ರಾಯಚೂರು ಜಿಲ್ಲೆಯಲ್ಲಿ ಈ ವರ್ಷವೂ ನೀರಿನ ಆತಂಕ ಎದುರಾಗಿದೆ. ನೀರಾವರಿ ಸಲಹಾ ಸಮಿತಿ ನವೆಂಬರ್ ತಿಂಗಳಲ್ಲಿ ನಡೆಸಿದ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ನೀಡುವ ಕುರಿತು ಸುದೀರ್ಘವಾಗಿ ಚರ್ಚೆ ಮಾಡಿ, ಮಾರ್ಚ್ 31ರ ವರೆಗೂ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈ ವರ್ಷ ಬೇಸಿಗೆ ಬೆಳೆಗೂ ನೀರಿನ ಆತಂಕವಿಲ್ಲ. ಫೆ. 27ರಂದು ಜಲಾಶಯದಲ್ಲಿ ಬರೋಬ್ಬರಿ 31 ಟಿಎಂಸಿ ನೀರು ಇರುವುದರಿಂದ ಬೇಸಿಗೆ ಬೆಳೆಗೆ ನೀರಿನ ಅಭಾವ ಆಗದು ಎನ್ನುತ್ತಾರೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳು.
ಕಳೆದ ಹತ್ತು ವರ್ಷಗಳ ಸರಾಸರಿ ಲೆಕ್ಕಚಾರದಲ್ಲಿ ಫೆ. 27ರಂದು ಜಲಾಶಯದಲ್ಲಿ ಸರಾಸರಿ 21 ಟಿಎಂಸಿ ನೀರು ಇರುತ್ತಿತ್ತು. ಆದರೆ, ಈ ವರ್ಷ 31 ಟಿಎಂಸಿ ಇರುವುದರಿಂದ ನೀರಿನ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ. 2022ರಲ್ಲಿಯೂ ಸಹ 30 ಟಿಎಂಸಿಗೂ ಅಧಿಕ ನೀರು ಇತ್ತು. ಅದರ ಹೊರತಾಗಿ ಕಳೆದ ಹತ್ತು ವರ್ಷಗಳಲ್ಲಿಯೇ ಫೆಬ್ರುವರಿ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ನೀರಿದೆ.
ಪೋಲಾಗಿದ್ದ ನೀರು:
ಪ್ರಸಕ್ತ ವರ್ಷವೇ ಆಗಸ್ಟ್ ತಿಂಗಳಲ್ಲಿ ಕ್ರಸ್ಟ್‌ಗೇಟ್ ಮುರಿದು ಅಪಾರ ಪ್ರಮಾಣದ ನೀರು ಜಲಾಶಯದಿಂದ ಪೋಲಾಗಿದ್ದರೂ ಸಹ ಹಿಂಗಾರು ಮಳೆ ಉತ್ತಮವಾಗಿತ್ತು. ಇದರಿಂದ ಜಲಾಶಯದಲ್ಲಿ ಈ ಪ್ರಮಾಣದ ನೀರು ಇರಲು ಸಾಧ್ಯವಾಗಿದೆ. ಕ್ರಸ್ಟ್‌ಗೇಟ್ ಮುರಿದಿದ್ದರಿಂದ 40ರಿಂದ 50 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಯಿತು. ಅಷ್ಟು ನೀರು ವ್ಯಯವಾಗಿದ್ದರೂ ಸಹ ನೀರು ಇಷ್ಟೊಂದು ಇರುವುದರಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ರಾಯಚೂರು ವ್ಯಾಪ್ತಿಯಲ್ಲಿ ಆತಂಕ:
ಜಲಾಶಯದಲ್ಲಿ ಇಷ್ಟೊಂದು ಪ್ರಮಾಣದ ನೀರಿದ್ದರೂ ರಾಯಚೂರು ಜಿಲ್ಲೆಯಲ್ಲಿ ಈ ವರ್ಷವೂ ನೀರಿನ ಆತಂಕ ಎದುರಾಗಿದೆ. ನೀರಾವರಿ ಸಲಹಾ ಸಮಿತಿ ನವೆಂಬರ್ ತಿಂಗಳಲ್ಲಿ ನಡೆಸಿದ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ನೀಡುವ ಕುರಿತು ಸುದೀರ್ಘವಾಗಿ ಚರ್ಚೆ ಮಾಡಿ, ಮಾರ್ಚ್ 31ರ ವರೆಗೂ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಿದೆ. ಆದರೆ, ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಏ. 15ರ ವರೆಗೆ ನೀರು ಬೀಡುವ ನಿರ್ಧಾರ ತೆಗೆದುಕೊಂಡಿದ್ದರೆ ಅನುಕೂಲವಾಗುತ್ತಿತ್ತು. ಕೇವಲ ಮಾ. 31ರ ವರೆಗೂ ನೀರು ಬಿಟ್ಟರೆ ನಮಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ರೈತರು. ರಾಯಚೂರು ಜಿಲ್ಲಾ ವ್ಯಾಪ್ತಿಗೆ ನೀರು ವಿಳಂಬವಾಗಿ ಬರುತ್ತದೆ ಮತ್ತು ಬೇಗನೇ ಸ್ಥಗಿತವಾಗುತ್ತದೆ. ಹೀಗಾಗಿ, ಏ. 15ರ ವರೆಗೂ ನೀರು ಹರಿಸಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.ಪ್ರಸಕ್ತ ವರ್ಷ ಬೇಸಿಗೆ ಬೆಳೆಗೆ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಕಳೆದ ವರ್ಷಕ್ಕಿಂತಲೂ ನೀರು ಹೆಚ್ಚಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಗತ್ಯವಾಗಿರುವಷ್ಟು ನೀರು ಪೂರೈಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವ
ಶಿವರಾಜ ತಂಗಡಗಿ ಹೇಳಿದರು.