ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಆಡಗಿರುವ ಜ್ಞಾನ ವಿಕಾಸವೇ ನಿಜವಾದ ಶಿಕ್ಷಣ: ವಿಶ್ವನಾಥ್

KannadaprabhaNewsNetwork | Published : Dec 19, 2024 12:34 AM

ಸಾರಾಂಶ

ನರಸಿಂಹರಾಜಪುರ, ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಅಡಗಿರುವ ಜ್ಞಾನದ ವಿಕಾಸವೇ ನಿಜವಾದ ಶಿಕ್ಷಣ ಎಂದು ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವನಾಥ್ ಹೇಳಿದರು.

ಶೆಟ್ಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಅಡಗಿರುವ ಜ್ಞಾನದ ವಿಕಾಸವೇ ನಿಜವಾದ ಶಿಕ್ಷಣ ಎಂದು ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವನಾಥ್ ಹೇಳಿದರು.

ಬುಧವಾರ ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಉಪನ್ಯಾಸ ನೀಡಿ, ಶಿಕ್ಷಣವೆಂದರೆ ಅದು ಶಿಕ್ಷೆಯಲ್ಲ. ಶಿಕ್ಷಕ, ವಿದ್ಯಾರ್ಥಿ ಮತ್ತು ಪೋಷಕರ ಸಹಭಾಗಿತ್ವದಿಂದ ಶಿಕ್ಷಣ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಏಕೆಂದರೆ, ಪಾಠ ಮಾಡುವುದು ಶಿಕ್ಷಕರ ಕೆಲಸ. ಅದನ್ನು ಕಲಿತು ಕರಗತಗೊಳಿಸಿಕೊಳ್ಳುವುದು ವಿದ್ಯಾರ್ಥಿಗಳ ಕೆಲಸ. ವಿದ್ಯಾರ್ಥಿಗಳಿಗೆ ನಡೆ, ನುಡಿ, ಆಚಾರ, ವಿಚಾರ ಸಂಸ್ಕಾರಗಳನ್ನು ಕಲಿಸಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ. ಈ ಮೂರೂ ಜನರು ಅವರವರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದರೆ ಮಾತ್ರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿತವಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಶೇ. 50 ರಷ್ಟು ವಿದ್ಯೆ ಕಲಿತರೆ ಇನ್ನು ಶೇ. 50 ರಷ್ಟು ವಿದ್ಯೆಯನ್ನು ಮನೆಯಲ್ಲೇ ಪಡೆಯಬೇಕು ಎಂದರು.ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಾರ್ಷಿಕೋತ್ಸವ ಎಂಬುದು ಮಕ್ಕಳ ಹಬ್ಬವಾಗಿದೆ. ಮಕ್ಕಳಲ್ಲಿ ಅಡಗಿರುವ ಕ್ರೀಡಾಸಕ್ತಿ, ಸಾಂಸ್ಕೃತಿಕ ಪ್ರತಿಭೆಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಶಾಲಾಭಿವೃದ್ಧಿ ಸಮಿತಿ ಸಹಕಾರದಿಂದ ಶಾಲೆ ಅಭಿವೃದ್ದಿ ಹೊಂದಲಿದೆ ಎಂದರು.ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ಕುಮಾರ್,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಶಾಲೆ ಪ್ರಭಾರಿ ಶಿಕ್ಷಕಿ ಪಿ.ವಿ.ಶುಭ ಅವರನ್ನು ಹಾಗೂ ದಾನಿಗಳಾದ ಎನ್.ಎಂ.ಕಾಂತರಾಜ್, ಮಳಲಿಅಕ್ಷತ್, ಅತಿಥಿ ಶಿಕ್ಷಕಿ ಗಾಯಿತ್ರಿ, ಸಹಪ್ರಾಧ್ಯಾಪಕ ವಿಶ್ವನಾಥ್, ಬಣಗಿರಾಜೇಂದ್ರ, ಸದ್ದಾಂ, ನಿವೃತ್ತ ಶಿಕ್ಷಕರಾದ ಹನುಮಂತಪ್ಪ ಛಲವಾದಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಎ.ಬಿ.ಮಂಜುನಾಥ್, ಶೈಲಾಮಹೇಶ್, ವಾಣಿ ನರೇಂದ್ರ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಕ್ಷತ್‌ಮಳಲಿ, ನಿವೃತ್ತ ಮುಖ್ಯ ಶಿಕ್ಷಕಿ ಪುಟ್ಟಮ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸುಭಾಷ್, ತಾಲೂಕು ಸಂಘದ ಖಜಾಂಚಿ ಬಿ.ಟಿ.ಪ್ರಕಾಶ್, ಸಿಆರ್‌ಪಿ ತಿಮ್ಮಮ್ಮ, ಪಿಡಿಓ ವಿಂದ್ಯಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಇದ್ದರು.

Share this article