- ಮೊಬೈಲ್‌ಗಳು, ಕ್ಯಾಮೆರಾಗಳಲ್ಲಿ ನೀರುನಾಯಿಗಳ ಸೆರೆಹಿಡಿದು ಸಂಭ್ರಮಿಸುತ್ತಿರುವ ಜನ - - -
- ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‌ವೆಲ್ ಬಳಿ ನೀರುನಾಯಿಗಳ ನೋಡಲು ಜನ ದಾಂಗುಡಿ- ಘಟ್ಟ ಪ್ರದೇಶ, ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ ಮರುಕಳಿಸಿದ ತುಂಗಭದ್ರೆ ಜಲವೈಭವ
- ಬರಪೀಡಿತ ಜಗಳೂರು ತಾಲೂಕಿನ 57 ಕೆರೆಗೂ ತಲುಪಿದ ತುಂಗಭದ್ರೆ: ಸಂಭ್ರಮದಲ್ಲಿ ರೈತರು- - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಮಲೆನಾಡು ಪ್ರದೇಶದಲ್ಲಿ ಸತತ ಮಳೆ ಜೊತೆಗೆ ಭದ್ರಾ ಡ್ಯಾಂ ಗೇಟ್‌ನ ಲೀಕೇಜ್‌ನಿಂದಾಗಿ ಮಧ್ಯ ಕರ್ನಾಟಕ ಜೀವನದಿ ತುಂಗಭದ್ರೆ ದಿನದಿನಕ್ಕೂ ಮೈದುಂಬಿ ಹರಿಯುತ್ತಿದೆ. ಇದರ ಮಧ್ಯೆ ಹರಿಹರ ತಾಲೂಕಿನಲ್ಲಿ ನದಿಯಂಗಳದಲ್ಲಿ ಅಪರೂಪದ ನೀರುನಾಯಿಗಳು ಕಂಡುಬಂದಿದ್ದು, ಅವುಗಳ ಚಿನ್ನಾಟ ನೋಡುಗರ ಕುತೂಹಲ ಹೆಚ್ಚಿಸಿದೆ.ಮಲೆನಾಡಲ್ಲಿ ಉತ್ತಮ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ಹರಿವಿನ ಪ್ರಮಾಣ ದಿನದಿನಕ್ಕೂ ಹೆಚ್ಚುತ್ತಿದೆ. ಹೊನ್ನಾಳಿ, ಹರಿಹರ ತಾಲೂಕಿನಲ್ಲಿ ತುಂಗಭದ್ರೆ ಮೈದುಂಬಿ ಹರಿಯುತ್ತಿದೆ.
ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದ ತುಂಗಾ ಜಲಾಶಯ ಭರ್ತಿಯಾಗಿ, ಹೆಚ್ಚುವರಿ ನೀರು ಭದ್ರಾ ಡ್ಯಾಂಗೆ ಬಿಡಲಾಗುತ್ತಿದೆ. ಡ್ಯಾಂ ಗೇಟ್ ದುರಸ್ತಿಗೆ ಬಂದಿದ್ದು, ಸೋರಿಕೆಯಾದ ನೀರು ತುಂಗಭದ್ರಾ ನದಿ ಮೂಲಕ ಹರಿದುಬರುತ್ತಿದೆ. ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಪುಣ್ಯಕ್ಷೇತ್ರದ ಸ್ನಾನಘಟ್ಟವು ಭಾನುವಾರ ಮುಳುಗಡೆಯಾಗಿದೆ. ಹೊನ್ನಾಳಿ, ಹರಿಹರದ ಸೇತುವೆಗಳು, ಉಕ್ಕಡಗಾತ್ರಿ, ನದಿಪಾತ್ರದ ಗ್ರಾಮ, ಊರುಗಳಲ್ಲಿ ಜನರು ಮೈದುಂಬಿ ಹರಿಯುತ್ತಿರುವ ತುಂಗಭದ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಜಗಳೂರು ಜನ ಫುಲ್ ಖುಷ್:
ತುಂಗಭದ್ರಾ ನದಿ ಮೈದುಂಬಿ ಹರಿದಂತೆಲ್ಲಾ ಬರಪೀಡಿತ ಜಗಳೂರು ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ. ಕಳೆದೊಂದು ಶತಮಾನದಲ್ಲಿ ಬಹುಪಾಲು ಬರವನ್ನೇ ಹಾಸುಹೊದ್ದಿರುವ ಜಗಳೂರು ತಾಲೂಕಿನ ದಾಹ ತಣಿಸುವಂತೆ ಪೈಪ್‌ಲೈನ್ ಮೂಲಕ ತುಂಗಭದ್ರೆ ಅಲ್ಲಿಗೂ ತಲುಪುತ್ತಿದ್ದಾಳೆ. ಜಗಳೂರಿನ 30 ಕೆರೆಗಳಿಗೆ ನೀರುಣಿಸುವ "57 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆ "ಯಡಿ ಪ್ರಾಯೋಗಿಕವಾಗಿ ನೀರು ಹರಿಸುವ ಕೆಲಸವಾಗಿದೆ. ತುಪ್ಪದಹಳ್ಳಿ ಸೇರಿದಂತೆ 30 ಕೆರೆಗಳನ್ನು ಮುಂಗಾರಿನಲ್ಲೇ ತುಂಬಿಸುವ ಯೋಜನೆ ಜಿಲ್ಲಾಡಳಿತದ್ದಾಗಿದೆ.ತುಂಗಭದ್ರಾ ನದಿಯಿಂದ ಗುರುತ್ವಾಕರ್ಷಣೆ ಮೇಲೆ 57 ಕೆರೆಗಳಿಗೆ ನೀರು ಹರಿಸುವ ಕಾರ್ಯ ಶುರುವಾಗಿದೆ. ಜಗಳೂರಿನ ಹಾಲಿ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ ಸೇರಿದಂತೆ ಆ ತಾಲೂಕಿನ ಆಯಾ ಕೆರೆಗಳ ರೈತರು, ಗ್ರಾಮಸ್ಥರ ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ. ಹಾಲಿ-ಮಾಜಿ ಶಾಸಕರು ಪರಸ್ಪರರಿಗೆ ಸಿಹಿ ತಿನ್ನಿಸಿ, ಸಂಭ್ರಮಿಸಿದರೆ, ಪೈಪ್ ಮೂಲಕ ತಮ್ಮೂರ ಕೆರೆಗೆ ಬಂದ ಗಂಗೆಯನ್ನು ಹಾಲೆರೆದು, ಸಂಪ್ರದಾಯದಂತೆ ಪೂಜೆ ಮಾಡುವ ಮೂಲಕ ಗ್ರಾಮಸ್ಥರು ಬರ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.
- - -ಬಾಕ್ಸ್ * ತುಂಗಭದ್ರೆಯಲ್ಲಿ ನೀರು ನಾಯಿಗಳ ಹಿಂಡು
ಜಿಲ್ಲೆಯ ಭಾಗಕ್ಕೆ ಅಪರೂಪವೇ ಆಗಿರುವ ನೀರುನಾಯಿಗಳ ಹಿಂಡು ತುಂಗಭದ್ರಾ ನದಿಯಲ್ಲಿ ಕಂಡುಬಂದಿದೆ. ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಜಾಕ್ ವೆಲ್ ಬಳಿ ನೀರು ನಾಯಿಗಳ ಹಿಂಡು ಗ್ರಾಮಸ್ಥರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ಘಟ್ಟ ಪ್ರದೇಶ, ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ನೀರು ಡ್ಯಾಂಗಳನ್ನು ತಲುಪಿ, ಅಲ್ಲಿಂದ ನದಿಗೆ ಸೇರುತ್ತಿದೆ. ಹೀಗೆ ನದಿ ನೀರಿನ ಜೊತೆಗೆ ಜಲಚರಗಳು ಬರುತ್ತಿವೆ. ಅದರಲ್ಲೂ ವಿಶೇಷವಾಗಿ ಈ ಸಲ ನೀರು ನಾಯಿಗಳ ಹಿಂಡು ಕಂಡುಬಂದಿದೆ. ಮಕ್ಕಳು, ಮರಿಗಳ ಸಮೇತ ಗ್ರಾಮಸ್ಥರು ತುಂಗಭದ್ರಾ ನದಿಯ ದಂಡೆಯಲ್ಲಿ ಹಿಂಡು ಹಿಂಡಾಗಿ ಬಂದು, ಆಟವಾಡುತ್ತಿರುವ ನೀರುನಾಯಿಗಳನ್ನು ತೋರಿಸಿ, ಮಕ್ಕಳ ಮೊಗದಲ್ಲಿ ಸಂಭ್ರಮ ಮೂಡಿಸುತ್ತಿದ್ದಾರೆ. ನೀರು ನಾಯಿಗಳ ಹಿಂಡಿನ ಫೋಟೋ, ವೀಡಿಯೋಗಳನ್ನು ಮೊಬೈಲ್‌ಗಳು, ಕ್ಯಾಮೆರಾಗಳಲ್ಲಿ ಸೆರೆಹಿಡಿದು, ಗ್ರಾಮಸ್ಥರು, ವಾಸಿಗಳು ಸೋಷಿಯಲ್ ಮೀಡಿಯಾಗಳಿಗೆ ಹರಿಯಬಿಟ್ಟಿದ್ದಾರೆ.
- - - -7ಕೆಡಿವಿಜಿ7, 8, 9, 10, 11:ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‌ವೆಲ್ ಬಳಿ ತುಂಗಭದ್ರಾ ನದಿ ತಟದಲ್ಲಿ ಅಪರೂಪದ ನೀರು ನಾಯಿಗಳ ಹಿಂಡು ಆಟವಾಡುತ್ತಿರುವುದು.