ಯುಕೊ ಸಂಘಟನೆ ಐದನೇ ವರ್ಷದ ಬೇದ ಚಂಗ್ರಾಂದಿ ಆಚರಣೆ

KannadaprabhaNewsNetwork | Published : Feb 14, 2024 2:19 AM

ಸಾರಾಂಶ

ಬೇದ ಚಂಗ್ರಾಂದಿ ಆಚರಣೆ ಪ್ರಯುಕ್ತ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕೈ ಎಣ್ಣೆಯನ್ನು ನಿಯಮದಂತೆ ಭೂಮಿಗೆ ಸುರಿದರು. ಪಕ್ಕದಲ್ಲಿ ಮರದ ಬಾಚಣಿಕೆಯನ್ನಿಟ್ಟು,- ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ - ಕುಂಬ್ಯಾತ್ ಮಳೆ ಆಯಿತ್ ಕುಂದ್ ಲೂ ಕೂಳಾಡ್ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯ ಗದ್ದೆಯಲ್ಲಿ ಯುಕೊ ಸಂಘಟನೆಯ ವತಿಯಿಂದ 5ನೇ ವರ್ಷದ ಬೇದ ಚಂಗ್ರಾಂದಿ ಆಚರಣೆ ಮಂಗಳವಾರ ನಡೆಯಿತು.ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕೈ ಎಣ್ಣೆಯನ್ನು ನಿಯಮದಂತೆ ಭೂಮಿಗೆ ಸುರಿದರು. ಪಕ್ಕದಲ್ಲಿ ಮರದ ಬಾಚಣಿಕೆಯನ್ನಿಟ್ಟು,- ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ - ಕುಂಬ್ಯಾತ್ ಮಳೆ ಆಯಿತ್ ಕುಂದ್ ಲೂ ಕೂಳಾಡ್ ಎಂದು ಹೇಳುವುದರ ಮೂಲಕ ಭೂಮಿತಾಯಿಯನ್ನು ಭಾವನಾತ್ಮಕವಾಗಿ ಸ್ಮರಿಸಲಾಯಿತು.

ನಂತರ ಸುಜು ಕರುಂಬಯ್ಯ ಅವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರ ನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿ ತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಕೇತವಾಗಿ ಕೊಡವರು ಬೇದ ಚಂಗ್ರಾಂದಿ ಆಚರಣೆ ಮಾಡುತ್ತಾರೆ ಎಂದು ಹೇಳಿದರು.ವಿಜ್ಞಾನಕ್ಕೆ ನಿಲುಕದ ಸಂಗತಿಗಳು ಸಂಸ್ಕೃತಿ, ಸಂಪ್ರದಾಯ ಹಾಗು ಆಧ್ಯಾತ್ಮಿಕತೆಯಲ್ಲಿ ಅಡಕವಾಗಿವೆ. ವಿಜ್ಞಾನವು ಕೇವಲ ತರ್ಕಕ್ಕೆ ಮಾತ್ರ ಸೀಮಿತವಾದ ಜ್ಞಾನವಾಗಿದೆ. ಆದರೆ, ಆಧ್ಯಾತ್ಮ ಹಾಗೂ ಪಾರಂಪರಿಕ ಆಚರಣೆಗಳು ವಿಜ್ಞಾನವನ್ನೂ ಮೀರಿದ, ತರ್ಕಕ್ಕೂ ನಿಲುಕದ ಸತ್ಯವಾಗಿದೆ. ಆದರಿಂದಲೇ ತಲೆಲಾಂತರಗಳ ಆಚರಣೆಗಳು ಹಾಗು ನಂಬಿಕೆಯ ತಳಹದಿಯ ಮೇಲೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಯುಕೊ ಸಂಘಟನೆಯು ಬೇದಚಂಗ್ರಾಂದಿ ಆಚರಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರುಅನಾದಿ ಕಾಲದಿಂದಲೂ ಕೊಡವರು ತಮ್ಮದೇ ಆದ ಸ್ವಂತ ಶಕ್ತಿಯಿಂದ, ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗು ಸಂಸ್ಕಾರಗಳನ್ನು ಪಾಲಿಸುತ್ತಾ ನಂಬಿಕೆಗಳನ್ನು ಉಳಿಸಿಕೊಳ್ಳುವುದರ ಮೂಲಕ ತಮ್ಮ ಏಳಿಗೆಯನ್ನು ಕಂಡುಕೊಂಡ ಅಪರೂಪದ ಜನಾಂಗವಾಗಿದೆ. ಇತಿಹಾಸದಿಂದಲೇ ಯಾವುದೇ ರಾಜರಿಂದಾಗಲಿ, ರಾಜಕೀಯದಿಂದಾಗಲಿ ಕೊಡವರಿಗೆ ಅನುಕೂಲಗಳಾದ ಉದಾಹರಣೆಗಳೇ ಇಲ್ಲ. ಈಗಲೂ ಸಹ ಯಾವುದೇ ರಾಜಕೀಯ ಪಕ್ಷ ಅಥವ ಮುಖಂಡರಿಂದ ಕೊಡವರಿಗೆ ಒಳಿತಾಗುತ್ತದೆ ಎಂಬುವುದು ಕೇವಲ ಭ್ರಮೆಯಷ್ಟೆ. ಆದ್ದರಿಂದ ನಮ್ಮ ಅಸ್ತಿತ್ವವನು ಉಳಿಸಿಕೊಳ್ಳುವತ್ತ ನಾವೇ ಗಮನ ಹರಿಸುವುದರ ಮೂಲಕ ನಮ್ಮನ್ನು ನಾವು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳಬೇಕೆಂದು ಅವರು ಕೊಡವರಿಗೆ ಕರೆ ನೀಡಿದರು.ಪ್ರಪಂಚದಾದ್ಯಂತ ಹರಡಿರುವ ಕೊಡವರು ಕನಿಷ್ಠ ಹಬ್ಬ ಹರಿದಿನಗಳು, ಹಾಗು ತಮ್ಮ ತಮ್ಮ ಮನೆತನಗಳ ‘ಕಾರೋಣಂಗ್ ಕೊಡ್ಪ’ ಕಾರ್ಯಕ್ರಮಗಳಿಗಾದರೂ ತಮ್ಮ ಮೂಲ ನೆಲೆಗೆ ಬಂದು ಪ್ರಾರ್ಥಿಸುವಂತಾಗಬೇಕು, ಆ ಮೂಲಕ ತಮ್ಮ ಮೂಲ ಅಸ್ಥಿಸ್ತಿತ್ವವಾದ ‘ಮಣ್ಣ್ ಮನಸ್ಥಾನ’ವನ್ನು ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಭೌತಿಕ, ಭಾವನಾತ್ಮಕ ಹಾಗು ಆಧ್ಯಾತ್ಮಿಕ ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಕೊಡವರನ್ನು ಹೊರತು ಪಡಿಸಿದಂತೆ ಎಲ್ಲಾ ಸಮುದಾಯಗಳ ಜನಾಂಗೀಯ ಹಾಗು ಧಾರ್ಮಿಕ ನಿರ್ಧಾರ ಗಳು ಆಯಾ ಜನಾಂಗೀಯ ಹಾಗು ಧಾರ್ಮಿಕ ಮುಖಂಡರಿಂದಲೇ ಆಗುತ್ತಿದೆ. ದುರಾದೃಷ್ಟವಶಾತ್ ಕೊಡವ ಸಮುದಾಯದ ಜನಾಂಗೀಯ ಹಾಗು ಧಾರ್ಮಿಕ ನಿರ್ಧಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅಧಿಕವಾಗಿದೆ. ಇದುವೇ ಸಮುದಾಯಕ್ಕೆ ಮಾರಕವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಮೊದಲಿಗೆ ತಪ್ಪಡಕ ಕಟ್ಟಿ ಪ್ರಾರ್ಥಿಸಲಾಯಿತು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿದರು,ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ದೀನಾ ಉತ್ತಪ್ಪ, ಕಾಟಿಮಾಡ ಗಿರಿ ಅಯ್ಯಪ್ಪ, ನೆಲ್ಲಮಕ್ಕಡ ಮಾದಯ್ಯ, ಅಜಿನಿಕಂಡ ತಿಮ್ಮಯ್ಯ, ಮಚ್ಚಾಮಾಡ ರಮೇಶ್, ರೇಶ್ಮ, ಗಣಪತಿ,ಗಂಗಮ್ಮ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಮಂಡಂಗಡ ಅಶೋಕ್, ಕೊಕ್ಕಲೇಮಾಡ ರತಿ ಕುಶಾಲಪ್ಪ, ಚಟ್ಟಂಗಡ ರಮಾ ಉತ್ತಪ್ಪ, ಗೀತಾ ವಸಂತ್ ಹಾಜರಿದ್ದರು.

Share this article