ಕನಕಗಿರಿ: ತಾಲೂಕಿನ ಕಲಕೇರಿ ಗ್ರಾಮದ ಟಂಕಶಾಲಾ ಸ್ಥಳದಲ್ಲಿ ೧೧ ಹಾಗೂ ೧೨ನೇ ಶತಮಾನದ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.
ಹೆರಿಟೆಜ್ ಗ್ರಾಮದ ಜತೆಗೆ ಇದೇ ಸ್ಥಳದಲ್ಲಿ ಮ್ಯೂಸಿಯಂ ಮಾಡಬೇಕೆನ್ನುವ ಉದ್ದೇಶ ಜಿಪಂ ಸಿಇಒ ಅವರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಆರ್. ಶೇಜೇಶ್ವರ ಇತ್ತೀಚೆಗೆ ಕಲಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಎರಡು ಶಿಲಾ ಶಾಸಕನಗಳು ಪತ್ತೆಯಾಗಿವೆ.೧ನೇ ಶಾಸನ:
ಗ್ರಾಮದ ಜೋಷಿ ಎಂಬ ದೇವಾಲಯದಲ್ಲಿ ಅಸಂರಕ್ಷಿತವಾಗಿ ಬಿದ್ದಿದ್ದ, ಅಪ್ರಕಟಿತ ಶಾಸನ ಪತ್ತೆಯಾಗಿದ್ದು, ಇದು ೩೫ ಸೆಂಮೀ ಉದ್ದ, ೫೫ ಸೆಂಮೀ ಅಗಲವಿದೆ. ಹಳೆಗನ್ನಡದಲ್ಲಿರುವ ಈ ಶಾಸನ ಏಳು ಸಾಲುಗಳಿಂದ ಕೂಡಿದೆ. ಕಲ್ಯಾಣ ಚಾಲುಕ್ಯರ ಎರಡನೇ ಜಯಸಿಂಹನ ಕಾಲಾವಧಿಯದ್ದಾಗಿದೆ. ಕ್ರಿಶ ೧೦೧೫ ರಿಂದ ೧೦೪೨ರ ಅವಧಿಯ ಕ್ರಿಶ ೧೧ ನೇ ಶತಮಾನದ ಶಾಸನವಾಗಿದ್ದು, ಎರಡನೇ ಜಯಸಿಂಹನು ಹತ್ತು ಮತ್ತು ಐದು ಮತ್ತರು ಭೂಮಿಯನ್ನು ದಾನ ನೀಡಿ ಈ ಶಾಸನವನ್ನು ಹಾಳು ಮಾಡಿದಲ್ಲಿ ಗೋವುಗಳನ್ನು ಕೊಂದ ಪಾಪಕ್ಕೆ ಹೋಗುವರು ಎಂದು ಉಲ್ಲೇಖಗೊಂಡಿದೆ.೨ನೇ ಶಾಸನ:
ಇದು ತಳವಾರ ರಾಮಣ್ಣನ ಜಮೀನಿನಲ್ಲಿದ್ದು, ಮೇಲ್ಬಾಗ ತುಂಡಾಗಿದೆ. ಈ ಶಾಸನವು ಕ್ರಿಶ ೧೧-೧೨ನೇ ಶತಮಾನದ ಕಾಲದ್ದಾಗಿದೆ. ಶಿಲೆಯಿಂದ ಕೂಡಿರುವ ಶಾಸನವು ಒಂಬತ್ತು ಸಾಲು ಹೊಂದಿದೆ. ಈ ಶಾಸನದಲ್ಲಿ ಮಾಳೇಶ್ವರ ದೇವರಿಗೆ ಒಂದು ಗಾಣ ಆರು ಮತ್ತು ಎರಡು ಮತ್ತರು ಭೂಮಿಯನ್ನು ದಾನ ನೀಡಿರುವ ಮಾಹಿತಿ ಒಳಗೊಂಡಿದೆ. ಇವೆರಡು ಅಪ್ರಕಟಿತ ಶಾಸನಗಳಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿವೆ ಎಂದು ಪರಂಪರೆ ಇಲಾಖೆಯ ಉಪನಿರ್ದೇಶಕ ಶೇಜೇಶ್ವರ ತಿಳಿಸಿದ್ದಾರೆ.ನಂತರ ಗ್ರಾಮದ ಹಲವೆಡೆ ಸಂಚರಿಸಿ ಅಲ್ಲಲ್ಲಿ ಪಾಳು ಬಿದ್ದಿದ್ದ ಕೆಲ ಶಾಸನಗಳನ್ನು ಗಮನಿಸಿ ಅವುಗಳನ್ನು ಛಾಯಾಚಿತ್ರ ಪಡೆದುಕೊಂಡು ಸಂಶೋಧನೆ ನಡೆಸಿದರು. ಜತೆಗೆ ಗ್ರಾಮದಲ್ಲಿ ಯಾವ-ಯಾವ ಪ್ರದೇಶದಲ್ಲಿ ವೀರಗಲ್ಲು ಹಾಗೂ ಮಹಾಸತಿಗಲ್ಲುಗಳಿವೆ ಎಂಬುದನ್ನು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಪುರಾತತ್ವ ಸಹಾಯಕ ಡಾ. ಆರ್. ಮಂಜನಾಯ್ಕ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.