ಉಡುಪಿ: ಲೋಂಬಾರ್ಡ್ ಆಸ್ಪತ್ರೆಯಲ್ಲಿ ‘ಇನ್‌ಸ್ಫಯರ್‌ ಗ್ರೀನ್‌ ಹಾಸ್ಪಿಟಲ್‌’ ಯೋಜನೆ

KannadaprabhaNewsNetwork | Published : Jun 15, 2024 1:00 AM

ಸಾರಾಂಶ

ಇಡೀ ಆಸ್ಪತ್ರೆಗೆ ನವೀಕರಿಸಬಹುದಾದ ಇಂಧನ ಪೂರೈಸಲು ಅಳವಡಿಸಲಾಗಿರುವ ಸೌರ ಫಲಕಗಳನ್ನು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ವಂ.ಹೇಮಚಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಒಂದು ಶತಮಾನದಿಂದ ಉಡುಪಿ ಪರಿಸರದ ಆರೋಗ್ಯ ರಕ್ಷಣೆಯ ಮೂಲಾಧಾರವಾಗಿರುವ ಸಿಎಸ್ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಇದೀಗ ಇನ್‌ಸ್ಫಯರ್‌ ಗ್ರೀನ್ ಹಾಸ್ಪಿಟಲ್ ಯೋಜನೆಯನ್ನು ಪ್ರಾರಂಭಿಸಿ, ಹವಾಮಾನ ಬದಲಾವಣೆಯನ್ನು ನೀಗಿಸಲು ಒಂದು ಅಮೋಘ ಪ್ರಯೋಗವನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಯೋಜನೆಯ ಬಗ್ಗೆ ವಿವರಗಳನ್ನು ನೀಡಿದ ಅವರು, ಈ ಇನ್‌ಸ್ಫಯರ್‌ ಯೋಜನೆಗೆ ಜೂನ್‌ 15ರಂದು ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯ 101ನೇ ವಾರ್ಷಿಕೋತ್ಸವ ಸಂದರ್ಭ ಚಾಲನೆ ನೀಡಲಾಗುತ್ತಿದೆ. ಇಡೀ ಆಸ್ಪತ್ರೆಗೆ ನವೀಕರಿಸಬಹುದಾದ ಇಂಧನ ಪೂರೈಸಲು ಅಳವಡಿಸಲಾಗಿರುವ ಸೌರ ಫಲಕಗಳನ್ನು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ವಂ.ಹೇಮಚಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದ್, ನಾಗಾಲ್ಯಾಂಡ್‌ನ ಖ್ಯಾತ ಸಂಗೀತಗಾರ ನೀಸೆ ಮೆರುನೊ ಮತ್ತು ಸಿಎಸ್ಐ ಏರಿಯಾ ಚೇರ್ಮನ್ ವಂ. ಐವನ್ ಸೋನ್ಸ್ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಕೆಲವು ಆಸ್ಪತ್ರೆಗಳು ಸೌರಶಕ್ತಿ ಬಳಕೆ ಆರಂಭಿಸಿವೆ. ಲೋಂಬಾರ್ಡ್ ಆಸ್ಪತ್ರೆಯು ವ್ಯವಸ್ಥಿತ ಮತ್ತು ಸಮಗ್ರ ರೀತಿಯಲ್ಲಿ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಇನ್‌ಸ್ಫಯರ್‌ ಯೋಜನೆಯನ್ನು ಹಾಕಿಕೊಂಡಿದೆ. ಅದರಂತೆ ಈಗಾಗಲೇ ಇಂಗಾಲವನ್ನು ಹೊರಸೂಸುವಿಕೆಯ ಮಾಪನವನ್ನು ಅಳವಡಿಸಲಾಗಿದೆ. ಮುಂದೆ ಇಂಧನ ಮತ್ತು ನೀರಿನ ಬಳಕೆಯ ಆಡಿಟ್ ಪ್ರಾರಂಭಿಸಲಾಗುತ್ತಿದೆ. ಜೀವವೈವಿಧ್ಯತೆ ರಕ್ಷಿಸಲು ಕ್ಯಾಂಪಸ್ ಹಸಿರೀಕರಣ, ಸಮಗ್ರ ಜೈವಿಕ ಪದ್ಧತಿಯಲ್ಲಿ ತ್ಯಾಜ್ಯ ನಿರ್ವಹಣೆ, ವಾಯು ಮಾಲಿನ್ಯ ಕಡಿಮೆಗೊಳಿಸುವ ಕ್ರಮಗಳನ್ನು ಅಳವಡಿಕೆ, ಅಂತರ್ಜಲ ಪುನಶ್ಚೇತನಕ್ಕೆ ಕ್ರಮ, ಜೀವನಶೈಲಿ ಮತ್ತು ನಡವಳಿಕೆಯಲ್ಲಿ ಬದಲಾವಣೆಗೆ ಜನರನ್ನು ಪ್ರೇರೇಪಣೆ ಈ ಇನ್‌ಸ್ಫಯರ್‌ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡಾ.ಜತ್ತನ್ನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ದೀನಾ ಪ್ರಭಾಕರ್, ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್, ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿ ಪ್ರಭಾಕರ್ ಉಪಸ್ಥಿತರಿದ್ದರು.ಶತಮಾನ ಕಂಡ ಆಸ್ಪತ್ರೆ

ಲೋಂಬಾರ್ಡ್ ಆಸ್ಪತ್ರೆಯನ್ನು 1923ರ ಜೂನ್‌ 15ರಂದು ಸ್ವಿಜರ್‌ಲೆಂಡ್‌ನ ಡಾ.ಇವಾ ಲೋಂಬಾರ್ಡ್ ಅವರು ಸ್ಥಾಪಿಸಿದರು. ಈ ಆಸ್ಪತ್ರೆ ಕರಾವಳಿ ಕರ್ನಾಟಕದ ಹಳೆಯ ಆಸ್ಪತ್ರೆಗಳಲ್ಲೊಂದಾಗಿದೆ. ಕೇವಲ 6 ಹಾಸಿಗೆಯಿಂದ ಆರಂಭವಾದ ಆಸ್ಪತ್ರೆಯು ಇಂದು 125 ಹಾಸಿಗೆಗಳನ್ನು ಮತ್ತು ಪ್ರಮುಖ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ.

ಪ್ರಸ್ತುತ ಆಸ್ಪತ್ರೆಯಲ್ಲಿ 350 ವಿದ್ಯಾರ್ಥಿಗಳು ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನ ಕೋರ್ಸ್‌ಗಳ 5 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಜೊತೆಗೆ ಶಿಶುವಿಹಾರ, ವೃದ್ಧರ ಆರೈಕಾ ಸೇವಾ ಕೇಂದ್ರ ಕರುಣಾಲಯ, ಸಹಜೀವನ ವೃದ್ಧಾಶ್ರಮ, ಉಪಶಮನ ಕೇಂದ್ರ ವಾತ್ಸಲ್ಯಗಳನ್ನೂ ನಡೆಸುತ್ತಿದೆ. ಜಮಿಯತ್ ಉಲ್ ಫಲಾಹ್ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಡೆಸುತ್ತಿದೆ.

Share this article