ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ಷುಲ್ಲಕ ಕಾರಣಕ್ಕೆ ಗೃಹಿಣಿ ನಾಲ್ಕು ತಿಂಗಳ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಇಲ್ಲಿಗೆ ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಕೈಕಾಡು ಗ್ರಾಮದ ನಿವಾಸಿ ಅರುಣ-ಸ್ವಾತಿ ದಂಪತಿ ಪುತ್ರಿ ತನೀಷ್ ಬೊಳ್ಳಮ್ಮ (26) ಮೃತರು. ಇವರು ವಿರಾಜಪೇಟೆ ಸಮೀಪದ ಕೊಲತ್ತೋಡು, ಬೈಗೋಡು ಗ್ರಾಮದ ನಿವಾಸಿ ಶಿರಾಗ್ ತಮ್ಮಯ್ಯ ಅವರನ್ನು ಮದುವೆಯಾಗಿದ್ದು ನಾಲ್ಕು ತಿಂಗಳ ಗಂಡು ಮಗು ಇದೆ. ಕಳೆದ ಏಳು ತಿಂಗಳಿಂದ ಹೆರಿಗೆಗೆ ಬಂದವಳು ಕೈಕಾಡು ಗ್ರಾಮದಲ್ಲಿ ತವರು ಮನೆಯಲಿದ್ದಳು. ತನೀಷ್ ಬೊಳ್ಳಮ್ಮ ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು ತಂದೆ ಅರುಣ ಮತ್ತು ತಾಯಿ ಸ್ವಾತಿ ಮೊಬೈಲ್ ಅತಿಯಾದ ಬಳಕೆಯಿಂದ ಹಾನಿಯಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದ ಈಕೆ ಮಂಗಳವಾರ ಮುಂಜಾನೆ ಶೌಚಾಲಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ತಂದೆ ಅರುಣ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಾಲಕ ಗಂಭೀರ ಗಾಯ:
ಕಾರು ಮತ್ತು ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಬೊಳಿಬಾಣೆ ಎಂಬಲ್ಲಿ ಮಂಗಳವಾರ ನಡೆದಿದೆ.ಮೂರ್ನಾಡಿನಿಂದ ನಾಪೋಕ್ಲಿನತ್ತ ಚಲಿಸುತ್ತಿದ್ದ ಆಟೋಗೆ ನಾಪೋಕ್ಲಿನಿಂದ ಮೂರ್ನಾಡಿನತ್ತ ಹೊದವಾಡ ಅಜಾದ್ ನಗರದ ನಿವಾಸಿ ಬುರ್ಹಾನ್ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದ್ದು ಆಟೋ ಜಖಂಗೊಂಡಿದೆ. ಆಟೋವನ್ನು ಚಾಲಕ ಕೊಕೇರಿ ಗ್ರಾಮದ ನಿವಾಸಿ ಮಚ್ಚಂಡ ಶಂಭು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಆಟೋ ಚಾಲಕ ಶಂಭು ಅವರಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.