ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ ತಾಲೂಕಿನ ಜನ- ಜಾನುವಾರುಗಳ ನೀರಿನ ದಾಹ ಮಾತ್ರ ಇಂಗಿಸಲು ಸಾಧ್ಯವಾಗಿಲ್ಲ. ಮಳೆ ಇಲ್ಲದೇ ಬಹುತೇಕ ಬರಿದಾಗಿದ್ದ ತುಂಗಭದ್ರೆಗೆ ವಾರದಿಂದ ಭದ್ರಾದಿಂದ ನೀರು ಬಿಡಲಾಗಿದೆ. ಆದರೆ ನೀರು ಸಂಪೂರ್ಣ ಕಲುಷಿತವಾಗಿದೆ. ಆದ್ದರಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ.ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಒಂದೂವರೆ ಟಿಎಂಸಿ ನೀರು ಬಿಡುಗಡೆ ಮಾಡಿದ್ದಾರೆ. ನದಿ ಉದ್ದಕ್ಕೂ ಹರಿದುಬಂದ ನೀರು ಸಂಪೂರ್ಣ ಕಲುಷಿತವಾಗಿದೆ. ಬರಿದಾಗಿದ್ದ ನದಿಯಲ್ಲಿ ಸಣ್ಣಪುಟ್ಟ ಗುಂಡಿಗಳಿದ್ದವು. ಅದರಲ್ಲಿ ಜಲಚರಗಳು ಸಾವಿಗೀಡಾಗಿವೆ. ಜತೆಗೆ ನೀರು ಸಂಪೂರ್ಣ ದುರ್ನಾತ ಬೀರುತ್ತಿದೆ. ಇದೇ ನೀರನ್ನು 9 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ 80ಕ್ಕೂ ಹೆಚ್ಚು ಹಳ್ಳಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆ ನೀರು ಶುದ್ಧಿಕರಿಸಿದರೂ ವಾಸನೆ ಮಾತ್ರ ಹೋಗುತ್ತಿಲ್ಲ. ಆದ್ದರಿಂದ ಜನ ನೇರವಾಗಿ ನದಿ ನೀರನ್ನು ಕುಡಿಯದೇ ಕಾಯಿಸಿ ಆರಿಸಿ ಕುಡಿಯಬೇಕೆಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಡಂಗೂರ ಸಾರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
3 ಯೋಜನೆ 37 ಹಳ್ಳಿಗಿಲ್ಲ ನದಿ ನೀರು: ತಾಲೂಕಿನ ನೂರಾರು ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಹೊಳಗುಂದಿ ಇತರೆ 13 ಹಳ್ಳಿಗಳು, ಅಂಕ್ಲಿ- ಕೊಂಬಳಿ 19 ಹಳ್ಳಿಗಳು, ಹೊನ್ನನಾಯಕನಹಳ್ಳಿ ಇತರೆ 5 ಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳ ಜಾಕ್‌ವಾಲ್ ಬಳಿ ನೀರಿಲ್ಲದೇ ಸಂಪೂರ್ಣ ಬಂದ್ ಆಗಿವೆ. ಇದರಿಂದ 3 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಯ 37 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಆದರೂ ಈ ಎಲ್ಲ ಗ್ರಾಮಗಳಿಗೆ ಕೊಳವೆಬಾವಿಗಳ ನೀರನ್ನು ಪೂರೈಕೆ ಮಾಡಲಾಗುತ್ತಿದೆ.9 ಹಳ್ಳಿಗೆ ಕೊಳವೆಬಾವಿ ಬಾಡಿಗೆ ನೀರು: ತಾಲೂಕಿನ ನಂದಿಹಳ್ಳಿ, ವರಕನಹಳ್ಳಿ ಮತ್ತು ದಾಸರಹಳ್ಳಿ ತಾಂಡಾದಲ್ಲಿ ಕುಡಿಯುವ ನೀರಿನ ತತ್ವಾರ ಹೆಚ್ಚಾಗಿರುವ ಹಿನ್ನೆಲೆ ಅಕ್ಕಪಕ್ಕದ ರೈತರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಕೆಯಾಗುತ್ತಿದೆ. ಉಳಿದಂತೆ ಬಸರಹಳ್ಳಿ ತಾಂಡಾ, ಹಕ್ಕಂಡಿ, ತಳಕಲ್ಲು, ಹೊಳಗುಂದಿ, ಬಾವಿಹಳ್ಳಿ, ಕೊಯಿಲಾರಗಟ್ಟಿ ಗ್ರಾಮಗಳಲ್ಲಿಯೂ ನೀರಿನ ಹಾಹಾಕಾರ ಹೆಚ್ಚಿದೆ. ಇಲ್ಲಿಯೂ ರೈತರ ಕೊಳವೆ ಬಾವಿಗಳನ್ನು ತಿಂಗಳಿಗೆ ₹9 ಸಾವಿರಗಳಂತೆ ಬಾಡಿಗೆ ರೂಪದಲ್ಲಿ ಪಡೆದು ನೀರು ಪೂರೈಕೆ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹರಸಾಹಸ ಪಡುತ್ತಿವೆ. ನಂದಿಹಳ್ಳಿ ಗ್ರಾಮದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಸದಸ್ಯರ ತಕರಾರು: ತಾಲೂಕಿನ ನಂದಿಹಳ್ಳಿಗೆ ಮುದೇನೂರು ಕೆರೆಯೇ ನೀರಿನ ಆಸರೆಯಾಗಿದೆ. ಈಗ ಸದ್ಯದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆರೆಯಂಗಳದಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತಗೊಂಡು ನೀರಿನ ಸಮಸ್ಯೆ ಉಂಟಾಗುತ್ತಿದೆ. ಎಷ್ಟೇ ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಅದೇ ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ವೀರೇಶ ತಮ್ಮ ಜಮೀನಿನಲ್ಲಿ 9 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಸಾಕಷ್ಟು ನೀರು ಲಭ್ಯವಿದೆ. 3 ಕೊಳವೆ ಬಾವಿಗಳಲ್ಲಿ ಜಮೀನಿನಲ್ಲಿರುವ ಬೆಳೆ ಬೆಳೆಯುತ್ತಾರೆ. ಉಳಿದ ಕೊಳವೆ ಬಾವಿಗಳನ್ನು ಉಚಿತವಾಗಿ ನೀಡುತ್ತೇನೆ. ಗ್ರಾಮದ ನೀರಿನ ಸಮಸ್ಯೆ ಬಗೆಹರಿದರೆ ಸಾಕು ಎಂದು ಹೇಳಿದರೂ ಆ ಗ್ರಾಪಂನ ಕೆಲ ಸದಸ್ಯರು ಇದಕ್ಕೆ ತಕರಾರು ಎತ್ತಿದ್ದಾರೆ. ಉಚಿತವಾಗಿ ನೀರು: ನಮ್ಮ ಕೊಳವೆಬಾವಿಗಳ ನೀರನ್ನು ಗ್ರಾಮಸ್ಥರಿಗೆ ಉಚಿತವಾಗಿ ಕೊಟ್ಟು, ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಅದನ್ನೇ ಬಂಡವಾಳ ಮಾಡಿಕೊಂಡು ಮತ ಹಾಕಿಸಿಕೊಳ್ಳುತ್ತಾರೆ ಎಂಬ ಭೀತಿ ಕೆಲ ಸದಸ್ಯರಲ್ಲಿದೆ. ನಾನು ಉಚಿತವಾಗಿ ನೀರು ಕೊಡುತ್ತೇನೆಂದು ಗ್ರಾಪಂ ಸಭೆಯ ಠರಾವು ಮಾಡಿದ್ದಾರೆ ಎಂದು ನಂದಿಹಳ್ಳಿ ಗ್ರಾಪಂ ಸದಸ್ಯ ಕಂಠಿ ವೀರೇಶ ತಿಳಿಸಿದರು.ಕಲುಷಿತ ನೀರು: ತಾಲೂಕಿನ 3 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್‌ವಾಲ್‌ಗೆ ನದಿ ನೀರು ಬಂದಿಲ್ಲ. ಇದರಿಂದ ಬಂದ್ ಆಗಿವೆ. ಈ ವ್ಯಾಪ್ತಿಯ ಹಳ್ಳಿಗಳಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ತುಂಗಭದ್ರಾ ನದಿ ನೀರನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ. ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಅಂಬೇಡ್ಕರ್ ತಿಳಿಸಿದರು.