ಕಂಬಳ ಸಮಯ ಪಾಲನೆಗೆ ಆಧುನಿಕ ತಂತ್ರಜ್ಞಾನ ಟಚ್‌!

KannadaprabhaNewsNetwork | Published : Feb 1, 2024 2:03 AM

ಸಾರಾಂಶ

ಈ ಅತ್ಯಾಧುನಿಕ ವ್ಯವಸ್ಥೆಯನ್ನು ಫೆ.3ರಂದು ಕಿನ್ನಿಗೋಳಿಯಲ್ಲಿ ನಡೆಯಲಿರುವ ಐಕಳಬಾವ ಕಾಂತಬಾರೆ- ಬೂದಬಾರೆ ಕಂಬಳೋತ್ಸವದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ನಂತರ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಬದಲಾವಣೆ ಬೇಕಿದ್ದರೆ ಮಾಡಿ ಮುಂಬರುವ ಎಲ್ಲ ಕಂಬಳಗಳಲ್ಲಿ ಅಳವಡಿಸಲಾಗುತ್ತದೆ ಎಂದು ದೇವಿಪ್ರಸಾದ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಕಂಬಳದಲ್ಲಿ ಇದೇ ಮೊದಲ ಆಧುನಿಕ ತಂತ್ರಜ್ಞಾನ ಅಳವಡಿಸಲು ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ತೀರ್ಮಾನ ಕೈಗೊಂಡಿದೆ. ಕಂಬಳದ ಸಮಯ ಪರಿಪಾಲನೆಗಾಗಿ ಸ್ವಯಂ ಚಾಲಿತ ಸಮಯ ಗೇಟ್‌ ವ್ಯವಸ್ಥೆ ಹಾಗೂ ನಿಖರ ಫಲಿತಾಂಶ ಪಡೆಯಲು ಫೋಟೊ ಫಿನಿಶ್‌ ತಂತ್ರಜ್ಞಾನ ಅಳವಡಿಸಲು ಸಮಿತಿ ಮುಂದಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಶೆಟ್ಟಿ ಬೆಳಪು, ಸುಮಾರು 24 ಗಂಟೆ ನಡೆಯಬೇಕಾದ ಕಂಬಳ 2-3 ದಿನಗಳ ಕಾಲ ಮುಂದುವರಿಯುವುದೂ ಇದೆ. ನಿಗದಿತ ಸಮಯದೊಳಗೆ ಕಂಬಳ ಮುಕ್ತಾಯಗೊಳಿಸಲು ಕಟ್ಟುಪಾಡುಗಳನ್ನು ಮನಗಂಡು ಈ ನೂತನ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದರು.ಫೆ.3ರಂದು ಪ್ರಾಯೋಗಿಕ ಜಾರಿ: ಈ ಅತ್ಯಾಧುನಿಕ ವ್ಯವಸ್ಥೆಯನ್ನು ಫೆ.3ರಂದು ಕಿನ್ನಿಗೋಳಿಯಲ್ಲಿ ನಡೆಯಲಿರುವ ಐಕಳಬಾವ ಕಾಂತಬಾರೆ- ಬೂದಬಾರೆ ಕಂಬಳೋತ್ಸವದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ನಂತರ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಬದಲಾವಣೆ ಬೇಕಿದ್ದರೆ ಮಾಡಿ ಮುಂಬರುವ ಎಲ್ಲ ಕಂಬಳಗಳಲ್ಲಿ ಅಳವಡಿಸಲಾಗುತ್ತದೆ ಎಂದು ದೇವಿಪ್ರಸಾದ್‌ ತಿಳಿಸಿದರು.ಅದಾನಿ ಸಂಸ್ಥೆ ವೆಚ್ಚ: ಈ ಆಧುನಿಕ ವ್ಯವಸ್ಥೆಗೆ 10 ಲಕ್ಷ ರು. ವೆಚ್ಚ ತಗುಲಿದ್ದು, ಅದಾನಿ ಸಮೂಹ ಸಂಸ್ಥೆಯು ಭರಿಸಿದೆ. ಈ ಸಂದರ್ಭ 10 ಲಕ್ಷ ರು.ಗಳ ಚೆಕ್‌ನ್ನು ಸಮಿತಿಗೆ ಹಸ್ತಾಂತರಿಸಿ ಮಾತನಾಡಿದ ಅದಾನಿ ಸಮೂಹ ಸಂಸ್ಥೆಯ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್‌ ಆಳ್ವ, ಕಂಬಳವು ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ತಂತ್ರಜ್ಞಾನ ಇರುವಾಗಲೂ ಕಂಬಳ ವಿಳಂಬ ಆಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಮುಂದೆ ಕಂಬಳ ಅಕಾಡೆಮಿ ಮಾಡಬೇಕಾಗಿದೆ, ಅದಕ್ಕೂ ಅದಾನಿ ಸಂಸ್ಥೆಯ ಬೆಂಬಲ ಇದೆ ಎಂದು ಹೇಳಿದರು.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕಂಬಳ ಭವನ ನಿರ್ಮಾಣಕ್ಕಾಗಿ ಪಿಲಿಕುಳದಲ್ಲಿ ೨ ಎಕರೆ ಜಾಗ ಕೇಳಿದ್ದು, ಶೀಘ್ರ ಕಾರ್ಯಗತವಾಗುವ ನಿರೀಕ್ಷೆಯಿದೆ. ಅಲ್ಲಿ ಕಂಬಳಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದರು.

ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ರೋಹಿತ್‌ ಹೆಗ್ಡೆ ಎರ್ಮಾಳ್‌, ಮಾಜಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಮುಖರಾದ ಲೋಕೇಶ್‌ ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ಶ್ರೀಕಾಂತ್ ಭಟ್‌, ಚಂದ್ರಹಾಸ ಶೆಟ್ಟಿ ಮತ್ತಿತರರಿದ್ದರು.ಹೊಸ ವ್ಯವಸ್ಥೆ ಕಾರ್ಯ ನಿರ್ವಹಣೆ ಹೇಗೆ?: ಸ್ವಯಂಚಾಲಿತ ಸಮಯ ಗೇಟ್‌ನ್ನು ಕಂಬಳ ಕರೆಯ ಓಟದ ಆರಂಭದಲ್ಲಿ ಅಳವಡಿಸಲಾಗುತ್ತದೆ. ಸ್ಪರ್ಧೆಗೆ ಅಣಿಯಾದ ಕೋಣ ಮಾಲೀಕರು ನಿಗದಿತ ಸಮಯದೊಳಗೆ ಕೋಣಗಳನ್ನು ಕರೆಗೆ ಬಿಡಬೇಕು. ಕರೆಗೆ ತಂದ ಬಳಿಕ ಮತ್ತೆ ನಿಗದಿತ ಕಾಲಾವಕಾಶ ನೀಡಲಾಗುವುದು. ಆ ಕಾಲಾವಕಾಶ ಮುಗಿದ ಕೂಡಲೆ ಸ್ವಯಂಚಾಲಿತವಾಗಿ ಗೇಟ್ ತೆರೆದು ಓಟ ಆರಂಭವಾಗಲಿದೆ. ಕೋಣ ಕರೆಗಿಳಿಸಲು ವಿಳಂಬವಾದರೆ ಆ ಸ್ಪರ್ಧೆ ಮುಂದೂಡಿ, ಮುಂದಿನ ಸ್ಪರ್ಧೆಯ ಕೋಣಗಳಿಗೆ ಅವಕಾಶ ನೀಡಲಾಗುತ್ತದೆ.ಇದೇ ರೀತಿ, ಕರೆಯ ಅಂತ್ಯದಲ್ಲಿ ಓಟದ ನಿಖರ ಫಲಿತಾಂಶ ಪಡೆಯಲು ಈ ಹಿಂದೆ ಲೇಸರ್ ಫಿನಿಶಿಂಗ್‌ ತಂತ್ರಜ್ಞಾನ ಅಳವಡಿಸಲಾಗಿತ್ತು. ಇದೀಗ ಫೋಟೊ ಫಿನಿಶಿಂಗ್‌ ಮೂಲಕ ಅತ್ಯಂತ ನಿಖರವಾದ ಫಲಿತಾಂಶ ಸಿಗಲಿದೆ. ಇದರಿಂದ ಕಂಬಳ ಫಲಿತಾಂಶದಲ್ಲಿ ಉದ್ಭವಿಸಬಹುದಾದ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ತಾಂತ್ರಿಕ ವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ರತ್ನಾಕರ್‌ ವಿವರಿಸಿದರು.

Share this article