ಉಡುಪಿ: ಜಿಲ್ಲೆಯಲ್ಲಿ ಮಳೆ ಇಳಿಮುಖ

KannadaprabhaNewsNetwork | Published : Jul 10, 2024 12:35 AM

ಸಾರಾಂಶ

ಭಾರಿ ಮಳೆಯಿಂದ ಜಿಲ್ಲೆಯ ತಗ್ಗುಪ್ರದೇಶಗಳಲ್ಲಿ ತುಂಬಿಕೊಂಡಿದ್ದ ಪ್ರವಾಹ ಇಳಿದಿದ್ದು, ಪರಿಸ್ಥಿತಿ ಸುಸ್ಥಿತಿಗೆ ಬಂದಿದೆ. ಆದರೂ ಹವಾಮಾನ ಇಲಾಖೆ ಜು.11ರ ವರೆಗೆ ಉತ್ತಮ ಮಳೆಯಾಗುವ ಬಗ್ಗೆ ಹಳದಿ ಅಲರ್ಟ್ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಎರಡು ದಿನಗಳಲ್ಲಿ ಸುರಿದ ಭಾರಿ ಮಳೆ ಮಂಗಳವಾರ ಇಳಿಮುಖವಾಗಿತ್ತು. ಇದರಿಂದ ಪ್ರವಾಸ ಸ್ಥಿತಿಯೂ ಇಳಿದಿದೆ. ಹವಾಮಾನ ಇಲಾಖೆಯು ಭಾರಿ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಸೂಚನೆಯಂತೆ ಜಿಲ್ಲಾಡಳಿದ ಮಂಗಳವಾರ ಉಡುಪಿ ಜಿಲ್ಲೆಯ ಎಲ್ಲ ಶಾಲೆ ಮತ್ತು ಪಪೂ ಕಾಲೇಜುಗಳಿಗೆ ರಜೆ ನೀಡಿತ್ತು, ಆದರೆ ಮಳೆ ಮಾತ್ರ ಕೈಕೊಟ್ಟಿತು.

ಜಿಲ್ಲೆಯಲ್ಲಿ ಸೋಮವಾರ ಹಗಲಿಡೀ ಸುರಿದ ಮಳೆ, ಸಂಜೆಯಾಗುತ್ತಿದ್ದಂತೆ ಕಡಿಮೆಯಾಯಿತು. ರಾತ್ರಿಯಂತೂ ಮಳೆ ಇರಲಿಲ್ಲ, ಮಂಗಳವಾರ ದಿನವಿಡೀ ಬಿಸಿಲು ಕಾಣಿಸಿಕೊಂಡಿತು. ಸಂಜೆ ಲಘುವಾದ ಮಳೆಯಾಗಿದೆ.

ಸೋಮವಾರ ಸುರಿದ ಭಾರಿ ಮಳೆಯಿಂದ ಜಿಲ್ಲೆಯ ತಗ್ಗುಪ್ರದೇಶಗಳಲ್ಲಿ ತುಂಬಿಕೊಂಡಿದ್ದ ಪ್ರವಾಹ ಇಳಿದಿದ್ದು, ಪರಿಸ್ಥಿತಿ ಸುಸ್ಥಿತಿಗೆ ಬಂದಿದೆ. ಆದರೂ ಹವಾಮಾನ ಇಲಾಖೆ ಜು.11ರ ವರೆಗೆ ಉತ್ತಮ ಮಳೆಯಾಗುವ ಬಗ್ಗೆ ಹಳದಿ ಅಲರ್ಟ್ ಘೋಷಿಸಿದೆ.

* 8 ಮನೆ, 3 ಕೊಟ್ಟಿಗೆಗೆ ಹಾನಿ

ಸೋಮವಾರದ ಮಳೆಗೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಗುಲಾಬಿ ಅವರ ಮನೆಗೆ 50,000 ರು., ಕೋಟೇಶ್ವರ ಗ್ರಾಮದ ರಾಜು ನಾಯ್ಕ ಅವರ ಮನೆಯ ಮೇಲೆ ಮರಬಿದ್ದು 10,000 ರು., ತಲ್ಲೂರು ಗ್ರಾಮದ ಉದಯ ಚಿಕ್ಕ ಅವರ ಮನೆಗೆ 60,000 ರು., ಕಾರ್ಕಳ ತಾಲೂಕಿನ ಬೋಳ ಗ್ರಾಮದ ಗೋಪಿ ಅವರ ಮನೆಗೆ 15,000 ರು., ಹಿರ್ಗಾನ ಗ್ರಾಮದ ಸುಬ್ರಾಯ ಪ್ರಭು ಅವರ ಮನೆಗೆ 50,000 ರು., ಮುಡಾರು ಗ್ರಾಮದ ಸುಜಾತ ಶೆಟ್ಟಿ ಅವರ ಮನೆಗೆ 50,000 ರು., ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಸುಬ್ಬಿ ಅವರ ಮನೆಗೆ 30,000 ರು., ಉಡುಪಿ ತಾಲೂಕಿನ ಕೊರಂಗ್ರಪಾಡಿಯ ಮಧುಕರ ಬೆಲ್ಚಡ ಅವರ ಮನೆಯ ಮೇಲೆ ಮರ ಬಿದ್ದು15,000 ರು. ನಷ್ಟ ಸಂಭವಿಸಿದೆ.

ಅಲ್ಲದೇ ಕುಂದಾಪುರ ಗ್ರಾಮದ ಹಾರ್ದಳ್ಳಿ, ಮಂಡಳ್ಳಿ, ಗ್ರಾಮದ ಚಂದ್ರಕಲಾ ಅವರ ಭತ್ತದ ಗದ್ದೆಗೆ ನೆರೆ ನೀರು ನುಗ್ಗಿ ಹಾನಿ20,000 ರು., ಕಾವ್ರಾಡಿ ಗ್ರಾಮದ ದಿನೇಶ್ ನಾಯಕ್ ಅವರ ಜಾನುವಾರು ಕೊಟ್ಟಿಗೆ 10,000 ರು., ಕೆರಾಡಿ ಗ್ರಾಮದ ಗಿರಿಜಮ್ಮ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆ 15,000 ರು., ಗುಜ್ಜಾಡಿ ಗ್ರಾಮದಸೀತಾರಾಮ ಆಚಾರ್ಯ ಅವರ ಜಾನುವಾರು ಕೊಟ್ಟಿಗೆ 15,000 ರು. ಹಾನಿಯಾಗಿದೆ.

ಜಿಲ್ಲೆಯಲ್ಲಿ ಮಂಗ‍ಳವಾರ ಮುಂಜಾನ ವರೆಗೆ 24 ಗಂಟೆಗಳಲ್ಲಿ ಸರಾಸರಿ 66.70 ಮಿ.ಮೀ. ಮಳೆಯಾಗಿತ್ತು. ತಾಲೂಕುವಾರು ಕಾರ್ಕಳ 78.20, ಕುಂದಾಪುರ 53.80, ಉಡುಪಿ 83.10, ಬೈಂದೂರು 55.10, ಬ್ರಹ್ಮಾವರ 74.40, ಕಾಪು 98.80, ಹೆಬ್ರಿ 55.10 ಮಿ.ಮೀ. ಮಳೆ ಆಗಿರುತ್ತದೆ.

Share this article