ಸಾಹಿತ್ಯ ಸಮ್ಮೇಳನ ಪ್ರಚಾರಕ್ಕಾಗಿ ದ್ವಿಚಕ್ರ ವಾಹನಗಳ ಜಾಥಾ

KannadaprabhaNewsNetwork | Published : Dec 16, 2024 12:47 AM

ಸಾರಾಂಶ

ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಮೋಟಾರ್ ಬೈಕ್ ಜಾಥಾವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಪ್ರಯುಕ್ತ ದ್ವಿಚಕ್ರ ವಾಹನಗಳ ಜಾಥಾಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಎಲ್ಲಾ ಕನ್ನಡಿಗ ಮನಸ್ಸುಗಳು ಒಂದಾಗಿ ಸಾಹಿತ್ಯದ ಹಬ್ಬವನ್ನು ಆಚರಿಸುವುದು ಜಾಥಾದ ಉದ್ದೇಶವಾಗಿದೆ. ಮಂಡ್ಯ ಜನತೆಯು ಸಹಕಾರದಿಂದ ಕೈಜೋಡಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿ ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಮೋಟಾರ್ ಬೈಕ್ ಜಾಥಾವನ್ನು ಆಯೋಜಿಸಲಾಗಿದೆ ಎಂದರು.

ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟು ಬೆಂಗಳೂರು - ಮೈಸೂರು ಹೆದ್ದಾರಿ ಮಾರ್ಗವಾಗಿ ಕಲ್ಲಹಳ್ಳಿಯ ಎಪಿಎಂಸಿ ಮಾರುಕಟ್ಟೆ, ವಿವಿ ನಗರ, ಅನ್ನಪೂರ್ಣೇಶ್ವರಿ ನಗರ, ಕಾರಸವಾಡಿ ರಸ್ತೆಯ ಅರಳಿಮರ ಸರ್ಕಲ್ ಮುಖಾಂತರ ಕಾಲುವೆ ರಸ್ತೆಯಲ್ಲಿ ಸಾಗಿ ಹೊಸಹಳ್ಳಿಯ ಶ್ರೀ ವೆಂಕಟೇಶ್ವರ ದೇವಸ್ಥಾನ, ಬಿಸಿಲು ಮಾರಮ್ಮನ ದೇವಸ್ಥಾನ ಹೊಸಹಳ್ಳಿ ವೃತ್ತ, ೧೦೦ ಅಡಿ ರಸ್ತೆಯಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯಿಂದ ಸುಭಾಷ್ ನಗರದ ವಿನೋಬ ರಸ್ತೆ, ಸಂಜಯ ಸರ್ಕಲ್, ಆರ್‌ಪಿ ರಸ್ತೆಯ ಮೂಲಕ ಕರ್ನಾಟಕ ಬಾರ್ ಸರ್ಕಲ್, ಜಾಥಾ ನೂರಡಿ ರಸ್ತೆಯಲ್ಲಿ ಸಂಚರಿಸಿ ವಿವಿ ರಸ್ತೆಯ ಮೂಲಕ ಮಹಾವೀರ ವೃತ್ತ, ಸಿಮೆಂಟ್ ಡಬಲ್ ರೋಡ್, ಬೆಸಗರಹಳ್ಳಿ ರಾಮಣ್ಣ ವೃತ್ತ, ಆಸ್ಪತ್ರೆ ರಸ್ತೆ, ನಂದಾ ವೃತ್ತ, ಫ್ಯಾಕ್ಟರಿ ಸರ್ಕಲ್, ಗುತ್ತಲು ರಸ್ತೆ, ಸ್ವರ್ಣಸಂದ್ರ ಶನೇಶ್ವರ ದೇವಸ್ಥಾನದ ಮೂಲಕ ಮತ್ತೆ ಫ್ಯಾಕ್ಟರಿ ವೃತ್ತ, ದಾಟಿ ಕಾಳಮ್ಮನ ದೇವಸ್ಥಾನ ಕಾರೆಮನೆ ಗೇಟ್, ಹೊಳಲು ವೃತ್ತದ ಮೂಲಕ ಸಂಚರಿಸಿ ರೈತ ಸಭಾಂಗಣ ತಲುಪಿ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಂಡಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೆಗೌಡ, ಕೋಶಾಧ್ಯಕ್ಷ ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಪದಾಧಿಕಾರಿಗಳಾದ ರತ್ನಶ್ರೀ, ವಿಜಯಲಕ್ಷ್ಮೀ, ಲತಾ, ಪ್ರೊ .ಎಂ.ಎ.ಪ್ರಮೀಳಾ, ಪುಷ್ಪಲತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article