಆರ್ ಕೋಡ್ ಹಾಗೂ ಒಟಿಪಿ ಆಧಾರಿತ ತಂತ್ರಾಂಶವನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿವೃದ್ಧಿಪಡಿಸಿ ಜಾರಿಗೊಳಿಸಿದೆ.
ಸಾರಿಗೆ ಸ್ಪಂದನೆ ಹೆಸರಲ್ಲಿ ಅಭಿವೃದ್ಧಿ ಪಡಿಸಿರುವ ಈ ತಂತ್ರಾಂಶ ಸಂಸ್ಥೆಯ ನೌಕರರ ವರ್ಗದಲ್ಲಿ ಸಂತಸವನ್ನುಂಟು ಮಾಡಿದೆ. ಈ ತಂತ್ರಾಂಶ ಅಭಿವೃದ್ಧಿ ಪಡಿಸಿರುವುದು ವಾಯವ್ಯ ಸಾರಿಗೆಯೇ ಮೊದಲು.
ಏನಿದು ತಂತ್ರಾಂಶ?
ಬೆಳಗಾವಿ, ಧಾರವಾಡ, ಚಿಕ್ಕೋಡಿ, ಗದಗ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ಹುಬ್ಬಳ್ಳಿ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಹೀಗೆ 6 ಜಿಲ್ಲೆಗಳ 9 ಘಟಕಗಳನ್ನು ಹೊಂದಿರುವ ದೊಡ್ಡ ನಿಗಮವಿದು. 15 ಸಾವಿರಕ್ಕೂ ಅಧಿಕ ಚಾಲಕ, ನಿರ್ವಾಹಕರಿದ್ದರೆ, ತಾಂತ್ರಿಕ ಸಿಬ್ಬಂದಿ, ಆಡಳಿತ ವಿಭಾಗ, ಅಧಿಕಾರಿ ವರ್ಗ ಹೀಗೆ ಎಲ್ಲರೂ ಸೇರಿ 21 ಸಾವಿರಕ್ಕೂ ಅಧಿಕ ನೌಕರ ವರ್ಗ ನಿಗಮದಲ್ಲಿದ್ದಾರೆ.
ನೌಕರರು, ನಿವೃತ್ತ ನೌಕರರು ಸಂಸ್ಥೆಯಿಂದ ತಮಗೆ ಬರಬೇಕಾದ ಸೌಲಭ್ಯಗಳ ಕುರಿತು ಏನಾದರೂ ಸಮಸ್ಯೆಯಿದ್ದರೆ ಅದನ್ನು ಕಚೇರಿಗೆ ಹೋಗಿಯೇ ಲೇಖಿಯ ಮೂಲಕವೇ ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಯಾವ ಹಂತದಲ್ಲಿದೆ ಎಂಬುದು ಕೂಡ ಗೊತ್ತಾಗುತ್ತಿರಲಿಲ್ಲ.
ಕೆಲವೊಮ್ಮೆ ಬೇರೆ ಬೇರೆ ಊರುಗಳಲ್ಲಿರುವ ಸಿಬ್ಬಂದಿ ತಮ್ಮ ಕುಂದುಕೊರತೆ ಸಲ್ಲಿಸಲು ವಿಭಾಗೀಯ ಕಚೇರಿಗೆ ಬರಬೇಕಿತ್ತು. ಇಡೀ ದಿನವೇ ಇದಕ್ಕಾಗಿ ಕಳೆಯುತ್ತಿತ್ತು.
ತಮ್ಮ ರಜೆಯನ್ನು ಇದಕ್ಕೆ ನೌಕರರ ವರ್ಗ ಮೀಸಲಿಡುವ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಹೀಗೆ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆಗುತ್ತಲೇ ಇರಲಿಲ್ಲ. ಕಾಣೆಯಾದ ಉದಾಹರಣೆಗಳು ಸಾಕಷ್ಟಿವೆ. ಆಗ ಮತ್ತೆ ಮತ್ತೆ ಅರ್ಜಿ ಸಲ್ಲಿಸುವಂತೆ ಅಧಿಕಾರಿ ವರ್ಗ ಹೇಳುತ್ತಿತ್ತು.
ಇದಕ್ಕೆಲ್ಲ ಪರಿಹಾರ ಎಂಬಂತೆ ಸರಳ ಹಾಗೂ ಸುಲಲಿತವಾಗಿರುವ ಪ್ರತ್ಯೇಕವಾದ ತಂತ್ರಾಂಶವನ್ನೇ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಪ್ರತಿ ಡಿಪೋದಲ್ಲಿ ತಂತ್ರಾಂಶದ "ಕ್ಯೂಆರ್ ಕೋಡ್ " ಅಳವಡಿಸಲಾಗಿದೆ.
ಆ ಕ್ಯೂರ್ ಕೋಡ್ ಸ್ಕ್ಯಾನ್ ಮಾಡುತ್ತಲೇ ತಂತ್ರಾಂಶದೊಳಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ss.itnwkrtc.inಗೆ ಲಾಗಿನ್ ಆಗಿ ಅಲ್ಲೂ ಸಲ್ಲಿಸಬಹುದಾಗಿದೆ.
ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಗುಜರಾಯಿಸಬಹುದಾಗಿದೆ. ಅರ್ಜಿ ಸಲ್ಲಿಕೆಯ ಮರುಕ್ಷಣವೇ ಒಟಿಪಿಯೂ ಬರುತ್ತದೆ. ಅದನ್ನು ನಮೂದಿಸಿದ ಮೇಲೆ ಸ್ವೀಕೃತಿಯ ಮಾಹಿತಿ ಕೂಡ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಬರುತ್ತದೆ.
ಏನೇನು ಸಮಸ್ಯೆ: ಇನ್‌ಕ್ರಿಮೆಂಟ್, ಗ್ರ್ಯಾಚ್ಯುಟಿ, ಪಿಂಚಣಿ, ಪಿಎಫ್ ಸೇರಿದಂತೆ ಕುಂದುಕೊರತೆಗಳಿದ್ದರೂ ದಾಖಲೆ ಸಮೇತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆ ಅರ್ಜಿ ಯಾವ ವಿಭಾಗಕ್ಕೆ ಸೇರಿದೆಯೋ ಆ ವಿಭಾಗದ ನಿಯಂತ್ರಣಾಧಿಕಾರಿ ಅದನ್ನು ಪರಿಶೀಲಿಸಿ ಇತ್ಯರ್ಥ ಪಡಿಸುತ್ತಾರೆ.
ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳೇ ಮೇಲುಸ್ತುವಾರಿ ನೋಡಿಕೊಳ್ಳುವುದರಿಂದ ಅರ್ಜಿ ಇತ್ಯರ್ಥಕ್ಕೆ ವಿಳಂಬ ಮಾಡಲು ಸಾಧ್ಯವಾಗಲ್ಲ. ಅರ್ಜಿದಾರನಿಗೆ ತನ್ನ ಅರ್ಜಿ ಯಾವ ಹಂತದಲ್ಲಿ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬರೀ ಕುಂದುಕೊರತೆಗಷ್ಟೇ ಸಂಸ್ಥೆಯ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ಈ ತಂತ್ರಾಂಶದ ಮೂಲಕ ನೀಡಬಹುದಾಗಿದೆ.
ಅಭಿವೃದ್ಧಿ ಪಡಿಸಿದ್ಯಾರು?
ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ ತಮ್ಮಲ್ಲಿನ ಆಂತರಿಕ ಸಂಪನ್ಮೂಲದಿಂದಲೇ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. 30ಕ್ಕೂ ಹೆಚ್ಚು ಅರ್ಜಿ ಈಗಾಗಲೇ ಬಂದಿವೆ ಯಂತೆ. ಅವುಗಳಲ್ಲಿ ಕೆಲವೊಂದಿಷ್ಟು ಇತ್ಯರ್ಥ ಕೂಡ ಆಗಿವೆ. ಒಟ್ಟಿನಲ್ಲಿ ತಮ್ಮ ಕುಂದುಕೊರತೆ ತಿಳಿಸಲೆಂದೇ ದಿನಗಟ್ಟಲೇ ಕಚೇರಿ ಅಲೆಯುವುದು ನೌಕರ ವರ್ಗಕ್ಕೆ ತಪ್ಪಿದಂತಾಗಿರುವುದಂತೂ ಸತ್ಯ.
ಸಾರಿಗೆ ಸ್ಪಂದನವು ಶೂನ್ಯ ವೆಚ್ಚದ ಯೋಜನೆ. ತಂತ್ರಾಂಶವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಕಚೇರಿಯ ಇಲಾಖೆಗಳ ಮುಖ್ಯಸ್ಥರು ಹಾಗೂ ವಿಭಾಗಿಯ ನಿಯಂತ್ರಣಧಿಕಾರಿಗಳಿಗೆ ಪ್ರತ್ಯೇಕ ಐಡಿ ಮತ್ತು ಪಾಸ್ವರ್ಡ್ ನೀಡಲಾಗಿದೆ.
ಇದರ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್. ರಾಮನಗೌಡರ ಮಾಹಿತಿ ನೀಡಿದರು.