ಸುಭಾಶ್ಚಂದ್ರ ಎಸ್.ವಾಗ್ಳೆ
ಕನ್ನಡಪ್ರಭ ವಾರ್ತೆ ಉಡುಪಿಕೃಷ್ಣನೂರು ಉಡುಪಿಯಲ್ಲಿ ಎಲ್ಲಿ ನೋಡಿದರೂ ಪರ್ಯಾಯೋತ್ಸವದ ಸಂಭ್ರಮವೇ ಕಾಣುತ್ತಿದೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು 4ನೇ ಬಾರಿ ಕೃಷ್ಣನ ಪೂಜೆಯ ಸರ್ವಜ್ಞ ಪೀಠ ಅಲಂಕರಿಸುವ ಶುಭಗಳಿಗೆಗಾಗಿ ಉಡುಪಿಯ ಭಕ್ತರು ಕಾತುರರಾಗಿದ್ದಾರೆ.
ಗುರುವಾರ ಮುಂಜಾನೆ 5 ಗಂಟೆ 55 ನಿಮಿಷಕ್ಕೆ ಶ್ರಿ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಡಗೂಡಿ ಸರ್ವಜ್ಞ ಪೀಠಾರೋಹಣ ಮಾಡಿ, ಅಕ್ಷಯಪಾತ್ರೆಯನ್ನು ಸ್ವೀಕರಿಸಲಿದ್ದಾರೆ.ಇದರೊಂದಿಗೆ ಶ್ರೀಪಾದರು ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ, ಕೃಷ್ಣಮಠದ ಆಡಳಿತದ ಜವಾಬ್ದಾರಿ ಮತ್ತು ನಿತ್ಯ ಸಾವಿರಾರು ಮಂದಿಗೆ ಅನ್ನದಾನದ ಕರ್ತವ್ಯವನ್ನು ಹೊಂದಲಿದ್ದಾರೆ.
ಪ್ರಸ್ತುತ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸರ್ವಜ್ಞ ಪೀಠವನ್ನಲಂಕರಿಸಿದ್ದು, ಕಳೆದೆರಡು ವರ್ಷಗಳಿಂದ ಕೃಷ್ಣಮಠದಲ್ಲಿದ್ದುಕೊಂಡು ಕೃಷ್ಣನ 14 ಪೂಜೆಗಳನ್ನು ನಡೆಸುತ್ತಿದ್ದು, ಬುಧವಾರ ಸಂಜೆ ಅವರು ಪೂಜೆಯ ಅಧಿಕಾರವನ್ನು ಬಿಟ್ಟುಕೊಡಲಿದ್ದಾರೆ.ಒಂಭತ್ತು ಶತಮಾನಗಳ ಹಿಂದೆ, ಮಧ್ವಾಚಾರ್ಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಕೃಷ್ಣನ ಪೂಜೆಯ ಪರ್ಯಾಯವು ಇಲ್ಲಿನ ಅಷ್ಟ ಮಠಗಳ ನಡುವೆ ಸರದಿ ಪ್ರಕಾರ, ಅಲಿಖಿತ ಶಾಸ್ತ್ರಬದ್ಧವಾಗಿ ಯಾವುದೇ ವ್ಯತ್ಯಾಸ ಇಲ್ಲದೆ ನಡೆಯುತ್ತದೆ ಎನ್ನುವುದೇ ಅಚ್ಚರಿಯಾಗಿದೆ.
ಹೀಗಿರುತ್ತದೆ ಪರ್ಯಾಯ...:ಗುರುವಾರ ಬೆಳಗ್ಗೆ ಪರ್ಯಾಯ ಅಧಿಕಾರ ಸ್ವೀಕರಿಸುವ ಶ್ರೀಪಾದರು ಬುಧವಾರ ರಾತ್ರಿ ಉಡುಪಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ದಂಡತೀರ್ಥ ಎಂಬಲ್ಲಿನ ಕೆರೆಗೆ ತೆರಳಿ ಸ್ನಾನ ಮಾಡಿ, ಮಧ್ಯರಾತ್ರಿಯ ಹೊತ್ತಿಗೆ ಉಡುಪಿ ನಗರದ ಜೋಡುಕಟ್ಟೆ ಎಂಬಲ್ಲಿ ಬರುತ್ತಾರೆ.
ಅಲ್ಲಿಂದ ಪುತ್ತಿಗೆ ಮಠದ ಆರಾಧ್ಯ ವಿಠಲ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಮತ್ತು ಉಭಯ ಶ್ರೀಪಾದರನ್ನು ಮೇನೆಗಳಲ್ಲಿ ಕುಳ್ಳಿರಿಸಿ, ಭಕ್ತರು ಉತ್ಸಾಹದಿಂದ ಹೊತ್ತುಕೊಂಡು, ಭವ್ಯ ಮೆರವಣಿಗೆಯಲ್ಲಿ ಕೃಷ್ಣಮಠದ ರಥಬೀದಿಗೆ ಕರೆತರಲಾಗುತ್ತದೆ. ನಂತರ ಶ್ರೀಪಾದರು ಕೃಷ್ಣದರ್ಶನಗೈದು ಸರ್ವಜ್ಞ ಪೀಠವನ್ನೇರುತ್ತಾರೆ. ಇದು ಪೂಜೆಯ ಅಧಿಕಾರ ಗ್ರಹಣದ ಸಂಕೇತವಾದರೆ, ಅವರ ಕೈಗೆ ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರೆಯನ್ನು ನೀಡಲಾಗುತ್ತದೆ. ಇದು ಮುಂದಿನೆರಡು ವರ್ಷಗಳ ಕಾಲ ನಡೆಸಬೇಕಾದ ಅನ್ನದಾನದ ಸಂಕೇತವಾಗಿದೆ.ನಂತರ ಶ್ರೀಗಳು ರಾಜಾಂಗಣದಲ್ಲಿ ಭವ್ಯ ರಾಜಸಭೆ ದರ್ಬಾರನ್ನು ನಡೆಸುತ್ತಾರೆ. ಇದರಲ್ಲಿ ಸರ್ಕಾರದ ಪ್ರತಿನಿಧಿಗಳು, ಸಾಮಾಜಿಕ - ಧಾರ್ಮಿಕ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಸಾಧಕರಿಗೆ ಸನ್ಮಾನ, ಮಠದ ಅಧಿಕಾರಿಗಳ ಘೋಷಣೆ, ಮುಂದಿನೆರಡು ವರ್ಷಗಳ ಯೋಜನೆಗಳ ಘೋಷಣೆಗಳು ನಡೆಯುತ್ತವೆ.
ನಂತರ ಶ್ರೀಪಾದರು ಕೃಷ್ಣಮಠಕ್ಕೆ ತೆರಳಿ ಕೃಷ್ಣನ 14 ಪೂಜೆಗಳಲ್ಲೊಂದಾದ ನೈರ್ಮಲ್ಯ ಪೂಜೆಯನ್ನು ನೆರವೇರಿಸಿ ತಮ್ಮ ಪರ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸುತ್ತಾರೆ .ಬಾಕ್ಸ್ಇಂದು ಉಡುಪಿಯಲ್ಲಿ ರಾತ್ರಿಯೇ ಆಗುವುದಿಲ್ಲ...!
ಬುಧವಾರ ತಡರಾತ್ರಿ ನಡೆಯುವ ಪರ್ಯಾಯೋತ್ಸವ ಹೇಗಿರುತ್ತದೆ ಎಂದರೆ, ಉಡುಪಿ ನಗರದಲ್ಲಿ ರಾತ್ರಿಯೇ ಆಗುವುದಿಲ್ಲ. ನಗರದಾದ್ಯಂತ ಜನರ ಸಂದಣಿ ಇರುತ್ತದೆ, ಎಲ್ಲಾ ರಸ್ತೆಗಳು ದೀಪಾಲಂಕಾರದಿಂದ ಝಗಮಗಿಸುತ್ತಿರುತ್ತವೆ. ಮೆರವಣಿಗೆ ಸಾಗುವ ಮುಖ್ಯ ರಸ್ತೆಯುದ್ದಕ್ಕೂ ಪ್ರತಿ ಮನೆಯನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿರುತ್ತದೆ. ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಹಾಕಲಾದ ಭವ್ಯ ವೇದಿಕೆಗಳಲ್ಲಿ ಭಕ್ತಿಗೀತೆ, ಸಿನಿಮಾ ಹಾಡು, ನೃತ್ಯ, ಯಕ್ಷಗಾನ ಇತ್ಯಾದಿಗಳು ಆಯಾ ಆಸಕ್ತರಿಗೆ ಮನರಂಜನೆ ನೀಡುತ್ತವೆ.ಮಂತ್ರಿಮಾಗಧರು, ಗಣ್ಯರು, ಹತ್ತಿಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಇಪ್ಪತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು, ಹತ್ತಕ್ಕೂ ಹೆಚ್ಚು ಜನಪದ ತಂಡಗಳು, ಹುಲಿವೇಷಧಾರಿಗಳು, ಐದಾರು ತಂಡಗಳಲ್ಲಿ ಮಂಗಳವಾದ್ಯ, ಮಠದ ಬಿರುದುಬಾವಲಿಗಳು ಮೆರವಣಿಗೆಗೆ ಬೇರೆಯೇ ಖದರನ್ನು ನೀಡುತ್ತವೆ.