ಕನ್ನಡಪ್ರಭ ವಾರ್ತೆ ಮದ್ದೂರು
ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸುವ ಹಾಗೂ ಹಾಲಿ ಇರುವ ಸ್ಥಳದಲ್ಲೇ ಕೆಲವೊಂದು ಬದಲಾವಣೆಗಳೊಂದಿಗೆ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಉತ್ತಮಗೊಳಿಸುವ ಎರಡು ಯೋಜನಾ ವರದಿಗಳು ಸಿದ್ಧವಿರುವುದಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.ಪಟ್ಟಣದ ಎಪಿಸಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಸಮಯದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಹೊಸ ಕಾರ್ಖಾನೆ ನಿರ್ಮಿಸಬೇಕಾದರೆ ೩೫೦ ಕೋಟಿ ರು.ಗಳಿಂದ ೪೦೦ ಕೋಟಿ ರು. ಅವಶ್ಯಕತೆ ಇದೆ. ಇರುವಲ್ಲೇ ಕೆಲವೊಂದು ಬದಲಾವಣೆ ಮಾಡಬೇಕಾದರೆ ಏನೇನು ಮಾಡಬೇಕು, ಖರ್ಚು ಎಷ್ಟಾಗಲಿದೆ ಎನ್ನುವುದನ್ನು ನೋಡಬೇಕು. ಎರಡೂ ಸಮಗ್ರ ಯೋಜನೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ. ಇನ್ನೂ ಯಾವುದೇ ಅಂತಿಮ ನಿರ್ಣಯ ಸರ್ಕಾರದ ಮಟ್ಟದಲ್ಲಿ ಆಗಿಲ್ಲ ಎಂದು ವಿವರಿಸಿದರು.
ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಯಾವುದೇ ಖಾಸಗಿ ಕಾರ್ಖಾನೆಗಳ ಪಾಲಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಮೈಸೂರು ಮಹಾರಾಜರು ಸ್ಥಾಪಿಸಿರುವ ಕಾಆರ್ಖಾನೆಯನ್ನು ಉಳಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಎಪಿಎಂಸಿಗಳಿಗೆ ಮರುಜೀವ:
ಎಪಿಎಂಸಿಗಳ ಆದಾಯ ಮೂಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದರಿಂದ ಅವುಗಳಿಗೆ ಮರುಜೀವ ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎಪಿಎಂಸಿ ಸಚಿವರೂ ಆಗಿರುವ ಸಕ್ಕರೆ ಸಚಿವ ಶಿವಾನಂದಪಾಟೀಲ್ ಹೇಳಿದರು.ರಾಜ್ಯದಲ್ಲಿ ಎಪಿಎಂಸಿ ಆದಾಯ ೨೦೧೯ರಲ್ಲಿ ೬೦೦ ಕೋಟಿ ರು. ಇತ್ತು. ಈಗ ಅದು ೧೮೦ ಕೋಟಿ ರು.ಗೆ ಕುಸಿದಿದೆ. ಇದನ್ನು ಮತ್ತೆ ೩೫೦ ಕೋಟಿ ರು.ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಎಪಿಎಂಸಿಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಎಪಿಎಂಸಿಗಳಿಗೆ ಬರುವ ಆದಾಯ ಕೈತಪ್ಪಿಹೋದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮಂಡ್ಯದ ಎಪಿಎಂಸಿ ಆದಾಯ ಕಳೆದ ವರ್ಷ ಮೂರು ತಿಂಗಳಲ್ಲಿ ೨೫ ಲಕ್ಷ ರು. ಇದ್ದು, ಈ ವರ್ಷ ೨೨ ಲಕ್ಷಕ್ಕೆ ಕುಸಿದಿದೆ. ಇದಕ್ಕೆ ಕಾರಣವೇನೆಂಬುದನ್ನು ಪತ್ತೆಹಚ್ಚುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ ಎಂದ ಅವರು, ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಅದಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದಕ್ಕೂ ರೋಸ್ಟರ್ ಪದ್ಧತಿಯನ್ನು ಅನುಸರಿಸಲಾಗುವುದು. ಎಷ್ಟು ಸಿಬ್ಬಂದಿ ಅವಶ್ಯಕವಿದೆ ಎಂಬ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.