ಜಗಳೂರು ಕೆರೆಗೆ ಹರಿದ ತುಂಗಭದ್ರೆ: ಜನರಲ್ಲಿ ಸಾರ್ಥಕ ಭಾವ

KannadaprabhaNewsNetwork |  
Published : Jul 06, 2024, 12:55 AM IST
05 ಜೆ.ಜಿ.ಎಲ್.1) ಬಯಲು ಸೀಮೆ, ಬರಪೀಡಿತ ಪ್ರದೇಶವಾದ ಜಗಳೂರು ಕೆರೆಗೆ ಶುಕ್ರುವಾರ ಕೆಂಪುಮಿಶ್ರಿತವಾಗಿ ಪೈಪ್ ಮೂಲಕ ಹರೆದು ಬಂದಳು ತುಂಗಭದ್ರೆ. ತುಂಗಭದ್ರೆ ನೀರು ನೋಡಿ ಸಂಭ್ರಮಿಸಿದ ಜಗಳೂರಿನೆ ಜನತೆ. | Kannada Prabha

ಸಾರಾಂಶ

ಬಯಲುಸೀಮೆ, ಬರಪೀಡಿತ ಪ್ರದೇಶವಾದ ಜಗಳೂರು ಕೆರೆಗೆ ಶುಕ್ರವಾರ ಪೈಪ್‌ಲೈನ್‌ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಜನರಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ.

- ಪೈಪ್‌ಲೈನ್‌ ಕೆರೆಗೆ ಹರಿಯುವ ನೀರು ಕಣ್ತುಂಬಿಕೊಂಡ ಜನತೆ । ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ ಶಾಸಕ - - -

ಕನ್ನಡ ಪ್ರಭ ವಾರ್ತೆ ಜಗಳೂರು

ಬಯಲುಸೀಮೆ, ಬರಪೀಡಿತ ಪ್ರದೇಶವಾದ ಜಗಳೂರು ಕೆರೆಗೆ ಶುಕ್ರವಾರ ಪೈಪ್‌ಲೈನ್‌ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಜನರಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ.

ತಾಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಹರಿಸಿದ್ದಾರೆ, ಬಿಳಿಚೋಡು, ಹಾಲೇಕಲ್ಲು, ಮರಿಕುಂಟೆ ಸೇರಿದಂತೆ 16 ಕೆರೆಗಳಿಗೆ ನೀರು ಬಿಟ್ಟಿದ್ದಾರೆ, ಅಲ್ಲಿ, ಇಲ್ಲಿ ಎಲ್ಲ ಕೆರೆಗಳಿಗೂ ನೀರು ಹರಿಯುತ್ತಿದೆ. ಆದರೆ, ಜಗಳೂರು ಕೆರೆಗೆ ನೀರು ಯಾವಾಗ ಬರುತ್ತದೆ, ಹಿರೇಮಲ್ಲನಹೊಳೆ ಭಾಗದ ಕೆರೆಗಳಿಗೆ ನೀರು, ಚಟ್ನಹಳ್ಳಿಗುಡ್ಡದಿಂದ ಗ್ಯ್ರಾವಿಟಿ ಮೂಲಕ ನೀರು ಬರುತ್ತಾ ಎಂದು ರೈತರು, ಕೃಷಿ ಕಾರ್ಮಿಕರು, ಜನಸಾಮಾನ್ಯರು ಸೇರಿದಂತೆ ಬಹುತೇಕ ರೈತರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಯೋಚಿಸುತ್ತಲೇ ಇದ್ದರು.

ಈಗ ಈ ಎಲ್ಲ ರೈತರ ಪ್ರಶ್ನೆಗಳಿಗೆ ಶುಕ್ರವಾರ ಬೆಳಗ್ಗೆ ಸುಮಾರು 11.45 ಗಂಟೆ ಸುಮಾರಿಗೆ ಗ್ರ್ಯಾವಿಟಿ ಮೂಲಕವೇ ಜಗಳೂರು ಕೆರೆಗೆ ತುಂಗಭದ್ರೆ ನೀರು ಪೈಪ್ ಲೈನ್‌ ಮೂಲಕ ಹರಿಸಲಾಗಿದ್ದು ಕಂಡು ಸಂತಸಗೊಂಡಿದ್ದಾರೆ. ಪೈಪ್‌ ಮೂಲಕ ನೀರು ರಭಸವಾಗಿ ಕೆರೆಯೊಡಲು ಸೇರುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

3 ಮೋಟಾರ್‌ಗಳ ಬಳಕೆ:

ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಈ ಕುರಿತು ಮಾತನಾಡಿ, ತುಂಗಭದ್ರಾ ನದಿಯಿಂದ ತುಪ್ಪದಹಳ್ಳಿ, ಅಸಗೋಡು, ಬಿಳಿಚೋಡು, ಹಾಲೇಕಲ್ಲು, ಮರುಕುಂಟೆ ಸೇರಿದಂತೆ (ಚಟ್ನಹಳ್ಳಿ ಭಾಗ) 16 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಬಿಡಲಾಗಿತ್ತು. ಪ್ರಸ್ತುತ ಜಗಳೂರು ಕೆರೆ ಸೇರಿದಂತೆ 14 ಕೆರೆಗಳು ಸೇರಿದಂತೆ ಒಟ್ಟು 30 ಕೆರೆಗಳಿಗೆ ಈ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಗಡಿಮಾಕುಂಟೆ ಸೇರಿದಂತೆ ಈ ಮಳೆಗಾಲದ ಅವಧಿಯಲ್ಲೇ 53 ಕೆರೆಗಳಿಗೆ ನೀರು ತುಂಬಿಸಲಾಗುವುದು. ಪ್ರಸ್ತುತವಾಗಿ 3 ಮೋಟಾರ್‌ಗಳನ್ನು ಚಾಲನೆ ಮಾಡಲಾಗಿದೆ. ನೀರು ಕಡಿಮೆ ಅಂತ ಕಂಡುಬಂದರೆ 4 ಮೋಟಾರ್‌ಗಳನ್ನು ಚಾಲನೆ ಮಾಡಲಾಗುತ್ತದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್‌ ಸಹ ಪ್ರತಿಕ್ರಿಯಿಸಿದ್ದು, ಸಿರಿಗೆರೆ ಶ್ರೀಗಳ ಕಾಳಜಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಕೃಪೆಯಿಂದ ಜಗಳೂರು ಕೆರೆ ಸೇರಿದಂತೆ 30 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಈಗ ಚಾಲನೆ ದೊರೆತಿದೆ. ಗಡಿಮಾಕುಂಟೆ ಸೇರಿದಂತೆ ಕೊನೆಯ ಭಾಗದ ಹಿರೇಮಲ್ಲನಹೊಳೆ ಭಾಗದ ಕೆರೆಗಳು ಸೇರಿದಂತೆ ಯೋಜನೆಯಲ್ಲಿರುವ 57 ಕೆರೆಗಳಿಗೂ ತುಂಗಭದ್ರಾ ನದಿಯಿಂದ ನೀರು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- - -

ಬಾಕ್ಸ್‌ * ಸಂಭ್ರಮ ವರ್ಣಿಸಲು ಪದಗಳೇ ಸಿಗುತ್ತಿಲ್ಲ: ಶಾಸಕ ದೇವೇಂದ್ರಪ್ಪ ಜಗಳೂರು ಕ್ಷೇತ್ರ ಶಾಸಕ ಬಿ.ದೇವೇಂದ್ರಪ್ಪ ಈ ಕುರಿತು ಪ್ರತಿಕ್ರಿಯಿಸಿದ್ದು, ಸಿರಿಗೆರೆ ತರಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ದೂರದೃಷ್ಠಿ ಫಲವೇ ಈ ಯೋಜನೆಯಾಗಿದೆ. ಅಲ್ಲದೇ, ಅಂದಿನ ಅವಧಿಯಲ್ಲಿ ಆಡಳಿತ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸರ್ಕಾರಗಳು, ಶಾಸಕರು, ಸಚಿವರು, ಸಂಸದರಿಗೂ, ನೀರಾವರಿ ನಿಗಮದ ಅಧಿಕಾರಿಗಳು, ಎಂಜಿನಿಯರ್‌ಗಳು, ಎಲ್ಲ ರೈತರ ಸಹಕಾರದಿಂದ ತುಂಗಭದ್ರಾ ನದಿಯಿಂದ ಜಗಳೂರು ಸೇರಿದಂತೆ 30 ಕೆರೆಗಳಿಗೆ ಪ್ರಾಯೋಗಿಕ ನೀರು ಬರುತ್ತಿದೆ. ಈ ಸಂಭ್ರಮ ವರ್ಣಿಸಲು ಪದಗಳೇ ಸಿಗುತ್ತಿಲ್ಲ ಎಂದಿದ್ದಾರೆ.

ಜಗಳೂರು ತಾಲೂಕಿಗೆ ತುಂಗಭದ್ರೆ ನೀರು ಬರುವುದನ್ನೇ ನಾವು ಸೇರಿದಂತೆ ಕ್ಷೇತ್ರದ ರೈತರು, ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಘಳಿಗೆ ಈಗ ಈಡೇರಿದಂತಾಗುತ್ತಿದೆ. ಸಂಪೂರ್ಣ ಮಳೆಗಾಲದ ಹೊತ್ತಿಗೆ ಉಳಿದ ಎಲ್ಲ ಕೆರೆಗಳಿಗೆ ನೀರು ಬರುವ ವಿಶ್ವಾಸ ಇದೆ. ಎಲ್ಲ ಪಕ್ಷಿಗಳು, ಜನ- ಜಾನುವಾರುಗಳ ಸಂಕಷ್ಟ ದೂರವಾಗಬೇಕು. ಶಾಸಕರಾಗಿ ಎಲ್ಲ ಕರ್ತವ್ಯ ಜವಾಬ್ದಾರಿಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

- - - -05ಜೆಜಿಎಲ್1: ಜಗಳೂರು ಕೆರೆಗೆ ಶುಕ್ರವಾರದಿಂದ ಪೈಪ್‌ಲೈನ್‌ ಮೂಲಕ ತುಂಗಭದ್ರಾ ನೀರು ಹರಿಸಲು ಚಾಲನೆ ನೀಡಲಾಯಿತು.

-05ಜೆಜಿಎಲ್2: ಬಿ.ದೇವೇಂದ್ರಪ್ಪ, ಶಾಸಕ, ಜಗಳೂರು ಕ್ಷೇತ್ರ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ