ತಿಪಟೂರು : ಎತ್ತಿನಹೊಳೆ ಕಾಮಗಾರಿ ಯೋಜನೆಯ ನೀರಿನ ಹೊಂಡಕ್ಕೆ ಬಿದ್ದು 2 ಮಕ್ಕಳ ಸಾವು

KannadaprabhaNewsNetwork |  
Published : Nov 09, 2024, 01:19 AM ISTUpdated : Nov 09, 2024, 11:31 AM IST
ಎತ್ತಿನಹೊಳೆ ಕಾಮಗಾರಿ ಬಳಿ ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ | Kannada Prabha

ಸಾರಾಂಶ

ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿನ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತಿಪಟೂರಿನ ಬೈಪಾಸ್ ಸಮೀಪದ ಹುಚ್ಚನಹಟ್ಟಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

 ತಿಪಟೂರು :  ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿನ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಗರದ ಬೈಪಾಸ್ ಸಮೀಪದ ಹುಚ್ಚನಹಟ್ಟಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಹುಚ್ಚನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಮುನಿರಾಜು ಮತ್ತು ರಾಧಾ ದಂಪತಿಗಳ ಪುತ್ರ ಎರಡನೇ ತರಗತಿ ಓದುತ್ತಿರುವ ಯದುವೀರ್ (8) ಮತ್ತು ನಟರಾಜು ಮತ್ತು ಸುಮಾ ದಂಪತಿಗಳ ಪುತ್ರ ನಾಲ್ಕನೇ ತರಗತಿಯ ವ್ಯಾಸಂಗ ಮಾಡುತ್ತಿರುವ ಮನೋಹರ್ (10) ಮೃತ ದುರ್ದೈವಿಗಳು.

ಇವರು ಗುರುವಾರ ಶಾಲೆ ಮುಗಿಸಿಕೊಂಡು ಬಂದ ನಂತರ ಆಟವಾಡಲು ಮನೆಯಿಂದ ಹೊರ ಬಂದ ಮಕ್ಕಳು ಕತ್ತಲಾದರೂ ಮನೆಗೆ ಬಾರದ ಕಾರಣ ಗ್ರಾಮದವರೆಲ್ಲಾ ಸೇರಿ ಹುಡುಕಿದರೂ ಪತ್ತೆಯಾಗಿಲ್ಲ. ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಬೆಳಿಗ್ಗೆ ನಾಲೆಯ ಸಮೀಪ ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಮೀಪದಲ್ಲಿಯೇ ಇದ್ದ ಕೆರೆ-ಕಟ್ಟೆಗಳಲ್ಲಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ನಂತರ ನಾಲೆಯ ಪಕ್ಕದಲ್ಲಿ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ಎರಡು ಪುಟ್ಟ ಹೊಂಡಗಳಲ್ಲಿ ಹುಡುಕಿದಾಗ ಎರಡೂ ಮಕ್ಕಳ ದೇಹಗಳು ಹೊರಬಂದಿವೆ.

ಕುಟುಂಬಸ್ಥರ ಆಕ್ರಂದನ:

ಮಕ್ಕಳ ಮೃತ ದೇಹಗಳು ದೊರೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಕ್ಕಳ ಸಾವಿಗೆ ನ್ಯಾಯ ಸಿಗುವವರೆಗೂ ಶವವನ್ನು ಸ್ಥಳದಿಂದ ಎತ್ತಲು ಬಿಡುವುದಿಲ್ಲ. ಸೂಕ್ತ ಪರಿಹಾರ ನೀಡದೇ ಎತ್ತಿನಹೊಳೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಾಲಕರು, ಗ್ರಾಮಸ್ಥರು ಪಟ್ಟು ಹಿಡಿದು ಕುಳಿತರು.ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಷಡಕ್ಷರಿ ಕುಟುಂಬದವರನ್ನು ಸಮಾಧಾನಪಡಿಸಿ ಸ್ಥಳಕ್ಕೆ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿ, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿ ಕೆಲಸ ಮಾಡಲು ಸೂಚಿಸಿದರು. ಕಾಮಗಾರಿಯ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್‌ಗೆ ಸ್ಥಳಕ್ಕೆ ಆಗಮಿಸಲು ಸೂಚಿಸಿದರು.

ಬಾಳಿ ಬದುಕಬೇಕಿದ್ದ ಇಬ್ಬರು ಮಕ್ಕಳು ಜೀವ ಕಳೆದುಕೊಂಡಿರುವುದು ಅತ್ಯಂದ ದುಃಖದ ಸಂಗತಿ. ಅವರ ಪೋಷಕರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಮುಂದೆ ಇಂತಹ ಘಟನೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶವ ಸಂಸ್ಕಾರ ಮಾಡುವಂತೆ ಶಾಸಕರು ಮನವಿ ಮಾಡಿಕೊಂಡರು.

ಒಂದು ಕೋಟಿ ರು. ಪರಿಹಾರಕ್ಕೆ ಬೇಡಿಕೆ:

ಮಕ್ಕಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಹುಚ್ಚನಹಟ್ಟಿ ಗ್ರಾಮಸ್ಥರು ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಎತ್ತಿನಹೊಳೆ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮಕ್ಕಳ ಸಾವು ಸಂಭವಿಸಿದೆ. ಆದ್ದರಿಂದ ಮಕ್ಕಳ ಕುಟುಂಬದವರಿಗೆ ಒಂದು ಕೋಟಿ ರು. ಪರಿಹಾರ ನೀಡುವಂತೆ ಆಗ್ರಹಿಸಿದರು. ಸ್ಥಳಕ್ಕೆ ಎಸ್ಪಿ ಕೆ.ವಿ. ಅಶೋಕ್, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್, ತಹಸೀಲ್ದಾರ್ ಪವನ್‌ಕುಮಾರ್ ಭೇಟಿ ನೀಡಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ