ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಸುತ್ತ ನಡೆಸಲುದ್ದೇಶಿಸಿದ್ದ ಟ್ರಯಲ್ ಬ್ಲಾಸ್ಟ್ ವಿಚಾರಣೆಯನ್ನುಹೈಕೋರ್ಟ್ ಜು.30ಕ್ಕೆ ಮುಂದೂಡಿದೆ. ಇದರಿಂದ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ ಕೈಗೊಂಡಿದ್ದ ನೀರಾವರಿ ಮತ್ತು ಗಣಿ ಇಲಾಖೆಗೆ ಹಿನ್ನಡೆಯುಂಟಾಗಿದೆ.ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಆರಂಭದಲ್ಲಿ ಉತ್ಸಾಹ ತೋರಿದ್ದ ರಾಜ್ಯ ಸರ್ಕಾರ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂದೆ ಸರಿದಂತೆ ಕಂಡುಬರುತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲೂ ಟ್ರಯಲ್ ಬ್ಲಾಸ್ಟ್ ಅವಕಾಶ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ತಾಂತ್ರಿಕ ತಜ್ಞರು, ಅಡ್ವೋಕೇಟ್ ಜನರಲ್, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಅನುಮತಿ ನೀಡದಂತೆ ವಾಸ್ತವಾಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು. ಅಣೆಕಟ್ಟು ಸುರಕ್ಷತಾ ಸಮಿತಿಯಿಂದಲೂ ವರದಿ ಪಡೆದುಕೊಂಡು ಟ್ರಯಲ್‌ಬ್ಲಾಸ್ಟ್‌ಗೆ ಅನುಮತಿ ನೀಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅಣೆಕಟ್ಟೆಗೆ ಎದುರಾಗುವ ಅಪಾಯಗಳ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಡಿಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.ಆ ಹಿನ್ನೆಲೆಯಲ್ಲಿ ಸೋಮವಾರ (ಜು.15)ರಂದು ನೀರಾವರಿ ಇಲಾಖೆ ಟ್ರಯಲ್ ಬ್ಲಾಸ್ಟ್ ನಡೆಸಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇದ್ದು, ಸರ್ಕಾರ ಕಾಲಾವಕಾಶ ಕೋರಿರುವುದರಿಂದ ಜು.30ರವರೆಗೆ ವಿಚಾರಣೆಯನ್ನು ಮುಂದೂಡಿದೆ. ಟ್ರಯಲ್ ಬ್ಲಾಸ್ಟ್ ನಡೆಸಲು ಕೋರ್ಟ್ ಅನುಮತಿ ನೀಡದಂತೆ ಕಾನೂನಾತ್ಮಕ ಸಂಸ್ಥೆಗಳಿಂದ ವರದಿ ಪಡೆದುಕೊಂಡು ಕೆಆರ್‌ಎಸ್ ಸುರಕ್ಷತೆಗೆ ಪ್ರಧಾನ ಆದ್ಯತೆ ನೀಡುವುದು. ಅಗತ್ಯಬಿದ್ದರೆ ಅಣೆಕಟ್ಟು ಸುರಕ್ಷತಾ ಕಾಯಿದೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಟ್ರಯಲ್ ಬ್ಲಾಸ್ಟ್‌ಗೆ ಹೈಕೋರ್ಟ್ ಆದೇಶವಿರುವುದಾಗಿ ರೈತರ ದಾರಿತಪ್ಪಿಸಿ ಜು.7ರಂದೇ ಟ್ರಯಲ್ ಬ್ಲಾಸ್ಟ್ ನಡೆಸಲು ನೀರಾವರಿ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು ಬೇಬಿ ಬೆಟ್ಟದಲ್ಲಿ ಕುಳಿಗಳನ್ನು ನಿರ್ಮಿಸಿ ಪೂರ್ವಸಿದ್ಧತೆ ನಡೆಸಿದ್ದರು. ಜಾರ್ಖಂಡ್‌ನಿಂದ ವಿಜ್ಞಾನಿಗಳ ತಂಡವನ್ನು ಕರೆಸುವುದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಹಿಂದೆ ಸರಿಯುವಂತಾಗಿದೆ.