ಕನ್ನಡಪ್ರಭ ವಾರ್ತೆ ತುಮಕೂರುಪದವಿಪೂರ್ವ ಮತ್ತು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತುಮಕೂರಿನ ಸಾಹೇ ವಿಶ್ವವಿದ್ಯಾಲಯದೊಂದಿಗೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಆವಂತಿಕಾ ವಿಶ್ವವಿದ್ಯಾಲಯ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.ನಗರದ ಸಾಹೇ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾತುಕತೆಯಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಆವಂತಿಕಾ ವಿಶ್ವವಿದ್ಯಾನಿಲಯ ಶೈಕ್ಷಣಿಕ ಪ್ರತಿನಿಧಿಗಳ ಜಂಟಿ ಸಭೆಯಲ್ಲಿ ಇನ್ನು ಮುಂದೆ ಎರಡು ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸಹಕಾರ ಸಂಬಂಧಗಳನ್ನು ಔಪಚಾರಿಕಗೊಳಿಸಲು ಮತ್ತು ವೇಗಗೊಳಿಸಿಕೊಳ್ಳುವ ಸಂಬಂಧ ಚರ್ಚಿಸಿದವು.ಸಭೆಯ ಬಳಿಕ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮತ್ತು ಆವಂತಿಕಾ ವಿಶ್ವವಿದ್ಯಾಲಯ ಉಪಕುಲಪತಿ ಡಾ.ನಿತಿನ್ ರಾಣೆ ಅವರು ಪರಸ್ಪರ ಒಡಂಬಡಿಕೆ ಪತ್ರಗಳಿಗೆ ಸಹಿ ಮಾಡಿ, ವಿನಿಮಯ ಮಾಡಿಕೊಂಡರು.
ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ ನಂತರ ಈ ನಿಯೋಗ ಸಾಹೇ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ, ಜಾಗತಿಕ ಮಟ್ಟದಲ್ಲಿ ಸ್ವರ್ಧೆ ಎದುರಿಸಲು ಆಮೂಲಾಗ್ರ ಶೈಕ್ಷಣಿಕ ಸುಧಾರಣಾ ಕ್ರಮಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಕುರಿತು ಮನವರಿಕೆ ಮಾಡಿಕೊಟ್ಟಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪರಮೇಶ್ವರ, ಪದವಿಪೂರ್ವ ಮತ್ತು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ವಿನಿಮಯ, ಜಂಟಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು ವಿಸ್ತರಣೆ, ಶೈಕ್ಷಣಿಕ ಪಠ್ಯ ಮತ್ತು ಶೈಕ್ಷಣಿಕ ಪ್ರಕಟಣೆಗಳ ವಿನಿಮಯ ಮಾಡಿಕೊಳ್ಳುವ ಮೂಲಕ ತುಮಕೂರಿನಂತ ಎರಡನೆ ಹಂತದ ನಗರದಲ್ಲೂ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬಹುದು ಎಂಬುದು ಸಾಬೀತಾಗಿದೆ ಎಂದು ಹರ್ಷ ವ್ಯಕ್ತಡಿಸಿದರು.ಒಪ್ಪಂದದ ನಂತರ ಮಾತನಾಡಿದ ಆವಂತಿಕಾ ವಿಶ್ವವಿದ್ಯಾಲಯ ಉಪಕುಲಪತಿ ಡಾ.ನಿತಿನ್ ರಾಣೆ ಹಾಗೂ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ, ಎರಡೂ ಸಂಸ್ಥೆಗಳು ಪರಸ್ಪರ ಸಂಪರ್ಕವನ್ನು ಕಲ್ಪಿಸಿಕೊಂಡಿರುವುದರಿಂದ ಜಂಟಿಯಾಗಿ ವಿವಿಧ ವಿಷಯಗಳಲ್ಲಿ ನೆರವಾಗಲು ಸಹಾಯವಾಗಲಿದ್ದು ವಿದ್ಯಾರ್ಥಿಗಳಿಗೆ ಹೊಸ ವಿಷಯಗಳು ಕಲಿಯಲು ಸಿಗುತ್ತವೆ ಎಂದರು.ಆವಂತಿಕಾ ವಿಶ್ವವಿದ್ಯಾಲಯದ ಡೀನ್ (ಬಾಹ್ಯ ಸಂಬಂಧಗಳ ವಿಭಾಗ) ಡಾ. ಪ್ರಿಯಾ ರಾವ್ ಹಾಗೂ ಪ್ರವೇಶಾತಿ ವಿಭಾಗದ ನಿರ್ದೇಶಕರಾದ ಡಾ. ಅಮೀತ್ ಶರ್ಮಾ, ಸಾಹೇ ರಿಜಿಸ್ಟ್ರಾರ್ ಡಾ. ಎಂ.ಝೆಡ್.ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ವೈದ್ಯಕೀಯಕಾಲೇಜಿನ ಪ್ರಾಂಶುಪಾಲರಾದ ಡಾ.ಸಾಣಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್, ಡೆಂಟಲ್‌ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಸಾಹೇ ವಿವಿ ಐಕ್ಯುಎಸಿ ಸಂಯೋಜಕರಾದ ಡಾ.ಚಿದಾನಂದಮೂರ್ತಿ ಎಂ.ವಿ., ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ.ಮುದ್ದೇಶ್, ಬಿಬಿಎಂ ಪ್ರಾಂಶುಪಾಲರಾದ ಡಾ.ಮಮತಾ, ಎಂಬಿಎ ಪ್ರಾಂಶುಪಾಲರಾದ ಡಾ.ಅಜ್ಮತುಲ್ಲಾ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಈ ಜಂಟಿ ಒಪ್ಪಂದ ಸಭೆಯಲ್ಲಿ ಪಾಲ್ಗೊಂಡಿದ್ದರು.