ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಪ್ರಥಮ ರಾಷ್ಟ್ರಪತಿ, ಪಿಎಂ, ಇತರರಿಗೆ ಗೌರವ

KannadaprabhaNewsNetwork | Updated : Dec 17 2024, 05:27 AM IST

ಸಾರಾಂಶ

ದೇಶಕ್ಕೆ ಸೇವೆ ಸಲ್ಲಿಸಿದ ನಾಯಕರಿಗೆ ಗೌರವ ನೀಡುವ ಸಲುವಾಗಿ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಅಳವಡಿಸಲಾಗಿರುವ ವಿವಿಧ ನಾಯಕರ ತೈಲವರ್ಣ ಭಾವಚಿತ್ರವನ್ನು ಸೋಮವಾರ ಅನಾವರಣಗೊಳಿಸಲಾಯಿತು.

 ವಿಧಾನಸಭೆ : ದೇಶಕ್ಕೆ ಸೇವೆ ಸಲ್ಲಿಸಿದ ನಾಯಕರಿಗೆ ಗೌರವ ನೀಡುವ ಸಲುವಾಗಿ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಅಳವಡಿಸಲಾಗಿರುವ ವಿವಿಧ ನಾಯಕರ ತೈಲವರ್ಣ ಭಾವಚಿತ್ರವನ್ನು ಸೋಮವಾರ ಅನಾವರಣಗೊಳಿಸಲಾಯಿತು.

ದೇಶದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌, ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು, ಮೊದಲ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌, ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ತೈಲವರ್ಣದ ಭಾವಚಿತ್ರ ಹಾಗೂ ಈ ಹಿಂದೆಯೇ ಅಳವಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಆಧ್ಯಾತ್ಮಿಕ ಚಿಂತಕ ಸ್ವಾಮಿ ವಿವೇಕಾನಂದ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಮರುವಿನ್ಯಾಸಗೊಂಡ ತೈಲವರ್ಣದ ಭಾವಚಿತ್ರ ಅಳವಡಿಸಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್‌ ಯು.ಟಿ.ಖಾದರ್‌ ತೈಲವರ್ಣ ಭಾವಚಿತ್ರ ಅನಾವರಣಗೊಳಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿವಿಧ ಸಚಿವರು ಉಪಸ್ಥಿತರಿದ್ದರು.

ದೇವೇಗೌಡ ಭಾವಚಿತ್ರಕ್ಕೆ ಆಗ್ರಹ: ಭಾವಚಿತ್ರ ಉದ್ಘಾಟನೆ ನಂತರ ಮಾತನಾಡಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಯಾವ ಮಾನದಂಡದಲ್ಲಿ ಈ ಭಾವಚಿತ್ರವನ್ನು ಅಳವಡಿಸಿದ್ದೀರಿ ಎಂಬುದನ್ನು ತಿಳಿಸಬೇಕು ಎಂದು ಸ್ಪೀಕರ್‌ ಅವರನ್ನು ಪ್ರಶ್ನಿಸಿದರು.ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಎಚ್‌.ಕೆ.ಪಾಟೀಲ್‌, ಯಾವುದೇ ಭಾರತೀಯ ಈ ಪ್ರಶ್ನೆ ಕೇಳಬಾರದು. ಭಾವಚಿತ್ರ ಹಾಕಿರುವವರೆಲ್ಲರೂ ಮಹನೀಯರಾಗಿದ್ದಾರೆ. ಅದರ ಬಗ್ಗೆ ಸ್ಪೀಕರ್‌ ವಿವರಣೆ ಕೊಡುವ ಅವಶ್ಯಕತೆಯಿಲ್ಲ ಎಂದರು.

ಅದಕ್ಕೆ ಧ್ವನಿಗೂಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಜೆಪಿ ಸರ್ಕಾರವಿದ್ದಾಗ ವಿ.ಡಿ.ಸಾವರ್ಕರ್‌ ಅವರ ಭಾವಚಿತ್ರ ಹಾಕಲಾಯಿತು. ಆಗ ನಾವು ಯಾವುದೇ ಪ್ರಶ್ನೆ ಕೇಳಿರಲಿಲ್ಲ ಎಂದು ತಿಳಿಸಿದರು.ಅದನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಸೇವೆ ಮಾಡಿದವರ ಭಾವಚಿತ್ರ ಹಾಕಿದ್ದೀರಿ. ಸ್ಪೀಕರ್‌ ಅವರು ವಿವೇಚನೆ ಮೇರೆಗೆ ಹಾಕಿದ್ದೀರಿ. ರಾಷ್ಟ್ರನಾಯಕರು, ದಿವಂಗತರಾದವರ ಭಾವಚಿತ್ರ ಹಾಕಿದ್ದೀರಿ. ಅದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.ನಂತರ ಸುರೇಶ್‌ ಬಾಬು, ರಾಜ್ಯದಿಂದ ಪ್ರಧಾನಿಯಾದಂತಹ ಎಚ್‌.ಡಿ.ದೇವೇಗೌಡ ಅವರ ಭಾವಚಿತ್ರವನ್ನು ಹಾಕಬೇಕು ಎಂದು ಮನವಿ ಮಾಡಿದರು. ಆಗ ಬಿಜೆಪಿ ಶಾಸಕರು, ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನೂ ಹಾಕುವಂತೆ ಕೋರಿದರು.

ಎಲ್ಲದಕ್ಕೂ ಉತ್ತರಿಸಿದ ಯು.ಟಿ.ಖಾದರ್‌, ವಾಜಪೇಯಿ, ದೇವೆಗೌಡ ಅವರ ಮೇಲೆ ನನಗೂ ಗೌರವವಿದೆ. ಅದಕ್ಕಿಂತ ಹೆಚ್ಚಾಗಿ ರಾಜೀವ್‌ ಗಾಂಧಿ ಅವರ ಮೇಲೆ ಗೌರವವಿದೆ. ಆದರೂ, ಅವರ ಭಾವಚಿತ್ರ ಹಾಕಿಲ್ಲ. ಇನ್ನು ದಿವಂಗತರಾದವರ ಭಾವಚಿತ್ರ ಮಾತ್ರ ಹಾಕುತ್ತೇವೆ. ಅದನ್ನು ಹೊರತು ರಾಜಕೀಯ ಉದ್ದೇಶಕ್ಕೆ ಭಾವಚಿತ್ರ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Share this article