ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ, ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ವಿರುದ್ಧ ಕ್ರಮ ತೆಗೆದುಕೊಳ್ಳದೆ ರಕ್ಷಣೆ ಮಾಡುತ್ತಿದೆ ಎಂದು ಆಪಾದಿಸಿ ಸಂಸದ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.ಭದ್ರಮ್ಮ ವೃತ್ತದ ಜಿಲ್ಲಾ ಬಿಜೆಪಿ ಕಚೇರಿಯಿಂದ ಸಂಸದರ ಮುಂದಾಳತ್ವದಲ್ಲಿ ಬಿಜೆಪಿ ಕರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೊರಟು ಸನಿಹದಲ್ಲೇ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಲು ಪ್ರಯತ್ನಿಸಿದರು. ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು, ಕಾಂಗ್ರೆಸ್ ಕಚೇರಿಗೆ ನುಗ್ಗುವ ಬಿಜೆಪಿ ಕಾರ್ಯಕರ್ತರನ್ನು ತಡೆದರು. ಈ ವೇಳೆ ಪೊಲೀಸರು ಹಾಗೂ ಕರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಎರಡು ವ್ಯಾನ್‌ಗಳಲ್ಲಿ ತುಂಬಿಕೊಂಡು ಹೋದರು.
ಈ ವೇಳೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು, ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ರಕ್ಷಣೆ ನೀಡುತ್ತಿದೆ. ರಾಜ್ಯ ಸರ್ಕಾರದ ಆಡಳಿತ ಮನೆಯಾದ ವಿಧಾನಸೌಧದಲ್ಲಿ ಕಿಡಿಕೇಡಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ಧ. ಆ ಕಿಡಿಗೇಡಿಯನ್ನು ಬಂಧಿಸಿ, ಅವನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.ಮತರಾಜಕಾರಣಕ್ಕಾಗಿ ದೇಶದ್ರೋಹಿಗಳ ಬೆಂಬಲಕ್ಕಿರುವ ಕಾಂಗ್ರೆಸ್ ನಾಯಕರ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ. ದೇಶದ್ರೋಹಿಗಳನ್ನು ಬಗ್ಗುಬಡಿಯದಿದ್ದರೆ ದೇಶದಲ್ಲಿ ದೊಡ್ಡ ಅನಾಹುತಗಳಾಗುವ ಅಪಾಯವಿದೆ, ಸರ್ಕಾರ ಇಂತಹವರನ್ನು ಮೊಳಕೆಯಲ್ಲೇ ಚುವುಟಿಹಾಕಬೇಕು ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ದೇಶದ್ರೋಹಿಗಳನ್ನು ಬೆಂಬಲಿಸುತ್ತಿರುವ ರಾಜ್ಯ ಕಾಂಗ್ರೆಸ್ ತೊಲಗಬೇಕು. ಶಕ್ತಿಸೌಧ ವಿಧಾನಸೌಧದಲ್ಲೇ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರೂ ಕಾಂಗ್ರೆಸ್‌ನವರು ಅವನ ಪರವಾಗಿ ನಿಂತಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾದ ಪುಂಡರ ತಂಡದ ನಾಸಿರ್ ಹುಸೇನ್‌ಗೆ ನಾಚಿಕೆಯಾಗಬೇಕು. ನಾಸಿರ್ ಹುಸೇನ್ ಹಾಗೂ ಅವರ ಬೆಂಬಲಿಗರನ್ನು ಕೂಡಲೇ ಬಂಧಿಸಿ ದೇಶದಿಂದ ಗಡಿಪಾರು ಮಾಡಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮರ್ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬಿಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಮುಖಂಡರಾದ ಎಸ್.ಪಿ. ಚಿದನಂದ್, ನಗರ ಅದ್ಯಕ್ಷ ಹನುಮಂತರಾಜು, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ, ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್, ಸಿ.ಎನ್. ರಮೇಶ್, ವಿಷ್ಣುವರ್ಧನ್, ಮಂಜುನಾಥ್, ಜಿಲ್ಲಾ ಮಾಧ್ಯಮ ಪ್ರಮುಖ ಟಿ.ಆರ್. ಸದಾಶಿವಯ್ಯ, ಮುಖಂಡರಾದ ಎಚ್.ಎನ್. ಚಂದ್ರಶೇಖರ್, ರುದ್ರೇಶ್, ಬೆಳ್ಳಿ ಲೋಕೇಶ್, ರವೀಶಯ್ಯ, ಗಣೇಶ್, ವಿರೂಪಾಕ್ಷಪ್ಪ, ಚೇತನ್, ಕೆ. ವೇದಮೂರ್ತಿ, ವಕ್ತಾರ ಜಗದೀಶ್, ಪ್ರೇಮಾ ಹೆಗಡೆ, ಧನುಷ್, ಸತ್ಯಮಂಗಲ ಜಗದೀಶ್, ಬನಶಂಕರಿ ಬಾಬು, ಡಾ. ಫರ್ಜಾನಾ ರಹೀಂಜೀ, ಕೋಮಲಾ, ಜ್ಯೋತಿ ತಿಪ್ಪೇಸ್ವಾಮಿ, ರಾಮಣ್ಣ, ರಾಧಾ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
BOXಡಿವೈಎಸ್ಪಿ ಮೂಗಿಗೆ ಗಾಯ
ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವ ವೇಳೆ ನೂಕಾಟ, ತಳ್ಳಾಟ ನಡೆಯಿತು. ಈ ವೇಳೆ ಡಿವೈಎಸ್ಪಿ ಚಂದ್ರಶೇಖರ್ ಮೂಗಿಗೆ ಗಾಯವಾಗಿದೆ. ಸಿಟ್ಟಾದ ಚಂದ್ರಶೇಖರ್ ಅವರು ಮ್ಯಾನ್ ಹ್ಯಾಂಡಲಿಂಗ್ ಮಾಡಿದ್ದಾರೆಂದು ಗರಂ ಆದರು. ಅಲ್ಲದೇ ಹಲ್ಲೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಎಫ್ಐಆರ್ ಮಾಡಿ ಆರೆಸ್ಟ್ ಮಾಡುವುದಾಗಿ ಎಚ್ಚರಿಸಿದರು.