ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆರೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಸೋದರರು ಮೃತಪಟ್ಟಿರುವ ದಾರುಣ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಉಲ್ಲಾಳ ಉಪನಗರದ ಸುಬ್ರಹ್ಮಣ್ಯ ದಂಪತಿ ಪುತ್ರರಾದ ಸಂಜಯ್ (6) ಹಾಗೂ ಜಗನ್ನಾಥ್ (10) ಮೃತ ದುರ್ದೈವಿಗಳು. ಮನೆ ಸಮೀಪದ ಮಂಗಮ್ಮನಹಳ್ಳಿ ಕೆರೆಗೆ ಗುರುವಾರ ರಾತ್ರಿ ಸೋದರರು ತೆರಳಿದ್ದಾರೆ. ಆ ವೇಳೆ ನೀರಿನಲ್ಲಿ ಮುಳುಗಿ ಸಂಜಯ್ ಸ್ಥಳದಲ್ಲೇ ಮೃತಪಟ್ಟರೆ, ಆತನ ಸೋದರ ಜಗನ್ನಾಥ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ತಮಿಳುನಾಡು ಮೂಲದ ಸುಬ್ರಹ್ಮಣ್ಯಂ ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಗುರುವಾರ ಸಹ ಕೆಲಸಕ್ಕೆ ಹೋಗಿದ್ದರು. ಶಾಲೆಯಿಂದ ಸಂಜೆ ಮನೆಗೆ ಮರಳಿದ ಬಳಿಕ ಮಕ್ಕಳಿಗೆ ಮನೆ ಪಾಠಕ್ಕೆ ಹೋಗುವಂತೆ ಅವರು ಹೇಳಿದ್ದರು. ಪ್ರತಿದಿನ ಹೆತ್ತವರು ಕೂಲಿ ಕೆಲಸ ಮುಗಿಸಿ ಮರಳುವವರೆಗೆ ಮನೆಪಾಠಕ್ಕೆ ಮಕ್ಕಳು ಹೋಗುತ್ತಿದ್ದರು. ಆದರೆ ಗುರುವಾರ ಮನೆಪಾಠಕ್ಕೆ ಚಕ್ಕರ್ ಹಾಕಿದ ಮಕ್ಕಳು, ತಮ್ಮ ಸ್ನೇಹಿತನ ಜತೆ ಸೇರಿ ಆಟವಾಡುತ್ತಾ ಮಂಗಮ್ಮನಹಳ್ಳಿ ಕೆರೆ ಬಳಿಗೆ ಮೂವರು ಬಂದಿದ್ದಾರೆ. ಆಗ ಕೆರೆಯಲ್ಲಿ ಈಜಾಡಲು ಮಕ್ಕಳು ಇಳಿದಿದ್ದಾರೆ. ಆದರೆ ಹೂಳಿನಲ್ಲಿ ಸಂಜಯ್ ಹಾಗೂ ಜಗನ್ನಾಥ್ ಸಿಲುಕಿದ್ದಾರೆ. ಕೂಡಲೇ ಅವರ ಜತೆ ಈಜಾಡುತ್ತಿದ್ದ ಮೃತರ ಗೆಳೆಯ ನೀರಿನಿಂದ ಹೊರ ಬಂದಿದ್ದಾನೆ. ತಕ್ಷಣವೇ ತನ್ನ ಸ್ನೇಹಿತರ ರಕ್ಷಣೆಗೆ ಸ್ಥಳೀಯರಿಗೆ ಆತ ಮಾಹಿತಿ ನೀಡಿದ್ದಾನೆ. ಆಗ ಕೆರೆ ಬಳಿ ದೌಡಾಯಿಸಿದ ಸ್ಥಳೀಯರು, ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ಉಸಿರುಗಟ್ಟಿ ಸಂಜಯ್ ಕೊನೆಯುಸಿರೆಳೆದಿದ್ದಾನೆ. ಜಗನ್ನಾಥ್‌ನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.