ಕನ್ನಡಪ್ರಭ ವಾರ್ತೆ ತುಮಕೂರು
ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ, ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನ ಸಹಾಯ ಕಡಿತ ಖಂಡಿಸಿ ಹಾಗೂ ಕಾರ್ಮಿಕರ ಸೆಸ್ ಹಣದಲ್ಲಿ ಖಾಸಗಿ ಆಸ್ಪತ್ರೆಗಳ ಮೂಲಕ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ವಿರೋಧಿಸಿ ಫೆ. 1ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ನೀಡುತ್ತಿದ್ದ ಶೈಕ್ಷಣಿಕ ಪ್ರೋತ್ಸಾಹ ಧನದ ಶೇ.೭೫ರಷ್ಟು ಹಣವನ್ನು ಕಡಿತ ಮಾಡಿದೆ.ಇದು ಅತ್ಯಂತ ಅನ್ಯಾಯದ ಕ್ರಮವಾಗಿದೆ.ಅಲ್ಲದೆ ಲಕ್ಷಾಂತರ ಅರ್ಜಿಗಳು ಶೈಕ್ಷಣಿಕ ಪ್ರೋತ್ಸಾಹಧನಕ್ಕಾಗಿ ಬಾಕಿ ಇವೆ. ಹಾಗಾಗಿ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂಬುದು ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘದ ಒತ್ತಾಯವಾಗಿದೆ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ೨೦೧೬ರಿಂದಲೂ ವಿವಿಧ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿ, ಲಕ್ಷಾಂತರ ಜನರು ಧನ ಸಹಾಯಕ್ಕಾಗಿ ಕಾಯುತಿದ್ದಾರೆ. ಅರ್ಜಿ ಪರಿಶೀಲನೆ ನೆಪದಲ್ಲಿ ಏಳೆಂಟು ವರ್ಷಗಳಿಂದ ಸೌಲಭ್ಯ ನೀಡದೆ ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ಸೌಲಭ್ಯ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಅಲ್ಲದೆ ಪಿಂಚಿಣಿಗೆ ಅರ್ಜಿ ಸಲ್ಲಿಸುವಾಗಿ ಅರವತ್ತು ವರ್ಷ ನಿಗದಿ ಪಡಿಸದೆ, ಅರವತ್ತು ತುಂಬಿದ ನಂತರ ಯಾವಾಗಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಮಾಸಿಕ ೬೦೦೦ ರು. ಪಿಂಚಣಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಒತ್ತಾಯಿಸುತ್ತದೆ ಎಂದು ಗಿರೀಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಶ್ವಥ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು(ಬಾಬಣ್ಣ)ಸಂಚಾಲಕ ರವಿಕುಮಾರ್, ಪಾಪಣ್ಣಿ, ರಾಮಕೃಷ್ಣ, ವಾನಂದ್, ದೊಡ್ಡತಿಮ್ಮಯ್ಯ, ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.