ತುಂಗಳ-ಸಾವಳಗಿ ಏತ ನೀರಾವರಿ ಸಂಪೂರ್ಣ ವಿಫಲ: ಶಾಸಕ ಜಗದೀಶ ಗುಡಗುಂಟಿ

KannadaprabhaNewsNetwork |  
Published : Jul 07, 2024, 01:20 AM IST
ಪತ್ರಿಕಾಗೊಷ್ಠಯನ್ನು ಗದ್ದೇಶಿಸಿ ಮಾತನಾಡಿದ ಶಾಸಕ ಜಗದೀಶ ಗುಡಗುಂಟಿ. | Kannada Prabha

ಸಾರಾಂಶ

ತುಂಗಳ-ಸಾವಳಗಿ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತುಂಗಳ-ಸಾವಳಗಿ ಏತ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದ್ದಾರೆ. ಶಾಸಕರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತುಂಗಳ ಸಾವಳಗಿ ಏತ ನೀರಾವರಿ ಯೋಜನೆ 40 ಕಿಮೀ ದೂರದ ಅಥಣಿ ತಾಲೂಕಿನ ಹಲ್ಯಾಳ ಏತ ನೀರಾವರಿ ಯೋಜನೆ ಮೇಲೆ ಅವಲಂಬಿತವಾಗಿದೆ. ಹಲ್ಯಾಳದಲ್ಲಿ ಎತ್ತಿದ ನೀರು 20 ಕಿಮೀ ದೂರದ ಕರಿಮಸೂತಿ ಏತ ನೀರಾವರಿ ಯೋಜನೆಗೆ ನೀರು ಒದಗಿಸಿ ಕೊನೆಯ ಹಂತದ ತುಂಗಳ-ಸಾವಳಗಿ ಏತ ನೀರಾವರಿಗೆ ನೀರು ಹರಿಸಬೇಕು. ಆದರೆ ಅಥಣಿಯ ಪ್ರಭಾವಿ ರಾಜಕಾರಣಕ್ಕೆ ಮಣಿದು ಹಲ್ಯಾಳದಲ್ಲಿ ಎತ್ತಿದ ನೀರು ಅಥಣಿ ಭಾಗದ ರೈತರಿಗೆ ಹೆಚ್ಚು ಪೂರೈಕೆಯಾಗುತ್ತಿದೆ. ಸಾವಳಗಿ-ತುಂಗಳ ಏತ ನೀರಾವರಿಗೆ ಸಾಕಾಗುವಷ್ಟು ನೀರು ಬರದ ಕಾರಣ ನೀರು ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಮಧ್ಯದ 20 ಕಿಮೀ ಅಂತರದಲ್ಲಿ ರೈತರು ಸೈಫನ್‌ ತಂತ್ರದ ಮೂಲಕ ಕಾಲುವೆಗೆ ಪೈಪುಗಳನ್ನು ಅಳವಡಿಸಿಕೊಂಡು ನೀರು ಎತ್ತುತ್ತಾರೆ. ಇದರಿಂದ ಸಾವಳಗಿ ಏತ ನೀರಾವರಿಗೆ ಬರಬೇಕಾದ ನೀರು ಬರುತ್ತಿಲ್ಲ. ಈ ಕುರಿತು ಕಳೆದ ವರ್ಷ ಸದನದಲ್ಲಿ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.

ತುಂಗಳ ಮತ್ತು ಸಾವಳಗಿ ಭಾಗದ ರೈತರಿಗೆ ನೀರು ಪೂರೈಸಲು ಶೂರ್ಪಾಲಿ ಗ್ರಾಮದ ಹತ್ತಿರ ಹೊಸ ಪಂಪಹೌಸ್‌ ನಿರ್ಮಿಸಿ, ಸಾವಳಗಿ-ತುಂಗಳ ಏತ ನೀರಾವರಿಗೆ ಬಳಸಲಾದ ಪಂಪ್‌ಸೆಟ್‌ಗಳನ್ನು ಇಲ್ಲಿ ಮರುಜೋಡಣೆ ಮಾಡಿದರೆ ಸಾಕಷ್ಟು ನೀರು ಪೂರೈಕೆ ಮಾಡಲು ಸಾಧ್ಯ. ಈ ಕುರಿತು ಅಧಿಕಾರಿಗಳು ಮತ್ತು ಸಚಿವರಿಗೆ ಖುದ್ದಾಗಿ ಮನವರಿಕೆ ಮಾಡಿದ್ದೇನೆ ಎಂದರು.

ನದಿಯಲ್ಲಿ ನೀರು ಬರುತ್ತಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ತುಂಗಳ-ಸಾವಳಗಿ ಏತ ನೀರಾವರಿಗೆ ನೀರು ಒದಗಿಸುವಂತೆ ನೀರಾವರಿ ಇಲಾಖೆಯ ಎಂಜಿನಿಯರುಗಳಾದ ರಾಥೋಡ, ಪ್ರವೀಣ ಹುಣಸಿಕಟ್ಟಿ, ಶಿವಮೂರ್ತಿ ಹಾಗೂ ಅಮ್ಮಿವಬಾವಿ ಅವರಿಗೆ ಪ್ರತಿನಿತ್ಯ ಒತ್ತಡ ತರುತ್ತಿದ್ದೇನೆ. ಆದರೂ ಅಧಿಕಾರಿಗಳು ಅಸಹಾಯಕತೆ ತೋರುತ್ತಿದ್ದಾರೆ ಎಂದು ದೂರಿದರು.

ಸಿಂಧೂರ ಕೊಡುಗೆ ಏನು?:

ಕಾಂಗ್ರೆಸ್‌ ಮುಖಂಡ ಬಸವರಾಜ ಸಿಂಧೂರ ಶಾಸಕರ ನಿರ್ಲಕ್ಷ್ಯದಿಂದ ಸಾವಳಗಿ-ತುಂಗಳ ಏತ ನೀರಾವರಿಗೆ ನೀರು ಬಂದಿಲ್ಲ ಎಂದು ಹೇಳಿಕೆ ಕೊಡುತ್ತಿರುವುದನ್ನು ಖಂಡಿಸಿದ ಅವರು, ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಪಕ್ಷ ಬದಲಿಸಿಕೊಂಡು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲವೆಂದು ಕುಟುಕಿದರು, ಮೂರ್ಖ ರಾಜಕಾರಣ ಮಾಡುತ್ತಿರುವ ಸಿಂಧೂರ ಸಾಧನೆ ಏನು ಎಂದು ಪ್ರಶ್ನಿಸಿದ ಅವರು, ನಾನು ಅಪ್ರಜ್ಞಾವಂತನಾಗಿದ್ದರೆ 40 ಸಾವಿರ ಜನರಿಗೆ ಉದ್ಯೋಗ ನಿಡುತ್ತಿರಲಿಲ್ಲ. ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರಲಿಲ್ಲ ಎಂದ ಅವರು, ನಿಮ್ಮ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ