ತುಂಗಭದ್ರಾ ಡ್ಯಾಂಗೆ ಕ್ರಸ್ಟ್‌ ಗೇಟ್‌ ನಂ.19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಕಾರ್ಯ ಮುಂದಕ್ಕೆ

KannadaprabhaNewsNetwork | Updated : Aug 15 2024, 11:39 AM IST

ಸಾರಾಂಶ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ನಂ.19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಕಾರ್ಯಕ್ಕಾಗಿ ಬುಧವಾರ ಪೂಜೆ ನೆರವೇರಿಸಿದರೂ ಗೇಟ್‌ನ ಸಾಮಗ್ರಿ ಸಕಾಲಕ್ಕೆ ಬಾರದ್ದರಿಂದ ತಾತ್ಕಾಲಿಕ ಗೇಟ್‌ ಕೂಡಿಸುವ ಕಾರ್ಯ ಆಗಸ್ಟ್‌ 15ಕ್ಕೆ ಮುಂದೂಡಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ನಂ.19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಕಾರ್ಯಕ್ಕಾಗಿ ಬುಧವಾರ ಪೂಜೆ ನೆರವೇರಿಸಿದರೂ ಗೇಟ್‌ನ ಸಾಮಗ್ರಿ ಸಕಾಲಕ್ಕೆ ಬಾರದ್ದರಿಂದ ತಾತ್ಕಾಲಿಕ ಗೇಟ್‌ ಕೂಡಿಸುವ ಕಾರ್ಯ ಆಗಸ್ಟ್‌ 15ಕ್ಕೆ ಮುಂದೂಡಿದೆ.

ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆ.14ರಿಂದಲೇ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲು ಪರಿಣತ ತಜ್ಞ ಕನ್ನಯ್ಯ ನಾಯ್ಡು ಮುಂದಾಗಿದ್ದರು. ಆದರೆ, ಜಿಂದಾಲ್‌, ನಾರಾಯಣ ಎಂಜಿನಿಯರ್ಸ್‌ ಮತ್ತು ಹಿಂದೂಸ್ತಾನ ಎಂಜಿನಿಯರ್ಸ್‌ನಿಂದ ಸಕಾಲಕ್ಕೆ ಸಾಮಗ್ರಿ ಬಾರದ್ದರಿಂದ ಈಗ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಕಾರ್ಯ ಕೈಗೂಡಲಿಲ್ಲ.

ಜಿಂದಾಲ್‌ನಿಂದ ಬೆಳಗ್ಗೆ 11 ಗಂಟೆಗೆ ಸಾಮಗ್ರಿ ಬರಲಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಬಳಿಕ ಮಧ್ಯಾಹ್ನ ಒಂದು ಗಂಟೆಗೆ ಸಮಯ ನೀಡಲಾಯಿತು. ಮತ್ತೆ ಸಂಜೆ ಐದು ಗಂಟೆಗೆ ಮೆಟಿರಿಯಲ್‌ ಬರಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳಿಂದ ತಿಳಿದು ಬಂದಿತ್ತು.

ಆದರೆ, ಗೇಟ್‌ನ ಪೀಸ್‌ಗಳು ಸಂಜೆ 7 ಗಂಟೆಗೆ ಬರಲಿವೆ ಎಂದು ಮತ್ತೆ ಸಂದೇಶ ಬಂದಿತ್ತು. ಆದರೆ, ರಾತ್ರಿ 10 ಗಂಟೆ ಬಳಿಕವೇ ಜಿಂದಾಲ್‌ನಿಂದ ಹೊಸಪೇಟೆಯತ್ತ ಸಾಮಗ್ರಿ ಸಾಗಿಸಲಾಗುವುದು. ಇದಕ್ಕೆ ಪೊಲೀಸರು ಸೂಕ್ತ ಬಂದೋಬಸ್ತ್‌ ಏರ್ಪಡಿಸಲಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಈ ಸಾಮಗ್ರಿ ಮಧ್ಯ ರಾತ್ರಿ ತಲುಪಲಿದೆ. ಹಾಗಾಗಿ ಆ.15ರಂದು ಬೆಳಗ್ಗೆಯಿಂದಲೇ ಸ್ಟಾಪ್‌ ಲಾಗ್‌ ಗೇಟ್‌ ಕೂಡಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿದೆ.

ಏಕೆ ತಡವಾಯಿತು?

ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ನಲ್ಲಿ ಐದು ಅಡಿ ಎತ್ತರದ ಮೂರು ಪೀಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕೊನೇ ಹಂತದಲ್ಲಿ ತಜ್ಞರ ಸಲಹೆ ಮೇರೆಗೆ ಅಂತಿಮ ಸ್ಪರ್ಶ ನೀಡಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಈ ಸಾಮಗ್ರಿ ಬರಲು ವಿಳಂಬವಾಗಿದೆ. ಇನ್ನು ಹೊಸಹಳ್ಳಿಯ ಹಿಂದೂಸ್ತಾನ ಎಂಜನಿಯರ್ಸ್‌ ಗೆ ತಡವಾಗಿ ಡಿಸೈನ್‌ ದೊರೆತಿರುವ ಹಿನ್ನೆಲೆಯಲ್ಲಿ ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್‌ನಲ್ಲಿ ಸಾಮಗ್ರಿ ಉತ್ಪಾದಿಸಲಾಗುತ್ತಿದೆ.

ಜಲಾಶಯದ 19ನೇ ಗೇಟ್‌ನ ಕ್ರಸ್ಟ್‌ ಗೇಟ್‌ 20 ಅಡಿ ಎತ್ತರ, 60 ಅಡಿ ಅಗಲ ಹೊಂದಿದೆ. ಈ ಗೇಟ್‌ 48 ಟನ್‌ ತೂಕ ಹೊಂದಿತ್ತು. ಆದರೆ, ಈಗ ಅಳವಡಿಸುತ್ತಿರುವ ಐದು ಪೀಸ್‌ಗಳು ತಲಾ 13 ಟನ್‌ ಭಾರ ಹೊಂದಿದ್ದು, ಒಟ್ಟು 65 ಟನ್‌ ತೂಕದ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸಲಾಗುತ್ತಿದೆ. ಒಟ್ಟು ಎಂಟು ಪೀಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಐದು ಪೀಸ್‌ಗಳನ್ನು ಅಳವಡಿಸಲಾಗುತ್ತಿದೆ.

ಕ್ರೇನ್‌ ಸನ್ನದ್ಧ:

ಜಲಾಶಯದಲ್ಲಿ ಗೇಟ್‌ಗಳ ಅಳವಡಿಕೆಗೆ ಕ್ರೇನ್ ಕೂಡ ತರಿಸಲಾಗಿದ್ದು, 50 ಕಾರ್ಮಿಕರು ಈಗಾಗಲೇ ಇಡೀ ದಿನ ಸ್ಟಾಪ್‌ ಲಾಗ್ ಗೇಟ್‌ ನಿರ್ಮಾಣಕ್ಕಾಗಿ ಪ್ರಾಥಮಿಕ ಹಂತದ ಕೆಲಸ ಮಾಡಿದ್ದಾರೆ. ಆ.15ರಂದು ಕ್ರೇನ್‌ ಮೂಲಕ ಗೇಟ್‌ಗಳನ್ನು ಇಳಿಸುವ ಕಾರ್ಯ ನಡೆಯಲಿದೆ. ಹೊಸಪೇಟೆಯ ನಾರಾಯಣ ಎಂಜಿನಿಯರ್ಸ್‌ನ ಕಾರ್ಮಿಕರು ವೆಲ್ಡಿಂಗ್ ಗ್ಯಾಸ್, ಆಕ್ಸಿಜನ್ ಸಿಲಿಂಡರ್ ಜೊತೆಗೆ ಜಲಾಶಯಕ್ಕೆ ಕಾರ್ಮಿಕರು ಆಗಮಿಸಿದ್ದರು. ಜಿಂದಾಲ್‌ ಸಂಸ್ಥೆಯ ಕ್ರೇನ್‌ಗಳನ್ನು ತರಿಸಲಾಗಿದ್ದು, 19ನೇ ಗೇಟ್‌ನ ಬಳಿಯೇ ಈ ಕ್ರೇನ್‌ ನಿಲ್ಲಿಸಲಾಗಿದೆ. ಇನ್ನು ಡ್ಯಾಂ ಬಳಿಯೂ ಕ್ರೇನ್‌ ಸನ್ನದ್ಧಗೊಳಿಸಲಾಗಿದೆ.

Share this article