ಮಂಡ್ಯ ಜಿಲ್ಲೆಯ ಎರಡು ಕಡೆ ರಾಜ್ಯಕ್ಕೆ ಅತಿ ಹೆಚ್ಚು ಮಳೆ

KannadaprabhaNewsNetwork |  
Published : Jun 04, 2024, 12:30 AM IST
೩ಕೆಎಂಎನ್‌ಡಿ-೭ಡಾ.ಸುಮಂತ್ | Kannada Prabha

ಸಾರಾಂಶ

ಜೂ.೧ ಮತ್ತು ೨ರಂದು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ನಾಗಮಂಗಲ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದರೆ, ಮಂಡ್ಯ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರದಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಶ್ರೀರಂಗಪಟ್ಟಣದಲ್ಲಿ ಎರಡೂ ದಿನ ಅತಿ ಕಡಿಮೆ ಮಳೆಯಾಗಿರುವುದು ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಎರಡು ಗ್ರಾಮಗಳಲ್ಲಿ ಜೂ.೧ರಂದು ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿಯಲ್ಲಿ ೧೧೭ ಮಿ.ಮೀ. ಹಾಗೂ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ೧೦೪ ಮಿ.ಮೀ. ಮಳೆ ಸುರಿದಿರುವ ಬಗ್ಗೆ ದಾಖಲಾಗಿದೆ.

ಜೂ.೧ ಮತ್ತು ೨ರಂದು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ನಾಗಮಂಗಲ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದರೆ, ಮಂಡ್ಯ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರದಲ್ಲಿ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಶ್ರೀರಂಗಪಟ್ಟಣದಲ್ಲಿ ಎರಡೂ ದಿನ ಅತಿ ಕಡಿಮೆ ಮಳೆಯಾಗಿರುವುದು ಕಂಡುಬಂದಿದೆ.

ಜೂ.೧ರಂದು ಜಿಲ್ಲೆಯಲ್ಲಿ ವಾಡಿಕೆ ಮಳೆ ೪.೩ ಮಿ.ಮೀ.ಗೆ ಬದಲಾಗಿ ೨೧.೫ ಮಿ.ಮೀ. ಮಳೆಯಾಗಿದ್ದರೆ, ಜೂ.೨ರಂದು ೩.೫ ವಾಡಿಕೆ ಮಳೆಗೆ ೧೭ ಮಿ.ಮೀ.ನಷ್ಟು ಮಳೆಯಾಗಿರುವುದು ದಾಖಲಾಗಿದೆ. ಮೇ ಎರಡನೇ ವಾರದಿಂದ ಪೂರ್ವ ಮುಂಗಾರು ಜಿಲ್ಲೆಯಲ್ಲಿ ಆಶಾದಾಯಕವಾಗಿ ಬೀಳುವುದರೊಂದಿಗೆ ಬರಗಾಲದಿಂದ ತತ್ತರಿಸಿಹೋಗಿದ್ದ ರೈತರಿಗೆ ಹೊಸ ಚೈತನ್ಯವನ್ನು ನೀಡಿತ್ತು.

ಇದೀಗ ಮುಂಗಾರು ಮಳೆಯೂ ಶುಭಾರಂಭಗೊಂಡಿರುವುದು ರೈತರಿಗೆ ಇನ್ನಷ್ಟು ಸಮಾಧಾನವನ್ನು ತಂದಿದೆ.

ಉತ್ತಮ ಮಳೆಯಾಗುತ್ತಿರುವುದರಿಂದ ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರವನ್ನು ಖರೀದಿಸಿಟ್ಟುಕೊಂಡು ಮುಂಗಾರು ಹಂಗಾಮು ಬೆಳೆ ಬೆಳೆಯುವುದಕ್ಕೆ ಸಿದ್ಧರಾಗಿದ್ದಾರೆ.

ಮುಂಗಾರು ಎಲ್ಲೆಡೆ ಉತ್ತಮ ಆರಂಭಗೊಂಡಿರುವುದು ಈ ಬಾರಿ ಬರಗಾಲದ ಛಾಯೆಯನ್ನು ಮರೆಮಾಚುವಂತೆ ಮಾಡಿದೆ. ಕಳೆದ ಬಾರಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ನಿರೀಕ್ಷೆಯಂತೆ ಬೀಳದಿದ್ದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದರು. ಬೆಳೆ ಬೆಳೆಯಲು ನೀರು ಸಿಗದೆ ಕಂಗಾಲಾಗಿದ್ದರೆ, ಬೇಸಿಗೆ ಬೆಳೆಗೂ ನೀರು ಸಿಗದಂತಾಗಿ ಕಂಗೆಟ್ಟುಹೋಗಿದ್ದರು. ಇದೀಗ ಬೀಳುತ್ತಿರುವ ಮಳೆ ಕೃಷಿ ಚಟುವಟಿಕೆ ಚುರುಕುಗೊಳ್ಳುವಂತೆ ಮಾಡಿದೆ. ವರುಣ ಕೃಪೆ ತೋರಿರುವುದರಿಂದ ರೈತರು ಬೆಳೆ ಬೆಳೆದು ಹೊಸ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಿದ್ಧರಾಗುತ್ತಿದ್ದಾರೆ.

ಮುಂಗಾರು ಆಶಾದಾಯಕ

ಕಳೆದ ವರ್ಷ ಎಲ್‌ನಿನೋ ಪರಿಣಾಮದಿಂದ ಮುಂಗಾರು ಮಳೆ ನಿರೀಕ್ಷೆಯಂತೆ ಬರಲಿಲ್ಲ. ಈ ವರ್ಷ ಮುಂಗಾರು ಮಳೆ ಆಶಾದಾಯಕವಾಗಿರಲಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ವಾತಾವರಣವಿದೆ. ಜುಲೈ ತಿಂಗಳಲ್ಲಿ ಮಳೆ ಕಡಿಮೆಯಾದರೂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ರೈತರು ಆತಂಕಪಡುವ ಅಗತ್ಯವಿಲ್ಲ.

-ಡಾ.ಸುಮಂತ್, ಸಹ ಸಂಶೋಧಕರು, ಹವಾಮಾನ ವಿಭಾಗ, ನಾಗನಹಳ್ಳಿ, ಮೈಸೂರು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ