ಉಡುಪಿ: ರಾಜ್ಯಪಾಲರ ನಡೆ ವಿರುದ್ಧ ಸಹಬಾಳ್ವೆ ಪ್ರತಿಭಟನೆ

KannadaprabhaNewsNetwork | Published : Aug 24, 2024 1:24 AM

ಸಾರಾಂಶ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.ಸಹಬಾಳ್ವೆಯ ಸಂಚಾಲಕ ಪ್ರೊ. ಫಣಿರಾಜ್ ಮಾತನಾಡಿ, ಈ ಪ್ರತಿಭಟನೆಯು ಆಡಳಿತ ಸರ್ಕಾರದ ಪರವಾಗಿ ಅಲ್ಲ, ಬದಲಾಗಿ ಪ್ರಜಾಪ್ರಭುತ್ವವನ್ನು ಅಸ್ಥಿರವಾಗಿಸಲು ನಡೆಯುತ್ತಿರುವ ಹುನ್ನಾರದ ವಿರುದ್ಧವಾಗಿದೆ ಎಂದರು.2020ರ ಮುಡಾ ಹಗರಣದ ಕುರಿತು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯೇ ಆಗಿರಲಿಲ್ಲ. ಆಗ ಬಿಜೆಪಿ ಅಧಿಕಾರದಲ್ಲಿತ್ತು. ಆದರೂ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವುದು ಹಾಸ್ಯಾಸ್ಪದ. ಯಾವುದೇ ಆಧಾರ ಇಲ್ಲದೇ ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುತ್ತಿವೆ ಎಂದವರು ಹೇಳಿದರು.ಈ ಹಿಂದೆ ಕೂಡ ರಾಜ್ಯಪಾಲರು ವಿವೇಚನೆ ಬಳಸಿ ನಿರ್ಧಾರ ಕೈಗೊಂಡ ಉದಾಹರಣೆಗಳಿವೆ. ಆದರೆ ಸ್ಪಷ್ಟವಾದ ಆಧಾರ, ಕಾನೂನಾತ್ಮಕ ಪ್ರಕ್ರಿಯೆ ಬಳಸಿ ನಿರ್ಣಯ ಕೈಗೊಳ್ಳುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಹಾಗೆ ನಡೆದಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದೆ ಎಂದವರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಫಾ.ವಿಲಿಯಂ ಮಾರ್ಟಿಸ್, ಮಂಜುನಾಥ್ ಗಿಳಿಯಾರ್, ಬಾಲಕೃಷ್ಣ ಶೆಟ್ಟಿ, ಇದ್ರಿಸ್ ಹೂಡೆ ಸೇರಿದಂತೆ ಹಲವಾರು ಮಂದಿ ಮಾತನಾಡಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ವಿವಿಧ ಸಂಘಟನೆಗಳ ಯಾಸೀನ್ ಮಲ್ಪೆ, ಸುಂದರ್ ಮಾಸ್ತರ್, ಅಶ್ಫಾಕ್ ಕಾರ್ಕಳ, ಇಸ್ಮಾಯಿಲ್ ಕಿದೆವರ್, ಜಾಬೀರ್ ಖತೀಬ್, ಮುಹಮ್ಮದ್ ಗೌಸ್ ಕಾರ್ಕಳ, ಹುಸೇನ್ ಕೋಡಿಬೆಂಗ್ರೆ ಮತ್ತು ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೋ, ಪ್ರಸಾದ್ ಕಾಂಚನ್, ಪ್ರಶಾಂತ್ ಜತ್ತನ್, ಅಝೀಜ್ ಉದ್ಯಾವರ, ಉದ್ಯಾವರ ನಾಗೇಶ ಉಪಸ್ಥಿತರಿದ್ದರು.

Share this article