ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಎಂಜಿನಿಯರ್‌ಗಳು ಬಲಿ

KannadaprabhaNewsNetwork | Published : Jul 30, 2024 1:31 AM

ಸಾರಾಂಶ

ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬಲಿಯಾಗಿರುವ ಘಟನೆ ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಬಲಿಯಾಗಿರುವ ಘಟನೆ ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಣಸವಾಡಿಯ ಪ್ರಶಾಂತ್‌(25) ಮತ್ತು ಆಂಧ್ರಪ್ರದೇಶದ ಹಿಂದೂಪರ ಮೂಲದ ಶಿಲ್ಪಾ(27) ಮೃತ ದುರ್ದೈವಿಗಳು. ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಶೇಷಾದ್ರಿ ರಸ್ತೆಯ ಕೆ.ಆರ್‌.ವೃತ್ತದ ಬಳಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕ ರಾಜಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಪ್ರಶಾಂತ್‌ ಮತ್ತು ಶಿಲ್ಪಾ ಐಟಿಪಿಎಲ್‌ನ ಟಿಸಿಎಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆಂಧ್ರಪ್ರದೇಶ ಮೂಲದ ಶಿಲ್ಪಾ ನಗರದ ನಾಗವಾರದ ಪೇಯಿಂಗ್‌ ಗೆಸ್ಟ್‌ನಲ್ಲಿ (ಪಿಜಿ) ನೆಲೆಸಿದ್ದರು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸ್ನೇಹಿತರಾಗಿದ್ದರು. ಭಾನುವಾರ ರಾತ್ರಿ ಪ್ರಶಾಂತ್‌ ಮತ್ತು ಶಿಲ್ಪಾ ಹಾರ್ಲಿ ಡೇವಿಡ್‌ಸನ್‌ ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್‌ನ ಹೋಟೆಲ್‌ವೊಂದಕ್ಕೆ ಬಂದು ಊಟ ಮಾಡಿಕೊಂಡು ಬಳಿಕ ಶೇಷಾದ್ರಿ ರಸ್ತೆ ಮಾರ್ಗವಾಗಿ ಕೆ.ಆರ್‌.ವೃತ್ತದ ಕಡೆಗೆ ಹೊರಟ್ಟಿದ್ದಾರೆ.

ಸಿಐಡಿ ಜಂಕ್ಷನ್‌ ಕಡೆಯಿಂದ ಬಂದು ಡಿಕ್ಕಿ:

ಇದೇ ಸಮಯಕ್ಕೆ ಸಿಐಡಿ ಜಂಕ್ಷನ್‌ ಕಡೆಯಿಂದ ಬಿಬಿಎಂಪಿ ಲಾರಿ ವೇಗವಾಗಿ ಬಂದು ಶೇಷಾದ್ರಿ ರಸ್ತೆಗೆ ತಿರುವು ಪಡೆಯುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಪ್ರಶಾಂತ್‌ ಮತ್ತು ಶಿಲ್ಪಾ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರು ಗಾಯಾಳುಗಳನ್ನೂ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಇಬ್ಬರೂ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಬಿಬಿಎಂಪಿ ಕಸದ ಲಾರಿ ಚಾಲಕ ಬಂಧನ:

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಚಾಲಕ ಕಸದ ಲಾರಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದ. ಹೀಗಾಗಿ ಪೊಲೀಸರು ಆ ಲಾರಿ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದರು. ಸೋಮವಾರ ಲಾರಿ ಚಾಲಕ ರಾಜಪ್ಪನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಮೃತದೇಹಗಳನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲಾರಿ ಚಾಲಕನ ರಕ್ತದ ಮಾದರಿ ಪರೀಕ್ಷೆಗೆ

ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿಬಿಎಂಪಿ ಕಸದ ಲಾರಿ ಚಾಲಕ ರಾಜಪ್ಪನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆತ ಲಾರಿ ಚಾಲನೆ ವೇಳೆ ಮದ್ಯಪಾನ ಮಾಡಿದ್ದನೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಚಾಲಕ ರಕ್ತದ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮದ್ಯ ಸೇವನೆ ಬಗ್ಗೆ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಳಗ್ಗೆ ಮದುವೆ ಮಾತು: ರಾತ್ರಿ ಮಗಳು ಸಾವು

ಮೃತ ಶಿಲ್ಪಾ ತಂದೆ ವೆಂಕಟರಾಮ ರೆಡ್ಡಿಗೆ ಮೂವರು ಹೆಣ್ಣು ಮಕ್ಕಳು. ಈ ಮೂವರ ಪೈಕಿ ಶಿಲ್ಪಾ ಮೂರನೇ ಪುತ್ರಿ. ಈ ವರ್ಷ ಮಗಳ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಹೀಗಾಗಿ ತಂದೆ ವೆಂಕಟರಾಮ ರೆಡ್ಡಿ ಚಿನ್ನಾಭರಣಗಳನ್ನು ಖರೀದಿಸಿದ್ದರು. ಭಾನುವಾರ ಬೆಳಗ್ಗೆ ಸಹ ಮಗಳಿಗೆ ಫೋನ್‌ ಮಾಡಿ ಮದುವೆ ಬಗ್ಗೆ ಕೆಲ ಹೊತ್ತು ಮಾತನಾಡಿದ್ದರು ಎನ್ನಲಾಗಿದೆ. ವಿಧಿಯಾಟ ಅಂದು ರಾತ್ರಿಯೇ ಬಿಬಿಎಂಪಿ ಕಸದ ಲಾರಿಗೆ ಶಿಲ್ಪಾ ಬಲಿಯಾಗಿದ್ದಾಳೆ. ಬೌರಿಂಗ್‌ ಆಸ್ಪತ್ರೆ ಬಳಿಕ ಮೃತ ಶಿಲ್ಪಾ ತಂದೆ ಹಾಗೂ ಅವರ ಕುಟುಂಬದ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿತ್ತು.ಹುಟ್ಟಿದ ಆಸ್ಪತ್ರೆಯಲ್ಲೇ ಪ್ರಶಾಂತ್‌ ಸಾವು

ಮಗ ಪ್ರಶಾಂತ್‌ ಐಟಿಪಿಎಲ್‌ನ ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಯುವತಿ ಸಹ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಬಿಬಿಎಂಪಿ ಕಸದ ಲಾರಿಗೆ ಇಬ್ಬರೂ ಬಲಿಯಾಗಿದ್ದಾರೆ. ನನ್ನ ಮಗ ಇದೇ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಯಲ್ಲಿ ಹುಟ್ಟಿದ್ದ. ಇದೀಗ ಇದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯಬೇಕು ಎಂದು ಮೃತ ಪ್ರಶಾಂತ್‌ ತಂದೆ ಕಣ್ಣೀರಿಟ್ಟರು. ಕುಟುಂಬದ ಸದಸ್ಯರು ಆಸ್ಪತ್ರೆ ಬಳಿ ರೋಧಿಸುವ ದೃಶ್ಯ ನೋಡುಗರ ಮನಕಲಕಿತು.

Share this article